ನವದೆಹಲಿ: ಆಮ್ ಆದ್ಮಿ ಪಕ್ಷದ ನಸೀಬು ಕೆಟ್ಟಿದೆ ಅಂತಾ ಕಾಣಿಸುತ್ತೆ. ಪ್ರತಿದಿನ ಒಂದಲ್ಲ ಒಂದು ರಗಳೆ ಸುತ್ತಿಕೊಳ್ಳುತ್ತಲೇ ಇದೆ. ಕಳೆದ ಒಂದು ವಾರದಿಂದ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮಾರ್ ನಕಲಿ ಪದವಿ ಪ್ರಮಾಣ ಪತ್ರ ಹಾಗೂ ಸೋಮನಾಥ್ ಭಾರ್ತಿ ಕೌಟುಂಬಿಕ ಕಲಹದಿಂದ ಭಾರೀ ಮುಜುಗರ ಅನುಭವಿಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಕಂಟಕ ಶುರುವಾಗುತ್ತಿದೆ.
ಸುಮಾರು 25 ವಿವಿಧ ಪ್ರಕರಣಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಪ್ ನ 20 ಶಾಸಕರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ.
ಸಿಎಂ ಕೇಜ್ರಿವಾಲ್ ಹೆಸರಿನಲ್ಲಿ ಅವರ ವಿರುದ್ಧ ರಾಜಕೀಯ ಕಾರಣಗಳ ಸಂಬಂಧ 6 ಪ್ರಕರಣಗಳು ದಾಖಲಾಗಿವೆ. ಗಂಭೀರ ಸ್ವರೂಪದ ಪ್ರಕರಣಗಳಾದ ನಕಲಿ ಪದವಿ, ಕೌಟುಂಬಿಕ ಹಿಂಸಾಚಾರ ಮತ್ತು ಅನುಮತಿಯಿಲ್ಲದ ಸ್ಥಳಗಳಲ್ಲಿ ಮಧ್ಯ ಸಂಗ್ರಹ ಸೇರಿದಂತೆ 21 ಮಂದಿ ವಿರುದ್ಧ ಉಳಿದ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆಗೆ ದೆಹಲಿ ಪೊಲೀಸರು ತಯಾರಿ ನಡೆಸುತ್ತಿದ್ದಾರೆ.
ಅಕ್ರಮ ಮಧ್ಯ ಸಂಗ್ರಹ ಪ್ರಕರಣದಲ್ಲಿ ನರೇಶ್ ಬಲಿಯನ್, ಸಾರ್ವಜನಿಕರಿಗೆ ಥಳಿಸಿದ್ದಕ್ಕೆ ದೆಹಲಿ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ವಿರುದ್ಧ ಗಂಭೀರ ಸ್ವರೂಪದ ಕೇಸುಗಳು ದಾಖಲಾಗಿವೆ.
ಇನ್ನು ಚಾರ್ಜ್ ಶೀಟ್ ಸಲ್ಲಿಕೆ ಸಂಬಂಧ ಪ್ರತಿಕ್ರಿಯಿಸಿರುವ ಆಪ್ ಮುಖಂಡ ಅಶುತೋಷ್. ಲಲಿತ್ ಮೋದಿಗೆ ಸಹಾಯ ಮಾಡಿ, ವಿವಾದಕ್ಕೀಡಾಗಿರುವ ಸುಷ್ಮಾ ಸ್ವರಾಜ್ ಪ್ರಕರಣದಿಂದ ದೇಶದ ಜನತೆಯ ಗಮನವನ್ನು ಬೇರೆಡೆ ಹರಿಸಲು ಬಿಜೆಪಿ ಈ ಕುತಂತ್ರ ಅನುಸರಿಸುತ್ತಿದೆ ಎಂದು ದೂರಿದ್ದಾರೆ.
