ಬೆಂಗಳೂರು, ಜು. 13: ಸಾಲದ ಶೂಲಕ್ಕೆ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರ ವಿಧಾನಸಭೆಯಲ್ಲಿ ಇಂದು ಮತ್ತೆ ಪ್ರತಿಧ್ವನಿಸಿ, ಕೋಲಾಹಲ ವಾತಾವರಣಕ್ಕೆ ಎಡೆಮಾಡಿ ಸದನವನ್ನು ಸ್ವಲ್ಪ ಹೊತ್ತು ಮುಂದೂಡುವಂತಾಯಿತು.
ಇಂದು ಸದನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್‌ರವರೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರ ಪ್ರಸ್ತಾಪಿಸಿ ನಿಲುವಳಿ ಸೂಚನೆ ಮೂಲಕ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದು, ಗೊಂದಲ ವಾತಾವರಣ ನಿರ್ಮಾಣಗೊಳ್ಳಲು ಕಾರಣವಾಯಿತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದವರು ನಡೆಸುತ್ತಿದ್ದ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಹೇಳಿದ ಮಾತಿಗೆ ಶೆಟ್ಟರ್ ಕಿವಿಗೊಡಲಿಲ್ಲ. ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜಯಚಂದ್ರ ಅವರು ನಿಯಮಾವಳಿ ಉಲ್ಲೇಖಿಸಿ ವಾದ ಮಂಡಿಸಲು ಮುಂದಾದಾಗ ಗೊಂದಲ ವಾತಾವರಣ ಉಂಟಾಯಿತು.
ಈ ಮಧ್ಯೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡಬೇಕೆಂಬ ಕೂಗು ಜೆಡಿಎಸ್ ಪಕ್ಷದ ಕಡೆಯಿಂದ ಕೇಳಿಬಂತು.
ರೈತರ ಸರಣಿ ಸಾವಿನ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟುಹಿಡಿದು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿ ಕೋಲಾಹಲ ಉಂಟು ಮಾಡಿದರು. ಇದರಿಂದ ಸದನದ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.
ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್, ರೈತರು ದಿನನಿತ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಆತಂಕಕಾರಿ ವಿಚಾರ. ರೈತರ ಆತ್ಮಹತ್ಯೆ ತಡೆ ಕುರಿತಂತೆ ಚರ್ಚೆಯಾಗಬೇಕಾಗಿದೆ. ಇದೊಂದು ಗಂಭೀರ ವಿಚಾರವಾಗಿದ್ದು, ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಆಗ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ನಿಲುವಳಿ ಸೂಚನೆ ಬದಲಿಗೆ ನಿಯಮ 69ರಡಿ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಅದಕ್ಕೊಪ್ಪದ ಜಗದೀಶ್‌ಶೆಟ್ಟರ್, ನಿಲುವಳಿ ಸೂಚನೆಯಡಿಯಲ್ಲಿಯೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಕಾನೂನು ಸಚಿವ ಟಿ.ಬಿ. ಜಯಚಂದ್ರ, ಬೆಳಗಾವಿ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಕುರಿತು ನಾಲ್ಕು ದಿನ ಚರ್ಚೆ ಮಾಡಲಾಗಿದೆ. ಸರ್ಕಾರ ಉತ್ತರವನ್ನೂ ನೀಡಿದೆ. ಈಗಲೂ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸರ್ಕಾರ ಸಿದ್ಧವಿದೆ. ಆದರೆ, ನಿಲುವಳಿ ಸೂಚನೆಯಡಿಯಲ್ಲಿ ಚರ್ಚೆಯಾಗಬೇಕು ಎನ್ನುವುದು ಸರಿಯಲ್ಲವೆಂದರು. ಈ ಹಂತದಲ್ಲಿ ಬಿಜೆಪಿ ಸದಸ್ಯರೆಲ್ಲ ಜಯಚಂದ್ರ ಅವರ ವಿರುದ್ಧ ಹರಿಹಾಯ್ದರು.
ಜಗದೀಶ್‌ಶೆಟ್ಟರ್ ಮಾತನಾಡಿ, ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಪ್ರತಿನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಆತ್ಮಹತ್ಯೆ ಪ್ರಕರಣ ತಡೆಯಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ವಿಚಾರವನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಬೇರೆ ಯಾವುದೇ ರೂಪದಲ್ಲಿ ಚರ್ಚೆ ಮಾಡಿದರೂ ಹೆಚ್ಚಿನ ಮಹತ್ವ ಬರುವುದಿಲ್ಲ ಎಂದು ಹೇಳಿದ ಅವರು, ತಮ್ಮ ಪಕ್ಷದ ಸದಸ್ಯರೊಂದಿಗೆ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗೆ ಇಳಿದು ಧರಣಿ ನಡೆಸಿದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಚರ್ಚೆಗೆ ಸರ್ಕಾರದ ವಿರೋಧವಿಲ್ಲ. ನಿಲುವಳಿ ಸೂಚನೆ ಬದಲಿಗೆ ಬೇರೆ ಯಾವುದೇ ರೂಪದಲ್ಲಿ ಚರ್ಚೆ ಮಾಡಲಿ. ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾದ ಪ್ರತಿವಾದಗಳು ನಡೆದು, ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದರಿಂದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕಲಾಪವನ್ನು ಸ್ವಲ್ಪ ಹೊತ್ತು ಮುಂದೂಡಿದರು.
ಕುಮಾರಸ್ವಾಮಿ ಒತ್ತಾಯ
ಜಗದೀಶ್‌ಶೆಟ್ಟರ್‌ರವರ ಒತ್ತಾಯದ ನಡುವೆಯೇ ಎದ್ದು ನಿಂತ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡಬೇಕು ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಈ ಕುರಿತ ಪತ್ರ ತಮಗೆ ತಲುಪಿದೆ. ಪ್ರಶ್ನೋತ್ತರ ಕಲಾಪದ ನಂತರ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದಾಗ, ಕುಮಾರಸ್ವಾಮಿ ಅವರು ಈಗಲೇ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದರು.
ನಿಯಮಾವಳಿ ಪ್ರಕಾರ ಸದ್ಯಕ್ಕೆ ಚರ್ಚೆಗೆ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ ಎಂದು ಸಭಾಧ್ಯಕ್ಷರು ಹೇಳಿದಾಗ, ಕುಮಾರಸ್ವಾಮಿ ಸುಮ್ಮನಾದರು.
