ಬೆಳ್ತಂಗಡಿ, ಜುಲೈ.10 : ರಿಕ್ಷಾದ ಹಿಂದೆ ಗರ್ಭಿಣಿಯರಿಗೆ ಉಚಿತ ಪ್ರಯಾಣ ಎಂದು ಬೋರ್ಡ್ ಹಾಕಿ, ತನ್ನ ರಕ್ತದ ಗುಂಪನ್ನು ಬರೆದು ಅಗತ್ಯವಿದ್ದರೆ ಕರೆಮಾಡಿ ಎಂದು ಮೊಬೈಲ್ ನಂಬರ್ ಅನ್ನು ಬರೆದಿರುವ ರಿಕ್ಷಾವೊಂದು ಗುರುವಾಯನಕೆರೆಯ ರಿಕ್ಷಾ ನಿಲ್ದಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ತನ್ನಿಂದಾದ ರೀತಿಯಲ್ಲಿ ಇತರರಿಗೆ ನೆರವಾಗಬೇಕು ಎಂಬ ಗುರಿಯೊಂದಿಗೆ ಗುರುವಾಯನಕೆರೆಯ ಪಿಲಿಚಂಡಿಕಲ್ಲು ಸುನ್ನತ್ ಕೆರೆ ನಿವಾಸಿಯಾಗಿರುವ ಇಸ್ಹಾಕ್ ಎಂಬ ಯುವಕ ಕಳೆದ ಎರಡು ವರ್ಷಗಳಿಂದ ಉಚಿತವಾಗಿ ಈ ಸೇವೆಯನ್ನು ಮಾಡುತ್ತಾ ಬಂದಿದ್ದಾನೆ. ವೃತ್ತಿಯಲ್ಲಿ ಚಾಲಕನಾಗಿರುವ ಇಸ್ಹಾಕ್ ಗುರುವಾಯನಕೆರೆಯಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದಾನೆ. ತನ್ನ ದುಡಿಮೆಯ ಒಂದು ಪಾಲನ್ನು ಸಮಾಜಕ್ಕಾಗಿ ಮೀಸಲಿರಿಸಿದ್ದಾನೆ.
ತುರ್ತು ಅಗತ್ಯವಿದ್ದಲ್ಲಿ ಯಾರೇ ಗರ್ಭಿಣಿಯರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಈತನಿಗೆ ಕರೆ ಮಾಡಬಹುದಾಗಿದೆ. ಯಾವುದೇ ಪ್ರದೇಶದಿಂದ ಕರೆ ಬಂದರೂ ತಕ್ಷಣ ತನ್ನ ರಿಕ್ಷಾದೊಂದಿಗೆ ಅಲ್ಲಿಗೆ ಧಾವಿಸಿ ಬಂದು ಅವರ ಅಗತ್ಯಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಾನೆ. ಗುರುವಾಯನಕೆರೆ ಹಾಗೂ ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶಗಳಲ್ಲೆಲ್ಲ ಜಾತಿ ಮತ ಭೇದವಿಲ್ಲದೆ ಬಡ ಕುಟುಂಬಗಳು ಈತನ ಈ ಸೇವೆಯ ಪ್ರಯೋಜನ ಪಡೆದುಕೊಳ್ಳುತ್ತಿವೆ.
ಇದೀಗ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಮನೆಗೆ ಹೋಗಲು ಕಷ್ಟಪಡುವ ಕುಟುಂಬಗಳ ವಿಚಾರ ತಿಳಿದು ಅಲ್ಲಿನ ವೈದ್ಯರುಗಳೇ ಈತನಿಗೆ ಕರೆಮಾಡುವುದಿದೆ. ಇಂತಹವರನ್ನು ಆತ ಉಚಿತವಾಗಿ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಾನೆ. ಪ್ರತಿ ಮೂರು ತಿಂಗಳುಗಳಿಗೊಮ್ಮೆ ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಂಡಿರುವ ಈತ ಅಗತ್ಯ ಸಂದರ್ಭಗಳಲ್ಲಿ ರಕ್ತ ಬೇಕಾದಾಗ ತನ್ನ ಸ್ನೇಹಿತರ ಮೂಲಕ ಒದಗಿಸುವ ಕಾರ್ಯ ಮಾಡುತ್ತಾನೆ.
ಬಡ ಕುಟುಂಬದಿಂದ ಬಂದಿರುವ ಈತನ ತಂದೆ ಪೊಡಿಮೋನು ಗುರುವಾಯನಕೆರೆಯಲ್ಲಿಯೇ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ. ತಾಯಿ ಮೈಮುನಾ ಹಾಗೂ ಮನೆಯಲ್ಲಿರುವ ಸಹೋದರ ಹಾಗೂ ಸಹೋದರಿಗೆ ಇವರ ದುಡಿಮೆಯೇ ಆಧಾರವಾಗಿದೆ. ಎಲ್ಲ ಕಷ್ಟಗಳ ನಡುವೆಯೂ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ಈತನ ತುಡಿತ ಹಲವರು ಬಡ ಮಹಿಳೆಯರಿಗೆ ವರದಾನವಾಗಿ ಮಾರ್ಪಟ್ಟಿದೆ.
