ಮಂಗಳೂರು,ಜುಲೈ.03: ಅಪಘಾತದಲ್ಲಿ ಮೃತಪಟ್ಟ ಮಹಿಳೆಯೊಬ್ಬರ ದೇಹದ ಅಂಗಗಳನ್ನು ದಾನ ಮಾಡುವ ಮೂಲಕ ಸಂತ್ರಸ್ತರ ಕುಟುಂಬವೊಂದು ಮಾನವೀಯತೆ ಮೆರೆದಿರುವ ಘಟನೆ ಮಂಗಳೂರಿನಲ್ಲಿ ಎರಡನೇ ಬಾರಿ ನಡೆದಿದೆ.
ಜುಲೈ 1ರಂದು ಸಂಜೆ ನಗರದ ವೆಲೆನ್ಸಿಯಾದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ಲೀನಾ ಬಿನೋಯ್ (42) ಎಂಬವರ ಕುಟುಂಬಸ್ಥರು ಮೃತರ ಅಂಗಗಳನ್ನು ದಾನಮಾಡುವ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಘಟನೆ ವಿವರ :
ಜುಲೈ1ರಂದು ಸಂಜೆ 4.30ರ ವೇಳೆ ನಗರದ ವೆಲೆನ್ಸಿಯಾದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ತಲೆಗೆ ತೀವ್ರವಾಗಿ ಗಾಯಗೊಂಡ ಲೀನಾ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಲೀನಾ ಅವರ ಮನೆಯವರು ಅದೇ ದಿನ ರಾತ್ರಿ ಲೀನಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಿದರು. ಜುಲೈ 2ರಂದು ಈಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಈ ಸಂದರ್ಭ ಅಪಘಾತದಲ್ಲಿ ತಲೆಗೆ ಬಲವಾದ ಏಟು ತಗುಲಿರುವುದರಿಂದ ಲೀನಾ ಅವರ ಮೆದುಳಿಗೆ ತೀವ್ರವಾದ ಹಾನಿಯುಂಟಾಗಿ ಮೆದುಳು ನಿಷ್ಕ್ರಿಯಗೊಂಡಿದೆ. ಮೆದುಳು ತನ್ನ ಕೆಲಸವನ್ನು ಸ್ತಬ್ದಗೊಳಿಸಿರುವುದರಿಂದ ಲೀನಾ ಅವರು ಮೃತಪಟ್ಟಿರುವುದಾಗಿ ಎ.ಜೆ. ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ.
ವೈದ್ಯರ ಹೇಳಿಕೆ ಬಳಿಕ ಲೀನಾ ಅವರ ಮನೆಯವರು ಅವರ ಅಂಗಗಳನ್ನು ದಾನಮಾಡಲು ನಿರ್ಧರಿಸಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಆಸ್ಪತ್ರೆಯೊಂದ ರಲ್ಲಿ ಮೂತ್ರಪಿಂಡ ಹಾಗೂ ಯಕೃತ್ತುಗಳ ಅಗತ್ಯವಿರುವ ಮಾಹಿತಿ ಪಡೆದ ಲೀನಾ ಅವರ ಮನೆಯವರು ಆಸ್ಪತ್ರೆಯ ಮೂಲಕ ಝೋನಲ್ ಕೋ-ಆರ್ಡಿನೇಶನ್ ಕಮಿಟಿಗೆ ವಿಷಯ ರವಾನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 12. 30ರ ಜೆಟ್ ಏರ್ವೇಸ್ ಮೂಲಕ ಬೀನಾ ಅವರ ಯಕೃತ್ತು ಬೆಂಗಳೂರಿಗೆ ರವಾನಿಸಲಾಗಿದೆ. ಕಿಡ್ನಿ ಕಳುಹಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.





