ಮಂಗಳೂರು, ಜು. 31: ನಗರದಲ್ಲಿ ಶ್ರೀಮಂತ ವ್ಯಕ್ತಿಗಳ ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಐದು ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಪೊಲೀಸರು ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ವೆಲೆನ್ಸಿಯಾ ಸೈಂಟ್ ಜೊಸೆಫ್ ನಗರಕ್ಕೆ ಹೋಗುವ ದ್ವಾರದ ಬಳಿಯಲ್ಲಿ ಸ್ಕಾರ್ಪಿಯೊ ವಾಹನದಲ್ಲಿ ದುಷ್ಕೃತ್ಯ ನಡೆಸಲು ತಿರುಗಾಡುತ್ತಿದ್ದಾರೆ ಎಂಬ ಬಗ್ಗೆ ಬಂದ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಮಂಗಳೂರು ನಗರದ ಸಿಸಿಬಿ ಪೊಲೀಸರು ಕಾರು ಸಹಿತ ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಜೆಪ್ಪು ಸೈಂಟ್ ಜೋಸೆಫ್ ನಗರ ಕಂಪೌಂಡ್ ನಿವಾಸಿ ಸಂತೋಷ್ ಕುಮಾರ್(19), ಕಂಕನಾಡಿಯ ಎಕ್ಕೂರು ನಡಿಗುತ್ತು ನಿವಾಸಿ ಗೌತಮ್ (19), ಪಾಂಡೇಶ್ವರದ ಸುಭಾಷ್ ನಗರ ಒಂದನೆ ಕ್ರಾಸ್ ರಸ್ತೆ ನಿವಾಸಿ ನಿತಿನ್ ಕುಮಾರ್(24), ಪಡೀಲ್ನ ಗಾಣದಗುಡ್ಡೆ ಪರಂಜ್ಯೋತಿ ಭಜನಾ ಮಂದಿರ ಬಳಿಯ ನಿವಾಸಿಗಳಾದ ಧೀರಜ್ (24) ಮತ್ತು ಧನರಾಜ್ (19) ಎಂದು ಗುರುತಿಸಲಾಗಿದೆ.
ಆರೋಪಿಗಳು ತಲವಾರು, ಕಬ್ಬಿಣದ ರಾಡ್ ಗಳನ್ನು ಹೊಂದಿಕೊಂಡು ವೆಲೆನ್ಸಿಯಾ ಪರಿಸರದಲ್ಲಿ ಶ್ರೀಮಂತ ವ್ಯಕ್ತಿಗಳನ್ನು ದರೋಡೆ ಮಾಡಲು ಸಂಚು ರೂಪಿಸಿ ತಿರುಗಾಡುತ್ತಿದ್ದರು. ಆರೋಪಿತರುಗಳಿಂದ ಒಂದು ಸ್ಕಾರ್ಪಿಯೋ ಕಾರು, 2 ತಲವಾರು, 1 ಕಬ್ಬಿಣದ ರಾಡ್ ಹಾಗೂ 3 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಸಂತೋಷ್ ಕುಮಾರ್ ಎಂಬಾತನು ಈ ಹಿಂದೆ 2014 ನೇ ಇಸವಿಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ಫರಾಜ್, ಶಾರೂಕ್, ಅಫೀಸ್ ಎಂಬವರ ಜೊತೆ ಸೇರಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ದರೋಡೆ ಮಾಡಿದ್ದನು. ಈ ಪ್ರಕರಣದಲ್ಲಿ ದಸ್ತಗಿರಿಯಾಗಿ 4 ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದನು. ಮೇಲ್ಕಂಡ ಆರೋಪಿಗಳನ್ನು ಹಾಗೂ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಆರೋಪಿಗಳ ಸಂಪೂರ್ಣ ವಿವರ :
ಸಂತೋಷ್ ಕುಮಾರ್, ಪ್ರಾಯ(19), ತಂದೆ: ಜಗದೀಶ್ ಸಾಲ್ಯಾನ್, ವಾಸ: ಸೈಂಟ್ ಜೋಸೆಫ್ ನಗರ ಕಂಪೌಂಡ್, ಜೆಪ್ಪು, ಮಂಗಳೂರು.
ಗೌತಮ್, ಪ್ರಾಯ(19), ತಂದೆ: ಗಣೇಶ್, ವಾಸ: ಎಕ್ಕೂರು ನಡಿಗುತ್ತು ಕಂಪೌಂಡ್, ಕಂಕನಾಡಿ ಅಂಚೆ, ಮಂಗಳೂರು.
ನಿತಿನ್ ಕುಮಾರ್, ಪ್ರಾಯ(24), ತಂದೆ: ಜಯರಾಮ ಶೆಟ್ಟಿಗಾರ್, ವಾಸ: ಸುಭಾಷ್ ನಗರ 1 ನೇ ಕ್ರಾಸ್ ರಸ್ತೆ, ಪಾಂಡೇಶ್ವರ, ಮಂಗಳೂರು
ಧೀರಜ್, ಪ್ರಾಯ(24), ತಂದೆ: ಮಾಧವ, ವಾಸ: ಗಾಣದಗುಡ್ಡೆ ಮನೆ, ಪರಂಜ್ಯೋತಿ ಭಜನಾ ಮಂದಿರದ ಬಳಿ, ಪಡೀಲ್ ಅಂಚೆ, ಮಂಗಳೂರು.
ಧನರಾಜ್, ಪ್ರಾಯ(19), ತಂದೆ: ರಮೇಶ್, ವಾಸ: ಗಾಣದಗುಡ್ಡೆ ಮನೆ, ಪರಂಜ್ಯೋತಿ ಭಜನಾ ಮಂದಿರದ ಬಳಿ, ಪಡೀಲ್ ಅಂಚೆ, ಮಂಗಳೂರು.
ನಗರ ಪೊಲೀಸ್ ಕಮೀಷನರ್ ಎಸ್.ಮುರುಗನ್ರ ಆದೇಶದಂತೆ ಡಿ.ಸಿ.ಪಿ. ಕೆ.ಎಂ. ಶಾಂತರಾಜು ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ, ಪಿಎಸ್ಸೈ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

