ಲಂಡನ್: ಕನ್ನಡಿಯು ನಿಮ್ಮ ದೇಹದ ಪ್ರತಿಬಿಂಬವನ್ನಷ್ಟೇ ಅಲ್ಲ, ಆರೋಗ್ಯದ ಬಿಂಬವನ್ನೂ ತೋರಿಸುವಂತಿದ್ದರೆ? ನಿಮಗೇನು ಕಾಯಿಲೆಯಿದೆ, ಯಾವ ಆರೋಗ್ಯ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಿ ಎಂಬುದನ್ನೂ ತಿಳಿಸುವಂತಿದ್ದರೆ?
ಇದೆಲ್ಲ ಕೇವಲ ಕಲ್ಪನೆಯಷ್ಟೇ ಎಂದು ಭಾವಿಸಿದರೆ ಅದು ತಪ್ಪು. ಏಕೆಂದರೆ, ಐರೋಪ್ಯ ಒಕ್ಕೂಟದ 7 ದೇಶಗಳ ಕೈಗಾರಿಕಾ ಪಾಲುದಾರರು ಮತ್ತು ಸಂಶೋಧಕರು ಇಂತಹ ಸ್ಮಾರ್ಟ್ ಕನ್ನಡಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕನ್ನಡಿಯ ಹೆಸರು `ವೈಸ್ ಮಿರರ್.’
ಏನಿದು ವೈಸ್ ಮಿರರ್?
ಇದು ಬಾಹ್ಯನೋಟದಲ್ಲಿ ಕನ್ನಡಿಯಂತೆಯೇ ಕಾಣುತ್ತದೆ. ಆದರೆ, ಇದರೊಳಗೆ 3ಡಿ ಸ್ಕ್ಯಾನರ್ಗಳು, ಮಲ್ಟಿಸ್ಪೆಕ್ಟ್ರಲ್ ಕ್ಯಾಮೆರಾಗಳು ಮತ್ತು ಗ್ಯಾಸ್ ಸೆನ್ಸರ್ ಗಳನ್ನು ಅಳವಡಿಸಲಾಗಿರುತ್ತದೆ. ಇವುಗಳು ಯಾರು ಕನ್ನಡಿಯನ್ನು ನೋಡುತ್ತಾರೋ ಅವರ ಆರೋಗ್ಯದ ಮಾಹಿತಿ ನೀಡುತ್ತವೆ. ವ್ಯಕ್ತಿಯ ಮುಖ, ಕೊಬ್ಬು, ಮುಖಭಾವ ಮತ್ತು ಆತ ಉಲ್ಲಸಿತನಾಗಿದ್ದಾರೆಯೇ, ಮಂಕಾಗಿದ್ದಾನೆಯೇ ಎಂಬೆಲ್ಲ ವಿಚಾರಗಳನ್ನು ಸಂಗ್ರಹಿಸಿಕೊಳ್ಳುತ್ತದೆ.
ಏನೇನು ಪತ್ತೆಹಚ್ಚುತ್ತದೆ?
ಮುಖಭಾವ ಪತ್ತೆಹಚ್ಚುವ ಸಾಫ್ಟ್ ವೇರ್ ನಿಮಗೆ ಒತ್ತಡ ಅಥವಾ ಗಾಬರಿಯಿದೆಯೇ ಎಂಬುದನ್ನು ತಿಳಿಸಿದರೆ, ಗ್ಯಾಸ್ ಸೆನ್ಸರ್ಗಳು ನಿಮ್ಮ ಉಸಿರಾಟದ ಮಾದರಿಯನ್ನು ಪಡೆದು ನೀವು ಮದ್ಯಸೇವಿಸುತ್ತೀರೋ, ಧೂಮಪಾನ ಮಾಡುತ್ತೀರೋ ಎಂಬುದನ್ನು ಪತ್ತೆಹಚ್ಚುತ್ತದೆ. 3ಡಿ ಸ್ಕ್ಯಾನರ್ಗಳು ನಿಮ್ಮ ಮುಖದ ಆಕಾರವನ್ನು ನೋಡಿ ತೂಕದ ಹೆಚ್ಚಳ ಮತ್ತು ಇಳಿಕೆಯನ್ನು ತಿಳಿಸುತ್ತದೆ. ಇನ್ನು ಮಲ್ಟಿಸ್ಪೆಕ್ಟ್ರಲ್ ಕ್ಯಾಮೆರಾಗಳು ನಿಮ್ಮ ಹೃದಯ ಬಡಿತ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ತಿಳಿಸುತ್ತದೆ. ಮುಖ ನೋಡಿದ ಒಂದೇ ನಿಮಿಷದೊಳಗೆ ಕನ್ನಡಿಯು ನಿಮ್ಮ ಆರೋಗ್ಯದ ಸ್ಕೋರ್ ನೀಡುತ್ತದೆ. ಜತೆಗೆ, ಆರೋಗ್ಯ ಸುಧಾರಿಸಿಕೊಳ್ಳುವ ವಿಧಾನದ ಬಗ್ಗೆ ಸಲಹೆಯನ್ನೂ ನೀಡುತ್ತದೆ. ಈ ಕನ್ನಡಿಯ ವೈದ್ಯಕೀಯ ಪರೀಕ್ಷೆಯು ಮುಂದಿನ ವರ್ಷ ಫ್ರಾನ್ಸ್ ಮತ್ತು ಇಟಲಿಯಲ್ಲಿ ನಡೆಯಲಿದೆ ಎಂದು ನ್ಯೂ ಸೈಂಟಿಸ್ಟ್ ವರದಿ ಮಾಡಿದೆ.