ಕೋಲಾರ, ಜೂ.7: ಚಿನ್ನಾಭರಣ ವ್ಯಾಪಾರಿಯ ಬಳಿ 18 ಕೆ.ಜಿ ಚಿನ್ನದ ಒಡವೆ, 1 ಲಕ್ಷದ ನಗದು ಹಾಗೂ ಇನೋವಾ ಕಾರಿನ ಸಮೇತ ಕಾರಿನ ಚಾಲಕ ಪರಾರಿಯಾಗಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಓಂ ಜ್ಯುವೆಲರಿಯ ಮಾಲಿಕ ರಾಜೇಶ್ ಭಟ್ ಇಬ್ಬರು ಸ್ನೇಹಿತರ ಜೊತೆ ಕೋಲ್ಕತ್ತಾದಿಂದ ಚಿನ್ನಾಭರಣ ಮಾಡಿಸಿಕೊಂಡು ವ್ಯಾಪಾರಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದ ವೇಳೆ ಕೋಲಾರ ಸಮೀಪದ ಅಡಿಗಾಸ್ ಹೋಟೆಲ್ ಬಳಿ ನಿನ್ನೆ ಮಧ್ಯಾಹ್ನ ಊಟಕ್ಕೆ ನಿಲ್ಲಿಸಿ ರಾಜೇಶ್‌ಭಟ್ ಮತ್ತು ಸ್ನೇಹಿತರು ಒಳಗೆ ಹೋಗಿದ್ದಾರೆ. ಹೋಗಿ ಬರುವಷ್ಟರಲ್ಲಿ ಇನೋವಾ ಕಾರು, 18 ಕೆ.ಜಿ. ಚಿನ್ನಾಭರಣ, 1 ಲಕ್ಷ ನಗದು ಸಮೇತ ಕಾರಿನ ಚಾಲಕ ಬಾಬು ಪರಾರಿಯಾಗಿದ್ದಾನೆ.
ತಕ್ಷಣವೇ ಬಾಬುವಿಗಾಗಿ ಸುತ್ತ-ಮುತ್ತ ಹುಡುಕಾಟ ನಡೆಸಿದ್ದು, ಆತನ ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಮಾಲೀಕ ರಾಜೇಶ್ ಭಟ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಸಬ್‌ಇನ್ಸ್‌ಪೆಕ್ಟರ್ ದೇವೇಂದ್ರಪ್ಪ ಪ್ರಕರಣ ದಾಖಲಿಸಿಕೊಂಡಿದ್ದು, ಜಿಲ್ಲಾ ರಕ್ಷಣಾಧಿಕಾರಿ ಅಜಯ್ ಹಿಲ್ಹೋರಿ ಸ್ಥಳ ಪರಿಶೀಲನೆ ನಡೆಸಿ, ಕಳ್ಳನ ಪತ್ತೆಗಾಗಿ ತಂಡವನ್ನು ರಚಿಸಿದ್ದಾರೆ.
