
ಬೈಂದೂರು: ಅಮಾನುಷವಾಗಿ ಕೊಲೆಗೀಡಾದ ಬೈಂದೂರು ಪದವಿಪೂರ್ವ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಹೇನ್ಬೇರ್ ನಿವಾಸಕ್ಕೆ ಶಿವಮೊಗ್ಗ ಸಂಸದ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಕರಣ ನಡೆದ ತಕ್ಷಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯೊಂದಿಗೆ ಚರ್ಚಿಸಿದ್ದೇನೆ, ಆರೋಪಿಯನ್ನು ಈಗಾಗಲೇ ಪೋಲೀಸರು ಬಂಧಿಸಿದ್ದು, ಇನ್ನು ಕೆಲವರು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಬಗ್ಗೆ ಸ್ಥಳೀಯರು ದೂರುತ್ತಿದ್ದಾರೆ, ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಎಸ್ಪಿ ಅವರಿಗೆ ಸೂಚನೆ ನೀಡಲಾಗುವುದು. ಅಕ್ಷತಾಳ ಹಿರಿಯ ಸಹೋದರಿ ಅನಿತಾಳನ್ನು ದತ್ತು ಸ್ವೀಕರಿಸಿ ಆಕೆಯ ಪದವಿ ಶಿಕ್ಷಣದವರೆಗಿನ ಎಲ್ಲಾ ಶೈಕ್ಷಣಿಕ ವೆಚ್ಚವನ್ನು ಭರಿಸಲಾಗುವುದು ಎಂದ ಅವರು ಇಲ್ಲಿನ ರಸ್ತೆ ದುರಸ್ತಿಗೆ ಸಂಸದರ ನಿಧಿಯಿಂದ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಗೀತಾಂಜಲಿ ಸುವರ್ಣ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಬಿ.ಎಸ್. ಸುರೇಶ ಶೆಟ್ಟಿ, ಗುರುರಾಜ ಗಟಿಹೊಳೆ, ರಾಜ್ಯ ಬಿಜೆಪಿ ರೈತಮೋರ್ಚಾದ ಉಪಾಧ್ಯಕ್ಷ ದೀಪಕ್ ಕುಮಾರ ಶೆಟ್ಟಿ, ಸದಾಶಿವ ಪಡುವರಿ ಮತ್ತಿತರರು ಉಪಸ್ಥಿತರಿದ್ದರು.




