ಮಂಗಳೂರು,ಜುಲೈ.22: ಕರಾವಳಿಯ ನಿರ್ಮಾಪಕರು, ನಿರ್ದೇಶಕ, ಕಲಾವಿದರು ಹಾಗೂ ತಂತ್ರಜ್ಞರನ್ನು ಒಳಗೊಂಡು ಮಂಗಳೂರಿನಲ್ಲಿಯೇ ಚಿತ್ರೀಕರಣಗೊಂಡ “ಕನಸು -ಕಣ್ಣು ತರೆದಾಗ’ ಕನ್ನಡ ಚಲನಚಿತ್ರ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಜು.24ರಂದು ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಬಾಲಕೃಷ್ಣ ಶೆಟ್ಟಿ (ತಮ್ಮಣ್ಣ ಶೆಟ್ಟಿ) ತಿಳಿಸಿದ್ದಾರೆ.
ಮಂಗಳವಾರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಂಗಳೂರಿನ ಸುಚಿತ್ರ ಹಾಗೂ ಮಲ್ಟಿಫ್ಲೆಕ್ಸ್ ಸೇರಿದಂತೆ ರಾಜ್ಯದ ಸುಮಾರು 40 ಚಿತ್ರ ಮಂದಿರಗಳಲ್ಲಿ “ಕನಸು” ಚಿತ್ರ ತೆರೆ ಕಾಣಲಿದೆ. ಭಾರತದ ಅತೀ ದೊಡ್ಡ ಸವಾಲುಗಳಲ್ಲಿ ಒಂದಾಗಿರುವ ಸ್ವಚ್ಚತೆ, ಇಂದಿನ ಸಮಾಜದ ತಾರತಮ್ಯ ಹಾಗೂ ಬಾಲ್ಯದ ತುಂಟಾಟದ ದಿನಗಳನ್ನು ಸಿನೆಮಾ ಕಥೆಯಾಗಿ ಮಾರ್ಪಡಿಸಲಾಗಿದೆ. ಈಗಾಗಲೇ ಕನಸು ಚಿತ್ರದ ಗುಣಮಟ್ಟ ಹಾಗೂ ಸಂದೇಶ ಮೆಚ್ಚಿದ ರಿಲಯೆನ್ಸ್ ಎಂಟರ್‌ಟೈನ್ಮೆಂಟ್ ನವರು ಚಿತ್ರದ ಹಂಚಿಕೆದಾರರಾಗಿರುವುದು ಚಿತ್ರ ತಂಡಕ್ಕೆ ದೊರಕಿದ ಮೊದಲ ಗೆಲವು ಎಂದರು.
ಸಂತೋಷ್ ಶೆಟ್ಟಿ ಕಟೀಲು ನಿರ್ದೇಶನದಲ್ಲಿ 2.15 ಗಂಟೆಗಳ ಸಂಪೂರ್ಣ ಮನೋರಂಜನೆಯೊಂದಿಗೆ ಮಕ್ಕಳ ಸಿನೆಮಾ ಆಗಿ ರೂಪುಗೊಂಡಿದೆ. ಈ ಚಿತ್ರದಲ್ಲಿರುವ ಎಲ್ಲಾ ಕಲಾವಿದರು ಮೊದಲು ಬಾರಿಗೆ ಕೆಮರಾ ಎದುರಿಸುತ್ತಿದ್ದು, ಕಲಾವಿದರನ್ನು ಆಡಿಷನ್ ಗಳ ಮೂಲಕ ಆಯ್ಕೆ ಮಾಡಲಾಗಿದೆ. ಸುಮಾರು 12 ಬಾಲ ಕಲಾವಿದರು ಹಾಗೂ ಇತರ ಕಲಾವಿದರ ಅಭಿನಯದಲ್ಲಿ ಮೂಡಿ ಬಂದ ಈ ಸಿನೆಮಾ ಹೊಸತನ ಹಾಗೂ ಅತ್ಯುತ್ತಮ ಸಂದೇಶದೊಂದಿಗೆ ನಿರ್ಮಾಣವಾಗಿದೆ. ಚಿತ್ರದ 5 ಹಾಡುಗಳು ಈಗಾಗಲೇ ಮೆಚ್ಚುಗೆಗಳಿಸಿದ್ದು, ಕ್ಯಾನನ್ 5ಡಿ ಮತ್ತು 6ಡಿ ಕೆಮರಾವನ್ನು ಬಳಸಿ ಚಿತ್ರೀಕರಣ ನಡೆಸಲಾಗಿದೆ ಎಂದರು.
ಚಿತ್ರದ ಇನ್ನೋರ್ವ ನಿರ್ಮಾಪಕ ಕಿರಣ್ ಕುಮಾರ್ ಪುತ್ತೂರು ಮಾತನಾಡಿ, ಕನ್ನಡ ಚಿತ್ರಕ್ಕೆ ಸರಿಸಾಟಿ ಎಣಿಸುವ ಹಾಗೂ ಕನ್ನಡ ಚಿತ್ರದ ಪ್ರಸ್ತುತ ತಂತ್ರಜ್ಞಾನ ಗುಣಮಟ್ಟ ಒಪ್ಪುವ ರೀತಿಯಲ್ಲಿ ಕಲಾತ್ಮಕ ಭಾವರೂಪವನ್ನು ವಿನೂತನ ರೀತಿಯಲ್ಲಿ ಇಂದಿನ ಸಮಾಜಕ್ಕೆ ಬೇಕಾಗುವ ಶೈಲಿಯಲ್ಲಿ ನೀಡಲಾಗಿದೆ ಎಂದರು.
ಗಾನಸಿರಿ ಕ್ರಿಯೇಶನ್ಸ್ ಮತ್ತು ಮಾಣಿಕ್ಯ ಕಂಬೈನ್ಸ್ ಬ್ಯಾನರ್ ನ ಇಮೇಜಿನೇಷನ್ ಮೂವೀಸ್ ನಿರ್ಮಾಣ ಸಂಸ್ಥೆ ನಿರ್ಮಾಣದ “ಕನಸು – ಕಣ್ಣು ತೆರೆದಾಗ” ಚಿತ್ರಕಥೆ ಹಾಗೂ ನಿರ್ದೇಶನ ಸಂತೋಷ್ ಶೆಟ್ಟಿ ಕಟೀಲು ಅವರದ್ದು ಸಂಗೀತ ಯಶವಂತ್ ಉಡುಪಿ, ಹಿನ್ನೆಲೆ ಸಂಗೀತ ನಿತಿನ್ ಕುಮಾರ್, ಸಂಕಲನ ರವಿರಾಜ್, ಛಾಯಾಗ್ರಹಣ ಸಚಿನ್ ಎಸ್.ಶೆಟ್ಟಿ, ಕಲಾ ನಿರ್ದೇಶನವನ್ನು ಪ್ರದೀಪ್ ರಾಯ್ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಹ ನಿರ್ದೇಶಕ ನಾಗೇಶ್ ಪುತ್ತೂರು, ಸಾಹಿತ್ಯ ಸಂಭಾಷಣೆ ಬರೆದ ರಜಾಕ್ ಪುತ್ತೂರು, ಬಾಲ ಕಲಾವಿದರಾದ ಮೈತ್ರಿ ಎಕ್ಕೂರು, ಮಹಾಲಸಾ, ಅರ್ಪಿತ್ ಮೊದಲಾದವರು ಉಪಸ್ಥಿತರಿದ್ದರು.
**************************************************************************
“ಕನಸು-ಕಣ್ಣು ತೆರೆದಾಗ”: ಕಥೆ
ಕನಸು ಪ್ರತಿಯೊಬ್ಬನೂ ಜೀವನದಲ್ಲಿ ಸಾಮನ್ಯವಾಗಿ ಅನುಭವಿಸಿರುವ ಅದ್ಭುತ ಅನಭವಗಳಲ್ಲೊಂದು. ಆದರೆ ಆ ಕನಸು ಕಣ್ಣು ತರೆದಾಗ ಏನಾಗುತ್ತದೆ? ಎಲ್ಲಿ ಹೋಗುತ್ತದೆ? ಅದು ನನಸಾಗುತ್ತದೆಯಾ? ಎಂಬುದು ನಿಜವಾಗಲೂ ಸೋಜಿಗದ ಸಂಗತಿ. ಇಲ್ಲಿ ಹೇಳ ಹೊರಟಿರುವುದು ಕರಾವಳಿಯಲ್ಲಿ “ಕನಸು_ಕಣ್ಣು ತೆರೆದಾಗ” ಎಂಬ ಕನ್ನಡ ಚಲನಚಿತ್ರವೊಂದು ತಯಾರಾಗುತ್ತಿರುವ ಬಗ್ಗೆ.
ಸಮಾಜದ ಶ್ರೀಮಂತ ವರ್ಗದ ಕಾನ್ವೆಂಟ್ ಮಕ್ಕಳು ಮತ್ತು ಸಾಮಾನ್ಯ ವರ್ಗದ ಬಡ ಕೊಳಗೇರಿ ಮಕ್ಕಳ ನಡುವಿನ ವೈಪರೀತ್ಯಗಳ ನಡುವೆ ಸಾಗುವ ಮಕ್ಕಳ ತುಂಟಾಟ, ಪೋಕರಿಗಳು ಕತೆಗೆ ಹೊಸ ಆಯಾಮ ಕೊಡುತ್ತದೆ. ಸದಾ ಜಗಳಗಂಟರಾಗಿರುವ ಈ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಕ್ಕಳು ಕೊನೆಗೊಮ್ಮೆ ಹುಚ್ಚನೊಬ್ಬನ ಆವಾಂತರದಿಂದಾಗಿ ಒಂದಾಗುತ್ತಾರೆ. ಊರಿನಿಂದ ಹೊರದಬ್ಬಲ್ಪಟ್ಟ, ಜನರ ತಪ್ಪುಗಳನ್ನು ತಿದ್ದಲು ಪ್ರಯತ್ನಿಸಿ ಸೋತ ಪ್ರೊಫೆಸರ್ ತಾತ ಮಕ್ಕಳನ್ನು ಸರಿದಾರಿಗೆ ತರುತ್ತಾರೆ. ಇದೇ ಸಂಧರ್ಭದಲ್ಲಿ ಕಸ ವಿಲೇವಾರಿಗೆ ಜನಗಳು ಸಿಗದೇ ಇರುವಾಗ ಊರಿನ ಶ್ರೀಮಂತ ಕಂಟ್ರಾಕ್ಟರ್ ಕೊಳಗೇರಿ ಮಕ್ಕಳನ್ನು ಶಾಲೆ ಬಿಡಿಸಿ ಕಸ ಹೆಕ್ಕುವ ಕೆಲಸಕ್ಕೆ ನೂಕುತ್ತಾನೆ. ಈ ಎಲ್ಲದರ ನಡುವೆ ಮಕ್ಕಳ ಮಧುರ ಸ್ನೇಹ, ಮುಗ್ಧ ಭಾವನೆಗಳು ಹೇಗೆ ಕತೆಗೆ ಸುಖಾಂತ್ಯ ನೀಡುತ್ತದೆ ಮತ್ತು ಆಧುನಿಕ ಸಮಾಜದ ಭೀಕರ ಸಮಸ್ಯೆಗಳಲ್ಲೊಂದಾದ ಸ್ವಚ್ಛತೆ, ತ್ಯಾಜ್ಯ ವಿಲೇವಾರಿಗೆ ಮಕ್ಕಳು ಯಾವ ರೀತಿ ಕ್ರಾಂತಿ ಮಾಡುತ್ತಾರೆ ಎಂಬುದನ್ನು ತಾವು, ತಮ್ಮವರೆಲ್ಲರೂ ಬಂದು ಚಿತ್ರಮಂದಿರಗಳಲ್ಲಿ ಭರಪೂರ ಮನರಂಜನೆಯೊಂದಿಗೆ ಆಸ್ವಾಧಿಸಬೇಕು.
“ಕನಸು-ಕಣ್ಣು ತೆರೆದಾಗ”: ನಿರ್ಮಾಣ ಮತ್ತು ನಿರ್ವಹಣೆ
ಭಾರತದ ಅತಿ ದೊಡ್ಡ ಸವಾಲುಗಳಲ್ಲೊಂದಾದ ಸ್ವಚ್ಛತೆ ಮತ್ತು ಇಂದಿನ ಸಮಾಜದ ತಾರತಮ್ಯ ಹಾಗೂ ಬಾಲ್ಯದ ತುಂಟಾಟದ ದಿನಗಳನ್ನು ಸಿನಿಮಾ ಕತೆಯಾಗಿ ಮಾರ್ಪಡಿಸಿ ಅದಕ್ಕೆ ತಾಂತ್ರಿಕ ಬಾಷೆ ನೀಡಿರುವವರು ಯುವ ನಿರ್ದೇಶಕರಾದ ಕಟೀಲಿನ ಸಂತೋಷ್ ಶೆಟ್ಟಿ. ಈ ಸಂಧರ್ಭದಲ್ಲಿ “ಕನಸಿನ” ಈ ಪಯಣಕ್ಕೆ ಆರ್ಥಿಕ ಸಹಕಾರ ನೀಡಲು ಮುಂದಾದವರು ಶ್ರೀ ಗಾನಸಿರಿ ಕಿರಣ್ ಕುಮಾರ್ ಹಾಗೂ ಮಂಗಳೂರಿನ ಶ್ರೀ ಎಸ್ ಬಾಲಕೃಷ್ಣ ಶೆಟ್ಟಿ ಮತ್ತು ಶ್ರೀಮತಿ ವಿನುತ ಜಯಶಂಕರ್ ರವರು.
ಪ್ರಸಕ್ತ ಕನ್ನಡ ಚಲನಚಿತ್ರ ರಂಗದ ತಂತ್ರಜ್ಙಾನ ಮತ್ತು ಗುಣಮಟ್ಟಕ್ಕೆ ಸರಸಾಟಿಯಾದ ಕನ್ನಡ ಚಲನಚಿತ್ರವನ್ನು ಮಂಗಳೂರಿನಲ್ಲಿಯೇ ತಯಾರಿಸಬೇಕೆಂದಾಗ ನಿರ್ಮಾಪಕರುಗಳು ಆರಿಸಿದ ಕಂಪೆನಿ “ಇಮೇಜಿನೇಷನ್ ಮೂವೀಸ್”. ಶ್ರೀ ವಿಜಯನಾಥ ವಿಠ್ಠಲ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಆರಂಭಗೊಂಡ ಈ ಸಂಸ್ಥೆ ಕೆಲವೇ ಸಮಯದಲ್ಲಿ ಅಪೂರ್ವ ಸಾಧನೆಗಳನ್ನು ಮಾಡಿದೆ. ಮುಖ್ಯವಾಗಿ ಯಕ್ಷಗಾನಕ್ಕೆ ವಿಷುವಲ್ ಎಫೆಕ್ಟ್ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ತಯಾರುಮಾಡಿರುವ “ಭಸ್ಮಾಸುರ ಮೋಹಿನಿ” ಈಗಾಗಲೇ ಯಕ್ಷಗಾನ ರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಹಾಗೆಯೇ “ಮಂಗಳೂರು ದಸರಾ” “ಭೂತಾರಾಧನೆ” ಯಂತಹ ಸಾಕ್ಷಚಿತ್ರಗಳು ದೇಶ ವಿದೇಶಗಳಲ್ಲಿ ಮೆಚ್ಚುಗೆಯನ್ನು ಪಡೆದಿದೆ.
“ಕನಸುಕಣ್ಣು ತೆರೆದಾಗ”: ಚಿತ್ರ ತಂಡ
ಗಾನಸಿರಿ ಕಿರಣ್ ಕುಮಾರ್ ಪುತ್ತೂರು (ನಿರ್ಮಾಪಕರು) : ಪುತ್ತೂರಿನ ಗಾನಸಿರಿ ಸಂಗೀತ ತರಬೇತಿ ಸಂಸ್ಥೆಯ ರುವಾರಿಯಾದ ಇವರು ರಾಜ್ಯದ ಆರ್ಯಭಟ ಪ್ರಶಸ್ತಿ ಪುರಸ್ಕೃತರು. ಸಂಗೀತವನ್ನೇ ಜೀವನವನ್ನಾಗಿಸಿರುವ ಇವರು ಈಗಾಗಲೇ ಸಾವಿರಾರು ಮಕ್ಕಳಿಗೆ ಸಾಂಪ್ರದಾಯಿಕ ಮತ್ತು ಸಿನಿಮಾ ಹಾಡುಗಾರಿಕೆಯ ತರಬೇತಿಯನ್ನು ನೀಡುತ್ತಿದ್ದಾರೆ.
ಶ್ರೀ ಬಾಲಕೃಷ್ಣ ಶೆಟ್ಟಿ (ನಿರ್ಮಾಪಕರು) : ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ “ಮಾಣಿಕ್ಯ ಲ್ಯಾಂಡ್ ಕೋರ್ಟನ ತಮ್ಮಣ್ಣ ಶೆಟ್ಟಿ ಎಂದೇ ಪರಿಚಿತರಾಗಿರುವ ಇವರು ಮೂಲತಹ ಸಿನಿಮಾಸಕ್ತರು. “ಕನಸು- ಕಣ್ಣು ತೆರದಾಗ” ಚಿತ್ರದಲ್ಲಿ ಮೊದಲ ಬಾರಿಗೆ ಕ್ಯಾಮರಾ ಎದುರಿಸುವ ಮೂಲಕ ಹೊಸ ಕಲಾವಿದನೊಬ್ಬ ತುಳು-ಕನ್ನಡ ಚಿತ್ರ ರಂಗಕ್ಕೆ ಕಾಲಿಡುತ್ತಿದ್ದಾರೆ.
ಸಂತೋಷ್ ಶೆಟ್ಟಿ ಕಟೀಲು (ನಿರ್ದೆಶಕರು) : ಮೂಲತಃ ಎನಿಮೇಶನ್ ತಂತ್ರಜ್ಷರಾದ ಇವರು ಮುಂಬಯಿಯ ಎನ್.ಡಿ ಸ್ಟುಡಿಯೋದಲ್ಲಿ ಶ್ರೀ ನಿತಿನ್ ದೇಸಾಯಿಯ ಗರಡಿಯಲ್ಲಿ ಪಳಗಿದವರು. “ಜೋಧಾ-ಅಕ್ಬರ್” ಸಿನಿಮಾದಲ್ಲಿ ಸಾಮಾನ್ಯ ವೆಲ್ಡಿಂಗ್ ಕಾರ್ಮಿಕನಾಗಿ ಚಲನಚಿತ್ರಜಗತ್ತಿಗೆ ಕಾಲಿಟ್ಟ ಇವರು ನಂತರದ ದಿನಗಳಲ್ಲಿ “ಶೂಟ್ ಔಟ್ ಎಟ್ ಲೋಕಂಡ್ವಾಲಾ” ” ಮಂಗಳ್ ಪಾಂಡೆ” ” ಸ್ವದೇಶ್” ನಂತಹ ಸಿನಿಮಾದಲ್ಲಿ ಕಲಾ ವಿಭಾಗದಲ್ಲಿ ಸೆಟ್ ಡಿಸೈನರ್ ಅಆಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಮಂಗಳೂರಿನ ಏಕೈಕ ಚಲನಚಿತ್ರ ನಿರ್ಮಾಣ/ನಿರ್ವಹಣಾ ಸಂಸ್ಥೆಯ ಮಾಲಕರೂ ಹೌದು. ಹಲವಾರು ಸಾಕ್ಷ್ಯಚಿತ್ರಗಳು, ಜಾಹೀರಾತುಗಳು, 3ಡಿ ವಿನ್ಯಾಸಗಳಲ್ಲಿ ಯಶಸ್ವಿಯಾಗಿರುವ ಈ ಯುವ ಮನಸ್ಸಿನ ಮೊದಲ ನಿರ್ದೇಶನದ ಕನಸೇ ಈ “ಕನಸು-ಕಣ್ಣು ತೆರೆದಾಗ”.









