ಕನ್ನಡ ವಾರ್ತೆಗಳು

ಜ್ಯೋತಿ ಕೋ-ಆಪ್ ಕ್ರೆಡಿಟ್ ಸೊಸೈಟಿಯ34ನೇ ವಾರ್ಷಿಕ ಮಹಾಸಭೆ.

Pinterest LinkedIn Tumblr

mumbai_bank_photo_1
ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್

ಮುಂಬಯಿ,ಜುಲೈ.30:  ಮುಂಬಯಿ ಮಹಾನಗರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಗಳಲ್ಲೊಂದಾದ ಕುಲಾಲ ಸಂಘ-ಮುಂಬಯಿಯ ಸಂಚಾಲಕತ್ವದಲ್ಲಿರುವ ಜ್ಯೋತಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 34ನೇ ವಾರ್ಷಿಕ ಮಹಾಸಭೆಯು ದಿನಾಂಕ26-7-2015 ನೇ ಭಾನುವಾರದಂದು ಸಾಯಂ. ಘಂಟೆ 4.30 ಕ್ಕೆ ಸರಿಯಾಗಿ ಮುಂಬಯಿ ಮಾಟುಂಗ(ಪ)ದಲ್ಲಿನ ಕರ್ನಾಟಕ ಸಂಘದ ಸಮರಸ ಭವನದಲ್ಲಿ ಸಂಸ್ಥೆಯ ಸದಸ್ಯರ ಕೂಡುವಿಕೆಯಲ್ಲಿ ಜರಗಿತು.

ಕಾರ್ಯದರ್ಶಿ ದೇವದಾಸ್ ಕುಲಾಲ್ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರನ್ನು ವೇದಿಕೆಗೆ ಅಹ್ವಾನಿಸಿದ ಬಳಿಕ ಕುಲಾಲ ಸಂಘ-ಮುಂಬಯಿಯ ಗೌರವ ಅಧ್ಯಕ್ಷರಾದ ಪಿ. ಕೆ. ಸಾಲ್ಯಾನ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಜ್ಯೋತಿ ಬೆಳಗಿಸುವುದರೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅದ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ನೆರೆದ ಸದಸ್ಯರನ್ನೊಳಗೊಂಡಂತೆ ಸರ್ವರನ್ನು ಮಹಾಸಭೆಗೆ ಹಾರ್ದಿಕವಾಗಿ ಸ್ವಾಗತಿಸಿದರು.

mumbai_bank_photo_3 mumbai_bank_photo_4 mumbai_bank_photo_2

ತರುವಾಯ ಕಾರ್ಯದರ್ಶಿಯವರು ಸಭೆಯ ಕಾರ್ಯಸೂಚಿಯಲ್ಲಿ ನಮೂದಿಸಿದಂತೆ ಅನುಕ್ರಮವಾಗಿ (1) ಜ್ಯೋತಿ ಕ್ರೆಡಿಟ್ ಸೊಸೈಟಿಯ 33ನೇ ವಾರ್ಷಿಕ ಮಹಾಸಬೆಯ ನಡಾವಳಿ (2) ಸೊಸೈಟಿಯ ೩೪ನೇ ವಾರ್ಷಿಕ ವರದಿ (3) ತಾ. 31-03-2015ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ವಾರ್ಷಿಕ ಆಯ-ವ್ಯಯ ಲೆಕ್ಕಪತ್ರ ಮತ್ತು ಸ್ಥಿರ-ಚರ ಸೊತ್ತುಗಳು-ಬಾಧ್ಯತೆಗಳ ವಿವರ (4) 2014-15ರ ವಾರ್ಷಿಕ ಲಾಭದ ವಿತರಣೆಯ ಸೂಚಿ ಹಾಗೂ (5)2015-16ರ ವರ್ಷಕ್ಕೆ ಸೊಸೈಟಿಯ ವಾರ್ಷಿಕ ಆದಾಯ-ಖರ್ಚುಗಳ ಅಂದಾಜು ಪಟ್ಟಿ ಇವುಗಳನ್ನು ಸಭೆಯ ಮುಂದೆ ಮಂಡಿಸಿದ ಬಳಿಕ ಸದಸ್ಯರ ಸಲಹೆ, ಸೂಚನೆ, ಸ್ವಷ್ಟೀಕರಣಗಳ ಬಳಿಕ ಅವುಗಳನ್ನು ಸರ್ವಾನುಮತದಿಂದ ಸ್ವೀಕರಿಸಲಾಯಿತು.

ಕಾರ್ಯಕಾರಿ ಸಮಿತಿಯ ಶಿಫಾರಸ್ಸಿನಂತೆ ಸರ್ವ ಸದಸ್ಯರ ಅನುಮೋದನೆಯೊಂದಿಗೆ 2014-2015ದ ನಿವ್ವಳ ಲಾಭದಲ್ಲಿ ಷೇರು ಪಾಲುದಾರರಿಗೆ 14% ದಿವಿಡೆಂಡ್ ಘೋಷಿಸಲಾಯಿತು. ಇದೇ ಸಂದರ್ಭದಲ್ಲಿ 2015-16ನೇ ವರ್ಷದ ಸಾಲಿಗೆ ಆಂತರಿಕ ಲೆಕ್ಕ ಪರಿಶೋಧಕರಾಗಿ ಡಿ. ಎನ್. ಶೆಟ್ಟಿ & ಕಂಪೆನಿ ಹಾಗೂ ಶಾಸನಬದ್ಧ  ಲೆಕ್ಕ ಪರಿಶೋಧಕರಾಗಿ ರಾವ್ & ಕಂಪೆನಿ ಇವರು ಸಭೆಯ ಅನುಮತಿಯೊಂದಿಗೆ ನೇಮಕಗೊಂಡರು.

ಸಭೆಯ ಕಾರ್ಯಕಲಾಪಗಳ ಸಂದರ್ಭದಲ್ಲಿ ಕಾರ್ಯದರ್ಶಿಯವರು ಪ್ರಾಧಿಕಾರದಿಂದ ನೇಮಕಗೊಂಡ ಚುನಾವಣಾಧಿಕಾರಿ ಪಿ. ಎ. ಕೋಚೆಯವರ ಉಸ್ತುವಾರಿಯಲ್ಲಿ ಇತ್ತೀಚೆಗೆ2014-2015ರಿಂದ 2019-2020 ರ ಅವಧಿಗೆ ಕಾರ್ಯಕಾರಿ ಸಮಿತಿಗೆ ಜರಗಿದ ಚುನಾವಣೆಯಲ್ಲಿ ಆಯ್ಕೆಗೊಂಡ ಸದಸ್ಯರ ವಿವರಗಳನ್ನು ಸಭೆಗೆ ನೀಡಿದರು.

ಮಹಾಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್ ವಹಿಸಿದ್ದು ವೇದಿಕೆಯಲ್ಲಿ ಉಪಕಾರ್ಯಾಧ್ಯಕ್ಷ ಕರುಣಾಕರ್ ಜೆ. ಮೂಲ್ಯ, ಕಾರ್ಯದರ್ಶಿ ಪಿ. ದೇವದಾಸ್ ಎಲ್. ಕುಲಾಲ್, ಕೋಶಾಧಿಕಾರಿ ನಾರಾಯಣ ನೆತ್ರಕೆರೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಹೆಚ್. ಎಂ. ಥೋರಟ್, ಪಿ. ಶೇಖರ್ ಮೂಲ್ಯ, ಡೊಂಬಯ ಐ. ಮೂಲ್ಯ, ಚಂದು ಕೆ. ಮೂಲ್ಯ, ಬಾಬು ಜಿ. ಅಂಚನ್, ಗಿರೀಶ್ ವಿ. ಕರ್ಕೇರ, ದೇವದಾಸ್ ಎಂ. ಬಂಜನ್ ಮತ್ತು ಭಾರತಿ ಪಿ. ಅರ್ಕ್ಯನ್ ಉಪಸ್ಥಿತರಿದ್ದರು.

ಅಂತೆಯೇ ಸಭಾ ಕಾರ್ಯಕಲಾಪಗಳು ಸಮರ್ಪಕವಾಗಿ ನಿಭಾಯಿಸಲ್ಪಟ್ಟ ಬಳಿಕ ಸದಸ್ಯರ ಭಾಷಣದಲ್ಲಿ ರಘು ಬಿ. ಮೂಲ್ಯ, ನ್ಯಾಯವಾದಿ ಉಮಾನಾಥ ಮೂಲ್ಯ, ಯು. ಲಕ್ಷ್ಮಣ ಸುವರ್ಣ, ಜಿ. ಎಸ್. ನಾಯಕ್, ಜಯ ಅಂಚನ್, ಶಂಕರ್ ವೈ. ಮೂಲ್ಯ, ಲಕ್ಷ್ಮಣ ಸಿ. ಮೂಲ್ಯ, ಸಂಜಯ ಆರ್. ಕುಂದರ್, ಶೇಷಪ್ಪ ಮೂಲ್ಯ, ಮನೋಜ್ ಸಾಲ್ಯಾನ್ ಹಾಗೂ ಚಂಪಾವತಿ ಬಿ. ಸಾಲ್ಯಾನ್ ಸಮಯೋಚಿತವಾಗಿ ಮಾತನಾಡಿ ಸೊಸೈಟಿಯ ವಾರ್ಷಿಕ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹಲವಾರು ಅತ್ಯಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಜ್ಯೋತಿ ಸೊಸೈಟಿಯ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರಿದರು.

ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್. ಎಂ. ಥೋರಟ್ ತನ್ನ ಭಾಷಣದಲ್ಲಿ ಸೊಸೈಟಿಯ ಕಾರ್ಯವೈಖರಿಯ ಬಗ್ಗೆ ವಿಶ್ಲೇಷಣೆ ನೀಡಿ ಸಂಸ್ಥೆಯ ಸರ್ವಾಂಗೀಣ ಪ್ರಗತಿಯಲ್ಲಿ ಸೊಸೈಟಿಯ ಎಲ್ಲಾ ಶಾಖೆಗಳ ಸಿಬ್ಬಂದಿವರ್ಗ, ದೈನಂದಿನ ಠೇವಣಿ ಸಂಗ್ರಾಹಕ ಏಜೆಂಟರು, ಸದಸ್ಯರು ಹಾಗೂ ಗ್ರಾಹಕರು ಮಹತ್ತರ ಪಾತ್ರ ವಹಿಸಿರುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಗಿರೀಶ್ ಬಿ. ಸಾಲ್ಯಾನ್ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಮೊದಲ ಬಾರಿಗೆ ತಾನು ಕಾರ್ಯಾಧ್ಯಕ್ಷನಾಗಿ ಆಯ್ಕೆ ಗೊಂಡಿರುವುದು ನೀವೆಲ್ಲರೂ ತನ್ನ ಮೇಲೆ ಇಟ್ಟಿರುವ ಪ್ರೀತಿ ಹಾಗೂ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ. ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿಯನ್ನು ಸಾಧಿಸಿಕೊಂಡು ಬರುತ್ತಿರುವ ಸೊಸೈಟಿಯು ೩೪ ಸಂವತ್ಸರಗಳನ್ನು ಪೂರೈಸಿದ್ದು ಅದರ ಯಶೋಗಾಥೆ ಹೀಗೆ ನಿರಂತರವಾಗಿ ಮುಂದುವರಿಯುತ್ತಿರಲಿ ಎಂದು ಹಾರೈಸಿದರು.

ಯಾವುದೇ ಸಂಘ ಸಂಸ್ಥೆಯೂ ಯಾವುದೇ ಎಗ್ಗಿಲ್ಲದೆ ನಿರಾತಂಕವಾಗಿ ನಿರಂತರ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಿತ್ತಾ ಇರಬೇಕೆಂದರೆ ಅದರ ತಳಪಾಯ ಘನವಾಗಿರಬೇಕು, ಭದ್ರವಾಗಿರಬೇಕು, ಜ್ಯೋತಿಯ ಅಡಿಗಲ್ಲು ಸಾಕಷ್ಟು ದೃಢವಾಗಿದೆ, ಆದರೆ ಅದನ್ನು ಇನ್ನಷ್ಟು ಬಲಪಡಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಅವರು ಕರೆಯಿತ್ತರು. ಇಂದು ಮಾತನಾಡಿದ ಸದಸ್ಯರೆಲ್ಲರೂ ಸೊಸೈಟಿಯ ವರದಿವರ್ಷದ ಬ್ಯಾಲನ್ಸ್ ಶೀಟ್‌ನ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ, ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಈ ವರ್ಷ ಉತ್ತಮ ನಿವ್ವಳ ಲಾಭ ಗಳಿಸಿದ ಸೊಸೈಟಿಯ ಲಾಭವನ್ನು ಮುಂಬರುವ ೫ ವರ್ಷಗಳಲ್ಲಿ ಇಮ್ಮಡಿ, ಮುಮ್ಮಡಿಗೊಳಿಸುವಲ್ಲಿ ನಾವೆಲ್ಲರೂ ಪಣತೊಡೋಣ ಎಂದು ಕರೆಯಿತ್ತರು. ಮುಕ್ತಾಯದಲ್ಲಿ ಅಧ್ಯಕ್ಷರು ಈ ವರ್ಷ ದಾಖಲೆ ಹಾಜರಾತಿಯೊಂದಿಗೆ ಮಾಹಾಸಭೆಯಲ್ಲಿ ಪಾಲ್ಗೊಂಡ ಸದಸ್ಯರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಮಹಾಸಭೆಯಲ್ಲಿ ಶೇರು ಪಾಲುದಾರರ ಮಕ್ಕಳಲ್ಲಿ ಹೆಚ್.ಎಸ್.ಸಿ/ಎಸ್.ಎಸ್.ಸಿ ಪರೀಕ್ಷೆಯಲ್ಲಿ 75% ಅಥವಾ ಅಧಿಕ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮತ್ತು ಪದವಿ/ಸ್ನಾತಕೋತ್ತರ/ಇಂಜಿನಿಯರಿಂಗ್/ಕಾನೂನು ಇತ್ಯಾದಿ ಪರೀಕ್ಷೆಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನಗದು ಹಣ ನೀಡಿ ಪುರಸ್ಕರಿಸಲಾಯಿತು.

ಮಹಾಸಭೆಯಲ್ಲಿ ಗೋಪಾಲ್ ಕಾರ್ಕಳ್, ವಾಮನ್ ಕರ್ಕೇರ, ಕೃಷ್ಣ ಬಂಜನ್, ರಘು ಮೂಲ್ಯ ಪಿ, ಅರುಣ್ ಡಿ. ಬಂಗೇರ, ನಾರಾಯಣ ಬಿ. ಪೂಜಾರಿ, ಸದಾನಂದ್ ಸಾಲ್ಯಾನ್, ಜಯರಾಜ್ ಪಿ. ಸಾಲ್ಯಾನ್, ಸುಂದರ್ ಮೂಲ್ಯ, ಆನಂದ್ ಬಿ. ಮೂಲ್ಯ, ರಘುನಾಥ್ ಕರ್ಕೇರ, ರಘು ಆರ್. ಮೂಲ್ಯ, ವಾಸು ಬಂಗೇರ, ಸಂಜೀವ ಬಂಗೇರ, ಕೃಷ್ಣ ಎಸ್. ಮೂಲ್ಯ, ಯಶೋದ ಬಿ. ಸಾಲ್ಯಾನ್, ಸುಮತಿ ಬಂಜನ್, ಮಮತ ಗುಜರನ್, ಮಮತ ಜಿ. ಸಾಲ್ಯಾನ್‌ರನ್ನೊಳಗೊಂಡಂತೆ ಸೊಸೈಟಿಯ ಷೇರು ಪಾಲುದಾರರು ಉಪಸ್ಥಿತರಿದ್ದರು.

ಕೊನೆಯಲ್ಲಿ ಕೋಶಾಧಿಕಾರಿ ನಾರಾಯಣ ನೆತ್ರಕೆರೆ ವಂದನಾರ್ಪಣೆಗೈದರು. ಸಭಾ ಕಾರ್ಯಕ್ರಮವನ್ನು ಕಾರ್ಯದರ್ಶಿ ದೇವದಾಸ್ ಕುಲಾಲ್ ನಿರೂಪಿಸಿದರು.

Write A Comment