ಮಂಗಳೂರು, ಜುಲೈ.16 : ಹಣಕಾಸು ಸಂಸ್ಥೆ, ಗಿರವಿದಾರರು ಸೇರಿದಂತೆ ಫೈನಾನ್ಸ್‌ಗಳಲ್ಲಿ ಸಾಲಕ್ಕೆ ಅಧಿಕ ಬಡ್ಡಿ ವಸೂಲಿ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ತಿಳಿಸಿದ್ದಾರೆ.
ಲೇವಾದೇವಿ ಕಾಯಿದೆ, ಚಿಟ್‌ಪಂಡ್ ಕಾಯಿದೆ ಮತ್ತು ಅಧಿಕ ಬಡ್ಡಿ ವಸೂಲಿ ನಿಯಂತ್ರಣ ಕಾಯಿದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ರೂಪಿಸಲಾದ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಭದ್ರತೆ ಇರುವ ಸಾಲಗಳಿಗೆ ಶೇಕಡಾ 14 ಹಾಗೂ ಭದ್ರತೆ ರಹಿತ ಸಾಲಗಳಿಗೆ ಶೇಕಡಾ 16 ಬಡ್ಡಿ ವಿಧಿಸಲು ಅವಕಾಶವಿದೆ. ಯಾರಾದರೂ ಮಿತಿ ಮೀರಿದ ಬಡ್ಡಿ ವಸೂಲಿ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ದೂರ ನೀಡಬಹುದಾಗಿದೆ. ಇದಕ್ಕಾಗಿ ಎಸ್.ಪಿ. ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು, ದೂರವಾಣಿ ಸಂಖ್ಯೆ 0824 2440284, ಮೊಬೈಲ್ 9480805300 ಸಂಖ್ಯೆಗೆ ಕರೆ ಮಾಡಿ, ಅಧಿಕ ಬಡ್ಡಿ ವಸೂಲಿ ಮಾಡುವವರ ಮಾಹಿತಿ ನೀಡಬಹುದಾಗಿದೆ. 24 ಗಂಟೆಯೂ ಈ ಸಹಾಯವಾಣಿ ಕಾರ್ಯಾಚರಿಸಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು. ತಾಲೂಕು ಮಟ್ಟದಲ್ಲಿಯೂ ಆಯಾ ಸರ್ಕಲ್ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಸಭೆ ನಡೆಸಲು ಸೂಚಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಮಾತನಾಡಿ, ಬ್ಯಾಂಕುಗಳು ಹಾಗೂ ಸಹಕಾರ ಸಂಘಗಳು ರೈತರ ಸಾಲ ವಸೂಲಾತಿಯನ್ನು ನಿಧಾನಗೊಳಿಸಬೇಕು. ಸಾಲಗಾರರಿಗೆ ಕಾಲಾವಕಾಶ ನೀಡಬೇಕು. ಸಾಲ ಪಾವತಿಸದವರ ವಿರುದ್ಧ ಯಾವುದೇ ಕೇಸು ದಾಖಲಿಸದಂತೆ ಸೂಚಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲಭಾದೆಯಿಂದ ರೈತರು ಆತ್ಮಹತ್ಯೆ ಮಾಡಿದ ಯಾವುದೇ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿ ನಡೆದಿರುವ ಇಬ್ಬರು ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಒಬ್ಬರು ಸಾಲಕ್ಕೆ ಸಂಬಂದಪಟ್ಟಿಲ್ಲ. ಇನ್ನೊಂದು ಪ್ರಕರಣವನ್ನು ಪುತ್ತೂರು ಉಪವಿಭಾಗಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದರು. ರಾಜ್ಯ ಸರಕಾರವು ರೈತರ ಆತ್ಮಹತ್ಯೆಗಳನ್ನು ಪರಿಶೀಲಿಸಲು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕ ಬಿ.ಕೆ. ಸಲೀಂ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 320 ನೋಂದಾಯಿತ ಹಣಕಾಸು ಲೇವಾದೇವಿದಾರರು ಇದ್ದಾರೆ. ಅಧಿಕ ಬಡ್ಡಿ ವಸೂಲು ವಿರುದ್ಧ ಹಾಗೂ ಸಮರ್ಪಕ ದಾಖಲೆಗಳಿನ್ನಡದೆ ವ್ಯವಹಾರ ಮಾಡುವ ವಿರುದ್ಧ ಸಹಕಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯು ದಾಳಿ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೆ, ಫೈನಾನ್ಸ್‌ಗಳ ಎಲ್ಲಾ ವ್ಯವಹಾರಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು. ಎಲ್ಲಾ ಹಣಕಾಸು ಸಂಸ್ಥೆಗಳು ತಮ್ಮ ಲೈಸನ್ಸ್ ಹಾಗೂ ಬಡ್ಡಿದರಗಳನ್ನು ಪ್ರದರ್ಶಿಸಬೇಕು. ಗ್ರಾಹಕರಿಗೆ ಪಾಸ್‌ಬುಕ್, ರಶೀದಿಗಳನ್ನು ನೀಡಲೇಬೇಕು. ಅಕ್ರಮ ಬಡ್ಡಿ ವಸೂಲಾತಿ ವಿರುದ್ಧ ಸಾರ್ವಜನಿಕರು ಪೊಲೀಸರಿಗೆ ಅಥವಾ ಸಹಕಾರ ಇಲಾಖೆಗೆ ಮಾಹಿತಿ ನೀಡಬಹುದಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಡಾ.ಅಶೋಕ್, ಪುತ್ತೂರು ಉಪವಿಭಾಗಾಧಿಕಾರಿ ಬಸವಾರಜು, ಕೃಷಿ ಇಲಾಖೆ ಜಂಟೀ ನಿರ್ದೇಶಕ ಕೆಂಪೇಗೌಡ, ಎಲ್ಲಾ ತಾಲೂಕುಗಳ ತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.
