ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿದ ತಪ್ಪಿಗೆ ಯುವತಿಯೊಬ್ಬಳು ತನ್ನ ತಂದೆಯಿಂದಲೇ ಕೊಲೆಯಾದ ಭೀಕರ ಘಟನೆ ರಾಯ್ ಬರೇಲಿಯಲ್ಲಿ ನಡೆದಿದೆ.
ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ 23 ವರ್ಷದ ರಾಜ ಬಾಲಾ ಎಂಬಾಕೆ ಪೆಟ್ರೋಲ್ ಪಂಪ್ ಒಂದರಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಸಂದೀಪ್ ಶರ್ಮಾ ಎಂಬ ಬೇರೆ ಜಾತಿಯ ಯುವಕನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಅಲ್ಲದೇ ಇವರಿಬ್ಬರೂ ಮದುವೆಯಾಗಲೂ ಸಹ ನಿರ್ಧರಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ಆಕೆಯ ತಂದೆ ಬಹೋರನ್ ಲಾಲ್ ಜಾತವ್ ಎಂಬಾತ ಆಕ್ರೋಶಗೊಂಡು ಆಕೆಗೆ ಗುಂಡು ಹೊಡೆದು ಹತ್ಯೆ ಮಾಡಿರುವುದಲ್ಲದೇ ಅಂತ್ಯಸಂಸ್ಕಾರವನ್ನೂ ಸಹ ಮಾಡಿ, ಆಕೆಯ ಚಿತಾಭಸ್ಮವನ್ನು ರಾಮಗಂಗಾದಲ್ಲಿ ತೇಲಿ ಬಿಟ್ಟು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಈ ಕುರಿತು ಈಗಾಗಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.