ಮನಾಮ, ಜೂ.16: ಹತ್ತರ ಹರೆಯದ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಒಳಗಾಗಿದ್ದ ಬಹರೈನ್‌ನಲ್ಲಿ ಸೂಪರ್‌ಮಾರ್ಕೆಟ್ ಒಂದರ ಭಾರತೀಯ ಕಾರ್ಮಿಕನ್ನು ಸೋಮವಾರ ಕಸ್ಟಡಿಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಎಪ್ರಿಲ್ 4ರಂದು ಮುಹಾರಕ್ ಸಿಟಿಯಲ್ಲಿರುವ ಸೂಪರ್‌ಮಾರ್ಕೆಟೊಂದರಲ್ಲಿ ಟ್ರಾಲಿ ತೆಗೆದುಕೊಳ್ಳುವ ವೇಳೆ ಬಹರೈನಿ ಬಾಲಕಿಯ ಮೈದಡವಿರುವ ನಾಲ್ಕು ಆರೋಪಗಳಡಿ ಮೇ 4ರಂದು 25ರ ಹರೆಯದ ಭಾರತೀಯನನ್ನು ಬಂಧಿಸಲಾಗಿತ್ತು ಎಂದು ವರದಿ ವಿವರಿಸಿದೆ.
ತನ್ನ ವಿರುದ್ಧ ಕಟ್ಟು ಕಥೆ ಹೆಣೆಯಲಾಗಿದೆ ಎಂದಿರುವ ಭಾರತೀಯ ಆರೋಪಿ ತನ್ನ ಮೇಲೆ ಆಪಾದನೆಗಳನ್ನು ನಿರಾಕರಿಸಿದ್ದನು. ಬಾಲಕಿಯು ಟ್ರಾಲಿಯೊಂದನ್ನು ಕೇಳಿದಾಗ ಅದನ್ನು ಅದಾಗಲೇ ಇನ್ನೋರ್ವ ಗ್ರಾಹಕರಿಗೆ ಒದಗಿಸಲಾಗಿತ್ತೆಂದು ಭಾರತೀಯ ಕಾರ್ಮಿಕನು ಹೇಳಿದ್ದು, ಬಾಲಕಿಯು ಅದನ್ನೇ ತೆಗೆದುಕೊಳ್ಳಲು ಯತ್ನಿಸಿದಾಗ ಆಕೆಯ ಕೈಯಿಂದ ಆತ ಬಲವಂತವಾಗಿ ಕಸಿದುಕೊಳ್ಳಲು ಯತ್ನಿಸಿದ್ದನು ಎನ್ನಲಾಗಿದೆ.
