ಕುಂದಾಪುರ: ತಾಲ್ಲೂಕಿನ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇರುವ ಮೊಬೈಲ್ ಅಂಗಡಿಯೊಂದಕ್ಕೆ ಬುಧವಾರ ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಮೊಬೈಲ್‌ಗಳನ್ನು ಕದ್ದೊಯ್ದಿದ್ದು ಗುರುವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.
ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿ-66 ರ ಸಮೀಪದಲ್ಲಿಯೇ ಇರುವ ಶ್ರೀ ಕೋಟಿಲಿಂಗೇಶ್ವರ ಟವರ್‍ಸ್ ನಲ್ಲಿರುವ ಸನ್ನಿಧಿ ಮೊಬೈಲ್ ಕೇರ್ ಎಂಬ ಅಂಗಡಿಯಲ್ಲಿ ತಡರಾತ್ರಿ ಕಳ್ಳತನ ನಡೆದಿದ್ದು, ನಾಲ್ಕುವರೆ ಲಕ್ಷ ಮೌಲ್ಯದ 60 ಕ್ಕೂ ಅಧಿಕ ಹೊಸ ಮೊಬೈಲು ಫೋನುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಘಟನೆ ವಿವರ: ಕೋಟೇಶ್ವರದ ಹಳೆಅಳಿವೆ ನಿವಾಸಿಯಾದ ಸುರೇಶ್ ಪೂಜಾರಿ ಮಾಲೀಕತ್ವದ ಮೊಬೈಲ್ ಅಂಗಡಿ ಇದಾಗಿದ್ದು, ಸುಮಾರು 5-6 ವರ್ಷಗಳಿಂದ ಕೋಟಿಲಿಂಗೇಶ್ವರ ಟವರ್‍ಸ್‌ನ ಮೊದಲಂತಸ್ತಿನಲ್ಲಿ ಈ ಅಂಗಡಿ ಇತ್ತು. ಬುಧವಾರ ರಾತ್ರಿ ಎಂದಿನಂತೆಯೇ ಅಂಗಡಿ ಮುಚ್ಚಿ ಮನೆಗೆ ತೆರಳಿದ ಸುರೇಶ್ ಪೂಜಾರಿ ಅವರು ಗುರುವಾರ ಬೆಳಿಗ್ಗೆ ಅಂಗಡಿಗೆ ಬಂದಾಗ ಶಟರ್ ಅರ್ಧಕ್ಕೆ ತೆರೆದ ಸ್ಥಿತಿಯಲ್ಲಿತ್ತು. ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರತಿ ನಿತ್ಯವೂ ಅಂಗಡಿಯಲ್ಲಿರುವ ಬಹುತೇಕ ಎಲ್ಲಾ ಮೊಬೈಲ್‌ಗಳನ್ನು ಮನೆಗೆ ಕೊಂಡುಹೋಗುವ ಪರಿಪಾಠವಿಟ್ಟುಕೊಂಡಿದ್ದ ಸುರೇಶ್ ಅವರು ಮಳೆಗಾಲವಾದ ಕಾರಣ ಕಳೆದ ಹದಿನೈದು ದಿನಗಳಿಂದ ಮೊಬೈಲುಗಳನ್ನು ಮನೆಗೆ ಕೊಂಡೊಯ್ಯುತ್ತಿರಲಿಲ್ಲ ಎನ್ನಲಾಗಿದೆ. ಬುಧವಾರ ತಡರಾತ್ರಿ ಈ ಕೃತ್ಯ ನಡೆದಿದ್ದು ರಾಷ್ಟ್ರೀಯ ಹೆದ್ದಾರಿ ಸಮೀಪವೇ ಈ ಘಟನೆ ನಡೆದಿದ್ದು ಜನರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಶಟರ್ ಬೀಗ ಮುರಿದ ಕಳ್ಳರು: ಮೊಬೈಲ್ ಅಂಗಡಿಯ ಎರಡು ಕಡೆಯ ಶಟರ್ ಬೀಗವನ್ನು ಮುರಿದ ಕಳ್ಳರು ಒಳಗೆ ನುಸುಳಿ ಅಂಗಡಿಯೊಳಗೆ ಶೋಕೇಸ್ ಹಾಗೂ ಇತರೆಡೆಯಲ್ಲಿದ್ದ ಹೊಸ ಮೊಬೈಲುಗಳನ್ನು ಕದ್ದು ಪರಾರಿಯಾಗಿದ್ದಾರೆ. ಸುಮಾರು 60 ಕ್ಕೂ ಅಧಿಕ ಮೊಬೈಲುಗಳನ್ನು ಕದ್ದಿರುವ ಬಗ್ಗೆ ಅಂಗಡಿ ಮಾಲೀಕರು ತಿಳಿಸಿದ್ದು ಅಂದಾಜು 4.5 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ಕಳವಾಗಿದೆ ಎನ್ನಲಾಗಿದೆ.
ಬೃಹತ್ ಜಾಲದ ಶಂಕೆ: ಉಡುಪಿ ಹಾಗೂ ಕಾರ್ಕಳದಲ್ಲಿ ಕಳೆದೆರಡು ದಿನಗಳಿಂದಲೂ ಸರಣಿ ಕಳ್ಳತನಗಳು ನಡೆಯುತ್ತಿದ್ದು ಯಾವುದೇ ಬ್ರಹತ್ ಜಾಲವೊಂದು ಈ ಕಳ್ಳತನ ಕೃತ್ಯದಲ್ಲಿ ಸಕ್ರೀಯವಾಗಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಮಳೆಗಾಲವನ್ನೇ ಅಸ್ತ್ರವನ್ನಾಗಿಸಿಕೊಳ್ಳುವ ಈ ಜಾಲ ದಿನಕ್ಕೊಂದು ಊರಿನಲ್ಲಿ ಕಳ್ಳತನವೆಸಗಿ ಪರಾರಿಯಾಗುತ್ತಿದ್ದಾರೆ. ಕಳೆದ ವರ್ಷವೂ ಕೋಟೇಶ್ವರದಲ್ಲಿ ಮೊಬೈಲ್ ಅಂಗಡಿ ಹಾಗೂ ಚಿನ್ನದಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿತ್ತು.
ಸ್ಥಳಕ್ಕೆ ಡಿವೈಎಸ್ಪಿ ಭೇಟಿ: ಕಳ್ಳತನ ನಡೆದ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್, ಎಸ್ಸೈ ನಾಸೀರ್ ಹುಸೇನ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಶ್ವಾನವು ಅಂಗಡಿ ಸಮೀಪಕ್ಕೆ ಅನತಿ ದೂರ ತೆರಳಿ ವಾಪಾಸ್ಸಾಗಿದ್ದು, ಕಳ್ಳರು ದೂರದಲ್ಲಿ ವಾಹನ ನಿಲ್ಲಿಸಿ ಬಳಿಕ ಅಂಗಡಿ ಕಳ್ಳತನವೆಸಗಿ ವಾಪಾಸ್ಸಾಗಿದ್ದಾರೆ ಎನ್ನಲಾಗುತ್ತಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಚಿತ್ರ ಮತ್ತು ವರದಿ- ಯೋಗೀಶ್ ಕುಂಭಾಸಿ




































