ಮಂಗಳೂರು, ಜೂನ್. 21: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಎಂಬಲ್ಲಿ ಶನಿವಾರ ಮಧ್ಯಾಹ್ನ ಶಾಲೆಯಿಂದ ಹಿಂದಿರುಗುತ್ತಿದ್ದ 9ನೆ ತರಗತಿಯ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸಿರುವ ದ.ಕ. ಜಿಲ್ಲಾ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದ.ಕ. ಜಿಲ್ಲಾ ಎಸ್ಪಿ ಶರಣಪ್ಪ, 16 ವರ್ಷದ ಬಾಲಕಿ, ಪ್ರಸ್ತುತ 9ನೆ ತರಗತಿಯ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣದ ಆರೋಪಿ ಕೊಲ ಗ್ರಾಮದ ಕಲ್ಮಾಡಿಯ ನಿವಾಸಿ ಶೇಖರ ಕೆ. (30) ಎಂಬಾತನನ್ನು ಬಂಧಿಸಿರುವುದಾಗಿ ತಿಳಿಸಿದರು.
ವಿದ್ಯಾರ್ಥಿನಿ ಜೂನ್ 20ರಂದು ಬೆಳಗ್ಗೆ ತನ್ನ ಮನೆಯಾದ ಕೊಲದಿಂದ ಫಾರ್ಮ್‌ಗೇಟ್‌ವರೆಗೆ 3.5 ಕಿ.ಮೀ ದೂರ ನಡೆದು ಅಲ್ಲಿಂದ ಜೀಪೊಂದರಲ್ಲಿ ಉಪ್ಪಿನಂಗಡಿ ಶಾಲೆ ಹೋದವಳು ಮಧ್ಯಾಹ್ನ 1 ಗಂಟೆಗೆ ಒಬ್ಬಂಟಿಯಾಗಿ ಒಳಕಡಮ-ಕೊನೆಮಜಲು ದಾರಿಯಾಗಿ ಮನೆಗೆ ಹಿಂದಿರುಗುತ್ತಿದ್ದಾಗ ಪದವು ಎಂಬಲ್ಲಿ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಆಕೆಯ ಚೂಡಿದಾರದ ಶಾಲನ್ನು ಬಾಯಿಗೆ ತುರುಕಿಸಿ ಸುಮಾರು 100 ಮೀ. ದೂರದ ಅಕೇಶಿಯಾ ಕಾಡಿನೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದ. ಈ ಬಗ್ಗೆ ವಿದ್ಯಾರ್ಥಿನಿ ತನ್ನ ಹೆತ್ತವರೊಂದಿಗೆ ಶನಿವಾರ ಸಂಜೆ ಕಡಬ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಳು ಎಂದು ಎಸ್ಪಿ ವಿವರಿಸಿದರು.
ಆದರೆ ವಿದ್ಯಾರ್ಥಿನಿಗೆ ಆರೋಪಿಯ ಪರಿಚಯ ಇಲ್ಲದಿದ್ದುದರಿಂದ ಆತ ತೊಟ್ಟಿದ್ದ ಲುಂಗಿಯ ಬಣ್ಣ, ಅರ್ಧ ಕೈಯ ಕಪ್ಪುಬಣ್ಣದ ಅಂಗಿ, ಕಪ್ಪಗಿದ್ದು ಮತ್ತು ತೆಳ್ಳಗಿನ ವ್ಯಕ್ತಿ, ಕಪ್ಪು ಬಣ್ಣದ ಚಪ್ಪಲಿ ಧರಿಸಿದ್ದ ಎಂಬಿತ್ಯಾದಿ ಬಾಲಕಿ ನೀಡಿದ ಮಾಹಿತಿ ಮೇರೆಗೆ ಎಎಸ್ಪಿ ಬಂಟ್ವಾಳ ಹಾಗೂ ಡಿಎಸ್‌ಪಿ ಪುತ್ತೂರು ಅವರ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಶರಣಪ್ಪ ಮಾಹಿತಿ ನೀಡಿದರು.
ಸಂತ್ರಸ್ತ ಬಾಲಕಿಯನ್ನು ವಿಚಾರಿಸಲಾಗಿ ಆಕೆಯಿಂದ ಆರೋಪಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬಂದಿದ್ದು, ಅದರಂತೆ ಆತನು ಗುಟ್ಕಾ ತಿಂದು ಹಲ್ಲು ಕೆಂಪಾಗಿದ್ದು, ಗುಂಗುರು ಕೂದಲು ಮತ್ತು ಕುರುಚಲು ಗಡ್ಡ ಹೊಂದಿದ್ದನೆಂಬುದಾಗಿ ತಿಳಿದು ವಿಷಯವನ್ನು ಎಲ್ಲಾ ಸಿಬ್ಬಂದಿಗೆ ರವಾನಿಸಿ ಪತ್ತೆಗೆ ಸೂಚಿಸಲಾಗಿತ್ತು. ಅದರಂತೆ ಅಧಿಕಾರಿ, ಸಿಬ್ಬಂದಿ ಗ್ರಾಮಗಳಲ್ಲಿ ಸಂಚರಿಸಿ ಆರೋಪಿಯ ಕುರಿತು ವಿಚಾರಿಸಿದ್ದು, ಪ್ರಸ್ತುತ ಚಹರೆಗೆ ಹೋಲುವ ವ್ಯಕ್ತಿಯು ಕೊಲದಲ್ಲಿ ಕೆಲಸಕ್ಕೆ ಹೋಗುತ್ತಾನೆ ಎಂದು ತಿಳಿದುಬಂದಿತ್ತು. ಆದರೆ ಆರೋಪಿ ಅಲ್ಲಿ ಪತ್ತೆಯಾಗಿರಲಿಲ್ಲ ಎಂದು ಎಸ್ಪಿ ತಿಳಿಸಿದರು.ಅನಂತರ ಸಂಶಯದ ಮೇಲೆ ಶೇಖರ ಕೆ. ಎಂಬಾತನನ್ನು ಜೂನ್ 21ರಂದು ಕಡಬ ಪಿಎಸ್ಸೈ ಮತ್ತು ಸಿಬ್ಬಂದಿ ವಶಕ್ಕೆ ಪಡೆದು ಕಡಬ ಠಾಣೆಯಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ಮುಂದೆ ಹಾಜರುಪಡಿಸಿದರು. ವಶಕ್ಕೆ ಪಡೆದ ಶೇಖರ ಕೆ. ಎಂಬಾತನನ್ನು ಬಾಲಕಿಗೆ ತೋರಿಸಲಾಗಿದ್ದು, ಆಕೆ ಈತನನ್ನು ಗುರುತಿಸಿದ್ದಾಳೆ ಎಂದು ಅವರು ವಿವರಿಸಿದರು.
ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿ ಯಾಗಿದ್ದು, ಹಿರಿಯ ಅಧಿಕಾರಿಗಳು ಪ್ರಶಂಸಿ ಸಿದ್ದಾರೆ. ಸದರಿ ತಂಡಗಳಿಗೆ ಪ್ರಶಂಸಾಪತ್ರ ಹಾಗೂ ಸೂಕ್ತ ಬಹುಮಾನ ನೀಡುವುದಾಗಿ ಶರಣಪ್ಪ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್, ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್ ಎಸ್., ಪುತ್ತೂರು ವಿಭಾಗದ ಡಿವೈಎಸ್‌ಪಿ ಭಾಸ್ಕರ ರೈ ಎನ್.ಜಿ., ಪುತ್ತೂರು ಗ್ರಾಮಾಂತರ ಸಿಪಿಐ ಅನಿಲ್ ಎಸ್.ಕುಲಕರ್ಣಿ, ಪುತ್ತೂರು ನಗರ ಠಾಣಾ ಪಿಐ ಮಹೇಶ್ ಪ್ರಸಾದ್, ಕಡಬ ಠಾಣಾ ಪಿಎಸ್‌ಐ ಯೋಗೀಶ್ ಕುಮಾರ್, ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ರಕ್ಷಿತ್ ಮೊದಲಾದವರು ಪಾಲ್ಗೊಂಡಿದ್ದರು.


