ಜಾರ್ಖಂಡ್: ಸೋಮವಾರ ಸಂಜೆ ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಶಿಲ್ಲಾಂಗ್ ನಲ್ಲಿ ನಿಧನರಾಗಿದ್ದು, ಒಂದು ವಾರದ ಮುಂಚೆಯೇ ಶಿಕ್ಷಣ ಸಚಿವರೊಬ್ಬರು ಕಲಾಂ ಅವರ ಭಾವಚಿತ್ರಕ್ಕೆ ಹಾರ ಹಾಕಿದ್ದ ಘಟನೆ ನಡೆದಿದ್ದು, ಅಕ್ರೋಶಕ್ಕೆ ಕಾರಣವಾಗಿತ್ತು.
ಜಾರ್ಖಂಡ್ ನ ಶಾಲೆಯೊಂದರಲ್ಲಿ ಒಂದು ವಾರದ ಹಿಂದೆ ಆಯೋಜನೆಯಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಣ ಸಚಿವೆ ನೀರಾ ಯಾದವ್, ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಫೋಟೋಕ್ಕೆ ಹಾರ ಹಾಕಿ ಶ್ರದ್ದಾಂಜಲಿ ಸಲ್ಲಿಸಿದ್ದರು. ಆಘಾತವೆಂದರೆ ಜತೆಗಿದ್ದ ಶಾಸಕ, ಹಾಗೂ ಮುಖ್ಯೋಪಾಧ್ಯಾಯರೂ ಸಹ ಸಚಿವರನ್ನು ಅನುಸರಿಸಿ ತಮ್ಮ ಪ್ರಜ್ಞೆಯನ್ನು ಪ್ರದರ್ಶಿಸಿದ್ದರು.
ಸಾರ್ವಜನಿಕರೂ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಬಳಿಕ ಮಾತನಾಡಿದ ನೀರಾ ಯಾದವ್, ಅಬ್ದುಲ್ ಕಲಾಂ ಅವರ ಫೋಟೋಕ್ಕೆ ಹಾರ ಹಾಕಿದ್ದನ್ನು ಸಮರ್ಥಿಸಿಕೊಂಡಿದ್ದರಲ್ಲದೇ ಮಾಜಿ ರಾಷ್ಟ್ರಪತಿಗಳಿಗೆ ಹಾರ ಹಾಕಿ ಗೌರವ ಸಲ್ಲಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದರು. ಇಂದು ಕಲಾಂ ನಮ್ಮನ್ನೆಲ್ಲಾ ಅಗಲಿದ್ದಾರೆ. ವಾರದ ಹಿಂದೆ ಜೀವಂತವಾಗಿದ್ದ ಕಲಾಂ ಅವರ ಭಾವಚಿತ್ರಕ್ಕೆ ಸಚಿವೆ ಹಾರ ಹಾಕಿದಾಗಲೇ ವೇದನೆಯನ್ನನುಭವಿಸಿದ್ದ ಸಾರ್ವಜನಿಕರು ಇಂದು ಅಬ್ದುಲ್ ಕಲಾಂ ನಮ್ಮೊಂದಿಗಿಲ್ಲವೆಂಬ ಸತ್ಯದ ಬಳಿಕ ಶೋಕ ಸಾಗರದಲ್ಲಿ ಮುಳುಗಿದ್ದಾರೆ.