ಕನ್ನಡ ವಾರ್ತೆಗಳು

ಅಂಚೆ ವಿಂಗಡನಾ ಕೇಂದ್ರದ ನವೀಕೃತ ಕಚೇರಿ ಉದ್ಗಾಟನೆ.

Pinterest LinkedIn Tumblr

Post_offc_photo_1

ಮಂಗಳೂರು,ಜುಲೈ.11: ನಗರದ ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ಮಂಗಳೂರು ಆರ್‌ಎಂಎಸ್‌ (ಅಂಚೆ ವಿಂಗಡನಾ ಕೇಂದ್ರ) ನವೀಕೃತ ಕಾಂಪ್ಲೆಕ್ಸ್‌ನ್ನು ಶುಕ್ರವಾರ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಉದ್ಘಾಟಿಸಿ ಅಂಚೆ ಇಲಾಖೆಯ ದ. ಕರ್ನಾಟಕ ವಲಯದಲ್ಲಿ ದ. ಕನ್ನಡ, ಉಡುಪಿ ಹೆಚ್ಚು ಆದಾಯ ತರುವ ಜಿಲ್ಲೆಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂಚೆ ಕಚೇರಿಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಹಲವು ಹೊಸ ಪರಿಕಲ್ಪನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಮಂಗಳೂರಿನಲ್ಲಿ ಇಲಾಖೆಯ ಪ್ರಾದೇಶಿಕ ಕಚೇರಿ ಸ್ಥಾಪನೆ ಈ ಭಾಗದಲ್ಲಿ ಇಲಾಖೆ ವ್ಯವಹಾರ ವೃದ್ಧಿಗೆ ಪೂರಕವಾಗಲಿದೆ. ನಮ್ಮ ಜಿಲ್ಲೆಯವರೇ ಆದ ಶೀರ್ತಾಡಿ ರಾಜೇಂದ್ರ ಕುಮಾರ್‌ ದಕ್ಷಿಣ ಕರ್ನಾಟಕ ಪ್ರಾದೇಶಿಕ ಪೋಸ್ಟ್‌ಮಾಸ್ಟರ್‌ ಜನರಲ್‌ ಆಗಿದ್ದಾರೆ ಎಂದರು.

Post_offc_photo_2

ಅಂಚೆ ಇಲಾಖೆ ದೇಶದಲ್ಲಿ ನೀಡುತ್ತಿರುವ ಸೇವೆ ಮಹತ್ತರವಾದುದು. ಪ್ರಸ್ತುತ ಪರಿವರ್ತನೆಗಳ ಕಾಲಘಟ್ಟದಲ್ಲಿ ಅಂಚೆ ಇಲಾಖೆ ಹೊಸ ದಿಕ್ಕಿನಲ್ಲಿ ಮುನ್ನಡೆಯುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆ ಅಭೂತಪೂರ್ವ ಯಶಸ್ಸು ಕಂಡಿದೆ. ಅಂಚೆಕಚೇರಿಗಳಲ್ಲಿ ಬ್ಯಾಂಕಿಂಗ್‌ ಸೇವೆ, ಸರಕಾರಿ ಸೇವೆ ನೀಡುವ ವ್ಯವಸ್ಥೆ ಅನುಷ್ಠಾನಗೊಳ್ಳುತ್ತಿದೆ. ಡಿಜಿಟಲ್‌ ಇಂಡಿಯಾ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್‌ ಸೌಲಭ್ಯ ಅನುಷ್ಠಾನಗೊಳ್ಳುತ್ತಿದ್ದು, ಅಂಚೆ ಕಚೇರಿ ಮೂಲಕ ಇ- ಕಾಮರ್ಸ್‌ ಸೇವೆಯೂ ಲಭ್ಯವಾಗಲಿದೆ ಎಂದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಔದ್ಯೋಗಿಕ ಯೋಜನೆಗಳು ಸ್ಥಾಪನೆಯಾಗುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ಸಾಗುತ್ತಿವೆ. ಪ್ಲಾಸ್ಟಿಕ್‌ ಪಾರ್ಕ್‌, ಎಸ್‌ಎಝಡ್‌, ಕೌಶಲ ಅಭಿವೃದ್ಧಿ ಕೇಂದ್ರಗಳು ಸ್ಥಾಪನೆಯಾಗಲಿವೆ. ತೆಂಗು ಬೆಳೆಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿವೆ ಎಂದು ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕರ್ನಾಟಕ ವಲಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಶೀರ್ತಾಡಿ ರಾಜೇಂದ್ರ ಕುಮಾರ್‌, ಸರಕಾರಿ ಸೇವೆಗಳನ್ನು ಜನರ ಸಮೀಪಕ್ಕೆ ತರುವ ನಿಟ್ಟಿನಲ್ಲಿ ಅಂಚೆ ಇಲಾಖೆಯಲ್ಲಿ ಹಲವು ಯೋಜನೆಗಳು ಅನುಷ್ಠಾನಗೊಳಿಸಲಾಗುತ್ತಿದೆ. ಅಂಚೆಕಚೇರಿಗಳಲ್ಲಿ ಎಟಿಎಂ ಸೇವೆ ಆರಂಭಿಸಲಾಗುತ್ತಿದೆ ಎಂದರು

ಪ್ರಸ್ತಾವನೆಗೈದ ಸಿಸ್ಟಮ್‌ ಹೆಡ್‌ ವಿಶ್ವನಾಥ್‌, ಕಚೇರಿ ತೀರಾ ದುಸ್ಥಿತಿಯಲ್ಲಿದ್ದ ಸಂದರ್ಭ ಇಲ್ಲಿಗೆ ಭೇಟಿ ನೀಡಿದ್ದ ಸಂಸದ ನಳಿನ್‌ ಕುಮಾರ್‌ ಕಟೀಲು, ಕೂಡಲೇ ರೈಲ್ವೇ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ದುರಸ್ತಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಆರ್‌ಎಂಎಸ್‌ ಬೆಂಗಳೂರು ಅಧೀಕ್ಷಕ ಸನ್ನಾ ನಾಯಕ್‌ ಸ್ವಾಗತಿಸಿದರು. ಅಂಚೆ ಇಲಾಖೆ ಮಂಗಳೂರು ವಿಭಾಗದ ಮುಖ್ಯಸ್ಥ ಜಗದೀಶ ಪೈ, ಪುತ್ತೂರು ವಿಭಾಗದ ಮುಖ್ಯಸ್ಥ ಟಿ.ಜಿ. ನಾಯಕ್‌ ಉಪಸ್ಥಿತರಿದ್ದರು. ಮಂಗಳೂರು ಆರ್‌ಎಂಎಸ್‌ ಸಹಾಯಕ ಅಧೀಕ್ಷಕ ರವೀಂದ್ರ ನಾೖಕ್‌ ವಂದಿಸಿದರು. ಕೆ. ಗಾಯತ್ರಿ ಬಾಳಿಗಾ ನಿರೂಪಿಸಿದರು.

Write A Comment