ಮಂಗಳೂರು,ಜುಲೈ.01 : ಕೆನರಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಕೆನರಾ ಹೈಸ್ಕೂಲ್ ಆಸೋಸಿಯೇಶನ್‌ನ ಶತಮಾನೋತ್ತರ ಬೆಳ್ಳಿಹಬ್ಬ ಸಂಭ್ರಮಾಚರಣೆಗೆ ನಗರದ ಟಿ.ವಿ ರಮಣ ಪೈ ಕನ್ವೆನ್ಯನ್ ಸೆಂಟರ್ ನಲ್ಲಿ ಟಾಟಾ ಸನ್ಸ್ ಗ್ರೂಪ್ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯ ಹರೀಶ್ ಭಟ್ ಮಂಗಳವಾರ ಚಾಲನೆ ನೀಡಿದರು.
ಬಳಿಕ ಮಾತಾನಾಡಿದ ಅವರು ಉತ್ತಮ ಗುಣಮಟ್ಟದ ಶಿಕ್ಷಣದ ಮೂಲಕ 125 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಕೆನರಾ ವಿದ್ಯಾಸಂಸ್ಥೆಯು ಲಕ್ಷಾಂತರ ಸಾಧಕ, ಶ್ರೇಷ್ಠರನ್ನು ರೂಪಿಸಿ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸೇವೆ ಸಲ್ಲಿಸುವಲ್ಲಿ ಯಶಸ್ಸು ಕಂಡಿದೆ. ಶಿಕ್ಷಣ ಸಂಸ್ಥೆಗಳ ಆತ್ಮ ಆ ಸಂಸ್ಥೆಯ ಶಿಕ್ಷಕರು. ಅವರ ಮೂಲಕವೇ ಶಿಕ್ಷಣ ಸಂಸ್ಥೆಗಳ ಉನ್ನತಿ ದಾಖಲಾಗುತ್ತದೆ. ವಿದ್ಯಾರ್ಥಿಗಳನ್ನು ರೂಪಿಸಿಕೊಂಡು ಅವರ ಭವಿಷ್ಯಕ್ಕೆ ಬೆಳಕನ್ನು ನೀಡುವ ಮಾದರಿ ಶಿಕ್ಷಕರ ಮೂಲಕವಾಗಿ ಶಿಕ್ಷಣ ಕ್ಷೇತ್ರ ಇಂದು ಉನ್ನತಿಯನ್ನು ಕಂಡಿದೆ. ಕೆನರಾ ಹೈಸ್ಕೂಲ್ ಅಸೋಶಿಯೇಶನ್‌ನ ದಕ್ಷ ಹಾಗೂ ಅರ್ಪಣಾ ಮನೋಭಾವದ ನಾಯಕತ್ವದ ಮೂಲಕ ಕೆನರಾ ವಿದ್ಯಾಸಂಸ್ಥೆಗಳು ನಿರಂತರ ಉನ್ನತಿಯನ್ನು ಪಡೆದು ಮುನ್ನಡೆದುಕೊಂಡು ಬಂದಿದೆ ಎಂದರು.
ಕೆನರಾ ಶಿಕ್ಷಣ ಸಂಸ್ಥೆಗಳ ಪ್ರಗತಿಯಲ್ಲಿ ಕೈ ಜೋಡಿಸಿದ ದಾನಿಗಳು, ಪ್ರಮುಖರು ಹಾಗೂ ಕಟ್ಟಡ ಕಾಮಗಾರಿ ನಿರ್ವಹಿಸಿದವರನ್ನು ಇದೇ ವೇಳೆ ಗೌರವಿಸಲಾಯಿತು . ಈ ಸಂಧರ್ಭದಲ್ಲಿ ಕೆನರಾ ಸಂಸ್ಥೆಯ ಪೂರ್ಣ ರೀತಿಯ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಸೆಂಚೂರಿ ಗ್ರೂಪ್‌ನ ಪ್ರಮೋಟರ್ ಪಿ. ಸತೀಶ್ ಪೈ, ನಿವೃತ್ತ ಐಎಎಸ್ ಅಧಿಕಾರಿ ಪಿ.ಸಿ. ನಾಯಕ್, ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಡಿಜಿಎಂ ಜಿ.ವಿ. ಪ್ರಭು ಅವರು ಶುಭ ಕೋರಿದರು. ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ, ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಎಸ್.ಎಸ್. ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆನರಾ ಅಸೋಸಿಯೇಶನ್ ಉಪಾಧ್ಯಕ್ಷ ಎಂ. ಅಣ್ಣಪ್ಪ ಪೈ ಮಾತನಾಡಿ, ಸೆಪ್ಟಂಬರ್ 5ರ ಶಿಕ್ಷಕರ ದಿನಾಚರಣೆಯಂದು “ಕೆನರಾ ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿ’ ಆರಂಭಿಸಲಾಗುವುದು. ಪ್ರಾರಂಭಿಕ ನೆಲೆಯಲ್ಲಿ ಇದಕ್ಕೆ ಡಾ| ಪಿ. ದಯಾನಂದ ಪೈ ಹಾಗೂ ಪಿ. ಸತೀಶ್ ಪೈ ಟ್ರಸ್ಟ್ ಮೂಲಕ 10 ಲಕ್ಷ ರೂ.ಗಳಿಗೂ ಅಧಿಕ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರಕಟಿಸಿದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನಿನ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಅವರು ಕೆನರಾ ಸಂಸ್ಥೆಗಳ ಮುನ್ನೋಟ ನೀಡಿದರು. ಕೋಶಾಧಿಕಾರಿ ಪಿ. ಗೋಪಾಲಕೃಷ್ಣ ಶೆಣೈ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಕೆ. ಸುರೇಶ್ ಕಾಮತ್ ಪ್ರಸ್ತಾವಿಸಿದರು. ಸದಸ್ಯರಾದ ಮಾರೂರು ಸುಧೀರ್ ಪೈ, ಎಂ. ಪದ್ಮನಾಭ ಪೈ, ಬಸ್ತಿ ಪುರುಷೋತ್ತಮ ಶೆಣೈ, ಎಂ. ಗಣೇಶ್ ಕಾಮತ್, ಶ್ರೀಕಾಂತ್ ಪೈ ಕಸ್ತೂರಿ ಅತಿಥಿ ಪರಿಚಯ ಮಾಡಿದರು.
ಜತೆ ಕೋಶಾಧಿಕಾರಿ ಎಂ. ವಾಮನ ಕಾಮತ್, ಕಾರ್ಯಕಾರಿ ಸದಸ್ಯರಾದ ಕೊಚ್ಚಿಕಾರ್ ಸುಧಾಕರ ಪೈ, ಟಿ. ಗೋಪಾಲಕೃಷ್ಣ ಶೆಣೈ, ಡಾ | ಉಮಾನಂದ ಮಲ್ಯ, ವಿಶೇಷ ಆಹ್ವಾನಿತರಾದ ಎಂ. ಎಂ. ಕಾಮತ್ ಮುಂತಾದವರು ಉಪಸ್ಥಿತರಿದ್ದರು.