ಕನ್ನಡ ವಾರ್ತೆಗಳು

ಚಿನ್ನಕ್ಕಾಗಿ ಹೆಂಗಸಿನ ಕೊಲೆ, ಕೊಲೆ ಮುಚ್ಚಿಹಾಕಲು ಇನ್ನೊಬ್ಬನ ಮರ್ಡರ್: ಅವಳಿ ಕೊಲೆ ಆರೋಪಿ ಖುಲಾಸೆ

Pinterest LinkedIn Tumblr

court

ಉಡುಪಿ: ಅವಳಿ ಕೊಲೆ ಆರೋಪಿ ಉಡುಪಿ ಪುತ್ತೂರು ನಯಂಪಳ್ಳಿ ನಿವಾಸಿ ಅಣ್ಣಪ್ಪ ಪೂಜಾರಿ (32) ಖುಲಾಸೆಗೊಂಡಿದ್ದಾರೆ. ಚಿನ್ನಾಭರಣದ ಆಸೆಗಾಗಿ 2012 ಜು. 3ರಂದು ಹಾವಂಜೆಯಲ್ಲಿ ವೃದ್ಧೆ ರಾಧು ಮರಕಾಲ್ತಿ ಅವರ ಕೊಲೆ ನಡೆದಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಅಣ್ಣಪ್ಪ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಜು. 10ರಂದು ಪುತ್ತೂರು ನಯಂಪಳ್ಳಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಕಸ್ಟಡಿಯಲ್ಲಿದ್ದ ಅಣ್ಣಪ್ಪ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಮೃತ ವ್ಯಕ್ತಿ ಉಮೇಶ ಪೂಜಾರಿ ಎನ್ನುವುದನ್ನು ಪೊಲೀಸರು ದಾಖಲಿಸಿದ್ದರು. 2012ರ ಜು. 6ರಂದು ಚಿನ್ನಾ ಭರಣದ ಸಲುವಾಗಿ ಇಬ್ಬರಿಗೂ ಜಗಳವಾಗಿ ಈ ಸಂದರ್ಭ ಉಮೇಶನು, ರಾಧು ಮರಕಾಲ್ತಿಯನ್ನು ಕೊಂದ ವಿಷಯವನ್ನು ಪೊಲೀಸರಿಗೆ ಹೇಳುತ್ತೇನೆ ಎಂದು ಅಣ್ಣಪ್ಪನಿಗೆ ಹೆದರಿಸಿದ್ದ. ಈ ಕಾರಣಕ್ಕಾಗಿ ಅದೇ ದಿನ ರಾತ್ರಿ ಉಮೇಶನಿಗೆ ಕುಡಿಸಿ ಅಣ್ಣಪ್ಪ ಕೊಲೆ ನಡೆಸಿದ್ದ ಎಂದು ವಿಚಾರಣೆಯಲ್ಲಿ ಪೊಲೀಸರಿಗೆ ತಿಳಿದು ಅದರಂತೆ ಚಾರ್ಜ್‌ಶೀಟ್ ಕೂಡ  ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಣ್ಣಪ್ಪನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು.

ರಾಧು ಮರಕಾಲ್ತಿ ಕೊಲೆ ಪ್ರಕರಣದಲ್ಲಿ ಕಳೆದ ಆರು ತಿಂಗಳ ಹಿಂದೆಯೇ ಅಣ್ಣಪ್ಪ ಖುಲಾಸೆಗೊಂಡಿದ್ದರು. ಆದರೆ ಉಮೇಶನ ಕೊಲೆ ಪ್ರಕರಣದ ತೀರ್ಪು ಬಾರದಿದ್ದ ಕಾರಣ ನ್ಯಾಯಾಂಗ ಬಂಧನದಲ್ಲಿಯೇ ಇದ್ದರು. 39 ಸಾಕ್ಷಿಗಳ ಪೈಕಿ 22 ಸಾಕ್ಷಿಗಳ ವಿಚಾರಣೆ ನಡೆಸಿದ ಕೋರ್ಟ್, ಕೊಲೆಗೆ ಸೂಕ್ತವಾದ ಸಾಕ್ಷ್ಯಾಧಾರ ಲಭಿಸದ ಕಾರಣ  ಆರೋಪಿಯನ್ನು ಖುಲಾಸೆಗೊಳಿಸಿದೆ.

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ ಬಿ. ಅಮರಣ್ಣನವರ್ ತೀರ್ಪು ಪ್ರಕಟಿಸಿದ್ದಾರೆ. ಹಿರಿಯ ನ್ಯಾಯವಾದಿ ಎಂ. ಶಾಂತಾರಾಮ ಶೆಟ್ಟಿ ಅವರು ಆರೋಪಿ ಪರ ವಾದಿಸಿದ್ದರು

Write A Comment