ರಾಷ್ಟ್ರೀಯ

ಜನಪ್ರಿಯ ಮದ್ಯ ‘ಓಲ್ಡ್ ಮಾಂಕ್’ ಪ್ರೀಯರಿಗೊಂದು ಸಂತಸದ ಸುದ್ದಿ..!

Pinterest LinkedIn Tumblr

Old-monk-Driknಮೋಹನ್‌ನಗರ್ (ಘಾಜಿಯಾಬಾದ್), ಜು.15- ಮದ್ಯಪ್ರಿಯರಿಗೊಂದು ಸಂತಸದ ಸುದ್ದಿ. ಬಹುತೇಕ ಮದ್ಯಾರಾಧಕರ ನೆಚ್ಚಿನ ಪಾನೀಯವಾಗಿದ್ದ ಓಲ್ಡ್ ಮಾಂಕ್ (ಹಳೆ ಸನ್ಯಾಸಿ ಅಂದರೂ ಚಿಂತೆಯಿಲ್ಲ) ಎಂಬ ಜನಪ್ರಿಯ ಮದ್ಯವನ್ನು ಅದರ ತಯಾರಿಕಾ ಕಂಪೆನಿ ನಿಷೇಧಿಸಿ,

ಮಾರುಕಟ್ಟೆಯಿಂದ ಹಿಂಪಡೆಯುತ್ತಿದೆ ಎಂಬ ಆಘಾತಕಾರಿ ಸುದ್ದಿಯೊಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದರಿಂದಾಗಿ ಅನೇಕರು ಭಾರೀ ಚಿಂತೆಗೀಡಾಗಿದ್ದರು. ಮಾತ್ರವಲ್ಲ ಸಾಧ್ಯವಾದಷ್ಟು ಪ್ರಮಾಣದಲ್ಲಿ ಈ ಹಳೆ ಸನ್ಯಾಸಿ ಮದ್ಯದ ಬಾಟಲ್‌ಗಳನ್ನು ಖರೀದಿಸಿ ಮನೆಗಳಲ್ಲಿ ಶೇಖರಿಸಿಟ್ಟುಕೊಳ್ಳುವ ಪ್ರಯತ್ನಗಳೂ ಅನೇಕ ಕಡೆಗಳಲ್ಲಿ ನಡೆದಿದ್ದವು. ಆದರೆ, ಈಗ ಆ ಭಯವಿಲ್ಲ. ಓಲ್ಡ್ ಮಾಂಕ್ ಮಾರುಕಟ್ಟೆಯಿಂದ ಹಿಂದೆ ಸರಿಯುವುದಿಲ್ಲ. ಕಂಪೆನಿ ಅಂಥ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಹಾಗಾಗಿ ಮದ್ಯ ಪ್ರೇಮಿಗಳು, ಓಲ್ಡ್  ಮಾಂಕ್ ಪ್ರಿಯರು ತಲೆ ಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ.

ಮಾರಾಟದಲ್ಲಿ ಇಳಿಮುಖವಾಗಿದ್ದರಿಂದ ಮೋಹನ್ ಮಿಕೇನ್ ಲಿಮಿಟೆಡ್ ಕಂಪೆನಿ ತನ್ನ ಎಲ್ಲ ಓಲ್ಡ್ ಮಾಂಕ್ ಮದ್ಯ ತಯಾರಿಕೆ ಸ್ಥಗಿತಗೊಳಿಸಿ, ಮಾರುಕಟ್ಟೆಯಲ್ಲಿರುವ ಎಲ್ಲ ಸಂಗ್ರಹವನ್ನೂ ಹಿಂದಕ್ಕೆ ಪಡೆಯಲಿದೆ ಎಂದು ಸಾಮಾಜಿಕ ಮಾಧ್ಯಮಗಳು ಮಾಡಿರುವ ವರದಿ ಸತ್ಯಕ್ಕೆ ದೂರವಾಗಿದೆ. ಖಂಡಿತ ನಮ್ಮ ಕಂಪೆನಿ ಓಲ್ಡ್ ಮಾಂಕ್ ನಿಷೇಧಿಸುವುದೂ ಇಲ್ಲ, ಉತ್ಪಾದನೆಯನ್ನು ನಿಲ್ಲಿಸುವುದೂ ಇಲ್ಲ. ಎಂದಿನಂತೆ ಇನ್ನು ಮುಂದೆಯೂ ನಿಮ್ಮ ಓಲ್ಡ್ ಮಾಂಕ್ ಮಾರುಕಟ್ಟೆಗಳಲ್ಲಿ ಕೈ ಗೆಟುಕಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಮೋಹನ್ ಮಿಕೇನ್ ಲಿಮಿಟೆಡ್‌ನ ಹಿರಿಯ ಆಡಳಿತಾಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ದೇಶದ ಅನೇಕ ರಾಜ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ಓಲ್ಡ್ ಮಾಂಕ್ ಮದ್ಯದ ವಹಿವಾಟು ಕುಸಿದಿದೆ ಎಂಬಂತಹ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಸತ್ಯಕ್ಕೆ ದೂರವಾಗಿದೆ. ಕಳೆದ ಸೋಮವಾರದಿಂದಲೂ ಸಾಮಾಜಿಕ ತಾಣಗಳಲ್ಲಿ ಇಂಥ ವರದಿಗಳು ಬರುತ್ತಲೇ ಇವೆ. ಆದರೆ, ವಾಸ್ತವವಾಗಿ ಓಲ್ಡ್ ಮಾಂಕ್ ಮಾರುಕಟ್ಟೆಯಲ್ಲಿ ಎಂದಿನಂತೆಯೇ ಓಡುತ್ತಿದೆ. ಸಾಮಾಜಿಕ ತಾಣಗಳಲ್ಲಿ ಈ ಪರಿಯ ಸುದ್ದಿಗಳು ಒಂದರ ಹಿಂದೊಂದು ಬರುತ್ತಿರುವುದು ನಮಗೆ ಆಘಾತ ಉಂಟುಮಾಡಿದೆ. ನಾವು ಮತ್ತೊಮ್ಮೆ ನಮ್ಮ ಗ್ರಾಹಕರಿಗೆ ಭರವಸೆ ಕೊಡುತ್ತಿದ್ದೇವೆ. ಖಂಡಿತಾ ಓಲ್ಡ್ ಮಾಂಕ್ ನಿಲ್ಲುವುದಿಲ್ಲ.

ಅದು ಎಂದೂ ನಿಮ್ಮದೇ ಎಂದು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಹೇಮಂತ್ ಮೋಹನ್ ಭರವಸೆ ನೀಡಿದ್ದಾರೆ. ಮೋಹನ್ ಮಿಕೇನ್ ಲಿಮಿಟೆಡ್‌ನ ಉಪ ಮಹಾಪ್ರಬಂಧಕ ಎಸ್.ಎನ್.ಮೈಂಗಿ ಅವರೂ ಕೂಡ ತಮ್ಮ ನೆಚ್ಚಿನ ಉತ್ಪಾದನೆ ವಿರುದ್ಧದ ಈ ವರದಿಗಳು ನಮಗೆ ಆತಂಕ ಉಂಟುಮಾಡಿವೆ ಎಂದಿದ್ದಾರೆ. ಓಲ್ಡ್ ಮಾಂಕ್ ನಮ್ಮ ಕಂಪೆನಿಯ ಪ್ರಮುಖ ಉತ್ಪಾದನೆ. ಅದನ್ನು ತಡೆ ಹಿಡಿಯುವ ಪ್ರಶ್ನೆಯೇ ಇಲ್ಲ ಎಂದೂ ಅವರು ಹೇಳಿದ್ದಾರೆ.

Write A Comment