ಮುಲ್ಕಿ, ಜುಲೈ.06 : ಮುಲ್ಕಿಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ನಾಡ ಕಚೇರಿ ಕಟ್ಟಡವು ರಾಜ್ಯದಲ್ಲಿ ಹೆಚ್ಚು ಸವಲತ್ತುಗಳನ್ನೊಳಗೊಂಡ ಉತ್ತಮ ಕಚೇರಿಯಾಗಿ ಮೂಡಿಬರಲಿದೆ. ಇದಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಮುಲ್ಕಿಯ ಕಾರ್ನಾಡಿನ ಗಾಂಧಿ ಮೈದಾನದ ಸಮೀಪವಿರುವ ಹಳೆ ನಾಡ ಕಚೇರಿಯಲ್ಲಿ ನೂತನವಾಗಿ 24 ಲಕ್ಷ ವೆಚ್ಚದಲ್ಲಿ ನಿಮಾರ್ಣವಾಗಲಿರುವ ಒಂದು ಮಹಡಿಯ ಸುಸಜ್ಜಿತವಾದ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಮುಲ್ಕಿಯಲ್ಲಿ ನಗರ ಪಂಚಾಯತ್ ನಿವೇಶನ ಗುರುತಿಸಿದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸ್ಕೇಟಿಂಗ್ ಹಾಗೂ ಸುಸಜ್ಜಿವಾದ ಮೀನು ಮಾರುಕಟ್ಟೆ ನಿರ್ಮಿಸಲಾಗುವುದು ಎಂದರು.
ನಾಡಕಚೇರಿಯ ಮೊದಲ ಹಂತದ ಕಾಮಗಾರಿಗೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಗಳನ್ನು ಬಿಡುಗಡೆಗೊಳಿಸಲಾಗುವುದು. ಎರಡನೆ ಹಂತದ ಕಾಮಗಾರಿ ಎಸ್‌ಇಝೆಡ್‌ನ ನಿಧಿಯಿಂದ ನಡಸುವ ಬಗ್ಗೆ ಮಾಹಿತಿ ನೀಡಿದರು.
ಸಸಿಹಿತ್ಲುವಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣವಾಗಲಿದ್ದು, ಕುಳಾಯಿಯಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿಮಾರ್ಣವಾಗಲಿದೆ. ಜನತೆಯ ಸಹಕಾರವಿದ್ದಲ್ಲಿ ಇನ್ನೂ ಹೆಚ್ಚಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಶಿಲಾನ್ಯಾಸ ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ ವಹಿಸಿದ್ದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಸಹಾಯಕ ಆಯುಕ್ತ ಅಶೋಕ್ ಡಿ.ಆರ್., ಮುಲ್ಕಿಯ ಕಾರ್ನಾಡಿನ ಮಾತಾ ಅಮಲೋದ್ಭವ ಚರ್ಚಿನ ಧರ್ಮಗುರು ವಂದನೀಯ ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಮುಲ್ಕಿ ಕಾರ್ನಾಡಿನ ನೂರ್ ಮಸೀದಿಯ ಖತೀಬರಾದ ಅಬ್ದುಲ್ಲಾ ದಾರಿಮಿ, ಜಿಪಂ ಸದಸ್ಯೆ ಆಶಾ ಸುವರ್ಣ, ಉದ್ಯಮಿಗಳಾದ ಎಂ.ಎಚ್.ಅರವಿಂದ ಪೂಂಜ. ಸೈಯದ್ ಕರ್ನಿರೆ, ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತು ಬಾವ, ಮಾಜಿ ಅಧ್ಯಕ್ಷ ಆಸೀಫ್ ಕೊಲ್ನಾಡ್, ಪೈಯೊಟ್ಟು ಸದಾಶಿವ ಸಾಲ್ಯಾನ್, ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಗುತ್ತಿಗೆದಾರ ಅಕ್ಷಯ್ ಪುತ್ತೂರು, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್ ಮತ್ತಿತರರು ಉಪಸ್ಥಿತರಿದ್ದರು.
ಸಹಾಯಕ ಆಯುಕ್ತ ಅಶೋಕ್ ಡಿ.ಆರ್. ಸ್ವಾಗತಿಸಿದರು, ವಿಶೇಷ ತಹಶೀಲ್ದಾರ್ ಎ.ಜಿ. ಖೇಣಿ ಪ್ರಸ್ತಾವನೆಗೈದರು, ಉಪ ತಹಶೀಲ್ದಾರ್ ಸೀತಾರಾಮ ವಂದಿಸಿದರು, ಶರತ್ ಶೆಟ್ಟಿ ನಿರೂಪಿಸಿದರು.
ಮುಲ್ಕಿಯಲ್ಲಿ ರಾಷ್ತ್ರೀಯ ಹೆದ್ದಾರಿಯ ಅವ್ಯವಸ್ತೆ ಕುರಿತು, ಬಪ್ಪನಾಡು ಬಳಿ ಅಂಡರ್ ಪಾಸ್ ರಚನೆ ಮುಂತಾದ ವಿಷಯಗಳ ಬಗ್ಗೆ ಪತ್ರಕರ್ತರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಈ ಬಗ್ಗೆ ಶೀಘ್ರದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ, ಜನಪ್ರತಿನಿಧಿಗಳ ಹಾಗೂ ಸ್ಥಳೀಯರ ಸಭೆ ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
