ಕುಂದಾಪುರ: ಅಪ್ರಾಪ್ತ ವಿದ್ಯಾರ್ಥಿನಿಯೋರ್ವಳು ಕಾಲೇಜು ಮುಗಿಸಿ ಮನೆಗೆ ತೆರಳಲು ಬಸ್ಸು ಕಾಯುತ್ತಿದ್ದ ವೇಳೆ ಅನ್ಯ ಕೋಮಿನ ಮೂವರು ಯುವಕರು ಆಕೆ ಬಳಿ ಬಂದು ಚುಡಾಯಿಸಿದ್ದಲ್ಲದೇ ಆಕೆಗೆ ದೂರವಾಣಿ ಸಂಖ್ಯೆ ನೀಡಿ ಅಸಭ್ಯವಾಗಿ ವರ್ತಿಸಿದ ಮೂವರ ಪೈಕಿ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದು ಓರ್ವ ಪರಾರಿಯಾದ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಸೋಮವಾರ ಮಧ್ಯಾಹ್ನದ ಸುಮಾರಿಗೆ ಸಂಭವಿಸಿದೆ.
ಗುಲ್ವಾಡಿ ನಿವಾಸಿಗಳಾದ ಸಫಾನ್(19) ಸುಹೇಲ್ (19) ಫೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿತರಾಗಿದ್ದು ಶಫಿ (20) ಪರಾರಿಯಾಗಿದ್ದಾನೆ. ಈ ಮೂವರು ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ವಿವರ: ಕೋಟೇಶ್ವರ ಸಮೀಪದ ನಿವಾಸಿಯಾದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ಅಪ್ರಾಪ್ತೆ ಯುವತಿಯೋರ್ವಳು ಕೋಟೇಶ್ವರ ಬಸ್ಸು ನಿಲ್ದಾಣದಲ್ಲಿ ಮಧ್ಯಾಹ್ನ ಕಾಲೇಜು ಮುಗಿಸಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಅನ್ಯ ಕೋಮಿನ ಈ ಮೂವರು ಆಕೆ ಸಮೀಪ ಬಂದು ಅಸಭ್ಯವಾಗಿ ವರ್ತಿಸಿದ್ದಲ್ಲದೇ ಆಕೆಗೆ ಮೊಬೈಲ್ ನಂಬರ್ ಬರೆದ ಚೀಟಿ ನೀಡಿ ಕರೆ ಮಾಡುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಬೆದರಿದ ಆಕೆ ಸ್ಥಳೀಯರಿಗೆ ಮಾಹಿತಿ ನೀಡಿದ್ದು ಸಾರ್ವಜನಿಕರು ಒಗ್ಗೂಡಿ ಮೂವರಿಗೂ ಥಳಿಸಿದ್ದಾರೆ, ಈ ವೇಳೆ ಶಫಿ ಪರಾರಿಯಾಗಿದ್ದಾನೆ. ಘಟನೆ ತಿಳಿಯುತ್ತಿದ್ದಂತೆಯೇ ಕುಂದಾಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸಫಾನ್ ಮತ್ತು ಸುಹೇಲ್ ಎಂಬಿಬ್ಬರು ಯುವಕರನ್ನು ಬಂಧಿಸಿದ್ದಾರೆ. ಪರಾರಿಯಾದ ಶಫಿ ಬಂಧನಕ್ಕೂ ಈಗಾಗಲೇ ಬಲೆ ಬೀಸಲಾಗಿದೆ.
ಕಳೆದ ನಾಲ್ಕೈದು ದಿನಗಳಿಂದಲೂ ಈ ಅಪ್ರಾಪ್ತೆ ವಿದ್ಯಾರ್ಥಿನಿಗೆ ಈ ಮೂವರು ಚುಡಾಯಿಸುತ್ತಿದ್ದು ಈ ಬಗ್ಗೆ ಆಕೆ ಮನೆಯವರಲ್ಲಿಯೂ ಹೇಳಿಕೊಂಡಿದ್ದಳು. ಸೋಮವಾರ ಈ ಮೂವರ ವರ್ತನೆ ಮಿತಿ ಮೀರಿದ್ದರಿಂದ ಹೆದರಿದ ಯುವತಿ ಬೇರೆ ದಾರಿ ಕಾಣದೇ ಕುಂದಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿ ಮೂವರ ವಿರುದ್ಧ ದೂರು ದಾಖಲಿಸಿದ್ದಾಳೆ.
ಸದ್ಯ ಮೂವರ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.














