ಬೆಂಗಳೂರು, ಜೂ.19: ಬೆಳಗಾವಿ ಅಧಿವೇಶನದ ವೇಳೆ ಸರ್ಕಾರದ ವಿರುದ್ಧ ರೂಪಿಸಬೇಕಾದ ರಣತಂತ್ರ, ಬಿಬಿಎಂಪಿ ಚುನಾವಣೆ ಪೂರ್ವಸಿದ್ಧತೆ, ಪಕ್ಷದ ಸಂಘಟನೆ ಚುರುಕುಗೊಳಿಸುವುದು ಸೇರಿದಂತೆ ಮತ್ತಿತರ ಪ್ರಮುಖ ವಿಷಯಗಳು ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಬಿಜೆಪಿ ತೀರ್ಮಾನಿಸಿದೆ.
ಬೆಂಗಳೂರಿನ ಹೊರವಲಯದ ಯಲಹಂಕ ಬಳಿಯಿರುವ ರೆಸಾರ್ಟ್‌ವೊಂದರಲ್ಲಿ ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಈ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪರಿಷತ್ ನಾಯಕ ಕೆ.ಎಸ್.ಈಶ್ವರಪ್ಪ, ಮುಖಂಡರಾದ ಆರ್.ಅಶೋಕ್, ಗೋವಿಂದ ಕಾರಜೋಳ, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಶಾಸಕಾಂಗ ಸಭೆಯಲ್ಲಿ ಸರ್ಕಾರದ ವಿರುದ್ಧ ಸದನದ ಒಳಗೂ ಮತ್ತು ಹೊರಗೂ ಹೋರಾಟ ನಡೆಸಬೇಕೆಂಬ ತೀರ್ಮಾನಕ್ಕೆ ಬರಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪ್ರಮುಖವಾಗಿ ಕಬ್ಬು ಬೆಳೆಗಾರರು ಸಂಕಷ್ಟ ಸ್ಥಿತಿಯಲ್ಲಿದ್ದು, ಅವರ ಬಾಕಿ ಹಣವನ್ನು ಪಾವತಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂಬ ಇಂಗಿತವನ್ನು ಅನೇಕ ಶಾಸಕರು ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಭತ್ತ, ಮೆಕ್ಕೆಜೋಳ, ತೊಗರಿ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಅಧಿವೇಶನದಲ್ಲಿ ಹೋರಾಟ ನಡೆಸಲು ಪ್ರಮುಖರು ತೀರ್ಮಾನಿಸಿದ್ದಾರೆ. ಇದೇ 29ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭವಾಗಲಿರುವ ಅಧಿವೇಶನದ ವೇಳೆ ಪ್ರಮುಖವಾಗಿ ಅನ್ನದಾತನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದರ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮುಂದಾಗಿದೆ.
ವಿವಿಧ ಸಕ್ಕರೆ ಮಾಲೀಕರು ಬಾಕಿ ಉಳಿಸಿಕೊಂಡಿರುವ 4,600 ಕೋಟಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿ ಮಾಡಿರುವ ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ಒತ್ತಡ ಹಾಕಬೇಕೆಂದು ಕೆಲ ಶಾಸಕರು ಮುಖಂಡರಿಗೆ ಸಲಹೆ ಮಾಡಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಯಾವ ಯಾವ ಕಡೆ ಹಿನ್ನಡೆಯಾಗಿದೆಯೋ ಅಂತಹ ಕಡೆ ಪಕ್ಷದ ಸಂಘಟನೆಗೆ ಒತ್ತು ನೀಡುವುದು ಹೋಬಳಿ ಮಟ್ಟದಿಂದ ಜಿಲ್ಲಾ ಹಂತದವರೆಗೂ ಮಹಾ ಸಂಪರ್ಕ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಕಡೆಗಣಿಸದಂತೆ ಎಚ್ಚರ ವಹಿಸಬೇಕೆಂದು ಬಿಜೆಪಿ ವರಿಷ್ಠರು ಕಿರಿಯ ಶಾಸಕರಿಗೆ ಸೂಚಿಸಿದ್ದಾರೆ. ಜೆಡಿಎಸ್ ಪಾದಯಾತ್ರೆ ಹೆಸರಿನಲ್ಲಿ ಪಕ್ಷದ ಸಂಘಟನೆಗೆ ಮುಂದಾಗಿದೆ. ಇದಕ್ಕೆ ಅವಕಾಶ ನೀಡದೆ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂಬ ಮಾತು ವ್ಯಕ್ತವಾಗಿದೆ. ಬೆಳಗಾವಿ ಅಧಿವೇಶನದ ಕಲಾಪದ ವೇಳೆ ಎಲ್ಲ ಶಾಸಕರು ಕಡ್ಡಾಯವಾಗಿ ಭಾಗವಹಿಸಬೇಕು. ಪ್ರತಿಪಕ್ಷದ ನಾಯಕರು ಹಾಗೂ ಪ್ರಮುಖರು ಎತ್ತುವ ವಿಷಯಗಳಿಗೆ ಎಲ್ಲರೂ ದನಿಗೂಡಿಸುವಂತೆ ಮುಖಂಡರು ಸಲಹೆ ಮಾಡಿದ್ದಾರೆ.
ಜೆಡಿಎಸ್‌ಗೆ ಬೆಂಬಲವಿಲ್ಲ:
ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು 25 ರಿಂದ 29ರ ವರೆಗೆ ಧಾರವಾಡದಿಂದ ಬೆಳಗಾವಿವರೆಗೆ ಜೆಡಿಎಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಗೆ ಬೆಂಬಲ ನೀಡದಿರಲು ಬಿಜೆಪಿ ಮುಂದಾಗಿದೆ. ಪಾದಯಾತ್ರೆ ಬದಲಿಗೆ ಸದನದಲ್ಲಿ ರೈತರ ಪರ ಹೋರಾಟ ನಡೆಸಿ ಪರಿಹಾರ ಒದಗಿಸಿಕೊಡಬೇಕು. ಯಾವ ಕಾರಣಕ್ಕೂ ಜೆಡಿಎಸ್ ಹೈಜಾಕ್ ಮಾಡಿಕೊಳ್ಳದಂತೆ ಎಚ್ಚರದಿಂದ ಇರಬೇಕೆಂಬ ಮಾತುಗಳು ಸಭೆಯಲ್ಲಿ ವ್ಯಕ್ತವಾದವು. ಉಳಿದಂತೆ ಪಕ್ಷದ ಸಂಘಟನೆ, ಮಹಾ ಸಂಪರ್ಕ ಅಭಿಯಾನ ಹಾಗೂ ಇದೇ 23ರಂದು ನರಗುಂದದಲ್ಲಿ ನಡೆಯಲಿರುವ ಕರ್ನಾಟಕ ಕೇಸರಿ ಜಗನ್ನಾಥ್‌ರಾವ್ ಜೋಷಿ ಸ್ಮರಣಾರ್ಥ ನಡೆಯಲಿರುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ವರಿಷ್ಠರು ತೀರ್ಮಾನಿಸಿದ್ದಾರೆ.
