ಬೆಂಗಳೂರು, ಜೂ.10: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಹೈಟೆಕ್ ವೇಶ್ಯಾವಾಟಿಕೆ ದಂಧೆ ಪತ್ತೆಯಾ ಗಿದ್ದು, ಇದರಲ್ಲಿ ಕಿರುತೆರೆ ನಟಿಯೊಬ್ಬಳು ಇದನ್ನು ನಡೆಸುತ್ತಿದದ್ದು ಬೆಳಕಿಗೆ ಬಂದಿದೆ. ಮುಗ್ಧ ಹೆಣ್ಣು ಮಕ್ಕಳಿಗೆ ಬ್ಯೂಟಿಪಾರ್ಲರ್ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ದೂಡುತ್ತಿದ್ದ ಪ್ರಕರಣವನ್ನು ಸಿಸಿಬಿ ಪತ್ತೆಹಚ್ಚಿದೆ.
ಮೊದಲೇ ಬಣ್ಣದ ಲೋಕದಲ್ಲಿದ್ದ ಈಕೆ ತನಗೆ ಪರಿಚಯವಿದ್ದ ಕೆಲವರನ್ನು ಮನೆಗೆ ಕರೆಸಿಕೊಂಡು ಜೊತೆಯಲ್ಲಿದ್ದ ಯುವತಿಯರನ್ನು ವೇಶ್ಯಾವಾಟಿಕೆಗೆ ಬಲವಂತವಾಗಿ ದೂಡುತ್ತಿದ್ದರು ಎನ್ನಲಾಗಿದೆ. ಬಂಧಿತ ಆರೋಪಿ ಲೈಸಾ(ಹೆಸರು ಬದಲಿಸಲಾಗಿದೆ) ವಿಜಯನಗರದ ಗೋವಿಂದರಾಜ್ನಗರದಲ್ಲಿ ಮನೆಯೊಂದನ್ನು ಮಾಡಿ ಇಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ದಂಧೆ ನಡೆಸಲು ಬಳಸುತ್ತಿದ್ದ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆಕೆಯ ವಶದಲ್ಲಿದ್ದ ತುಮಕೂರು ಮೂಲದ ಯುವತಿಯೊಬ್ಬಳನ್ನು ರಕ್ಷಿಸಿದ್ದಾರೆ. ಸಿಸಿಬಿಯ ಅಧಿಕಾರಿಗಳು ಈ ಪ್ರಕರಣದಲ್ಲಿ ಇನ್ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.
