ಬೆಂಗಳೂರು, ಜೂ.6-ಅಧಿಕಾರ ವಿಕೇಂದ್ರೀಕರಣದ ಮೊದಲ ಹಂತ ಗ್ರಾಮ ಪಂಚಾಯ್ತಿ ಮಹಾ ಸಮರ ಮುಗಿಯುತ್ತಿದ್ದಂತೆ ಅಧ್ಯಕ್ಷ-ಉಪಾಧ್ಯಕ್ಷ ಗಾದಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿಯನ್ನು 5 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಹೀಗಾಗಿ ಹಿಂದೆಂದಿಗಿಂತಲೂ ಈ ಬಾರಿ ಕುರ್ಚಿಗೆ ಭಾರೀ ಬೇಡಿಕೆ ಬಂದಿದೆ.
ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ವಿಜೇತರಾಗಿರುವವರು ಮೀಸಲಾತಿ ಪಟ್ಟಿಯನ್ನು ಎದುರು ನೋಡುತ್ತಿದ್ದಾರೆ. ಮೂಲಗಳ ಪ್ರಕಾರ, ಇದೇ ತಿಂಗಳ 15ರ ನಂತರ ನಗರಾಭಿವೃದ್ಧಿ ಇಲಾಖೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳ ಮೀಸಲು ಪಟ್ಟಿಯನ್ನು ಪ್ರಕಟಿಸಲಿದೆ ಎಂದು ತಿಳಿದುಬಂದಿದೆ. ಆವೃತ್ತ ಪದ್ಧತಿ(ರೊಟೇಶನ್ ಪದ್ಧತಿ) ಪ್ರಕಾರ ಮೀಸಲಾತಿಯನ್ನು ನಿಗದಿಪಡಿಸುವ ಹೊಣೆಗಾರಿಕೆ ಜಿಲ್ಲಾಡಳಿತದ ಮೇಲಿದೆ. ಆದರೆ ಕೆಲವು ಪ್ರಭಾವಿಗಳು ಒತ್ತಡ ಹೇರಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಮೀಸಲಾತಿಯನ್ನು ಅದಲು-ಬದಲು ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಸಾಮಾನ್ಯವಾಗಿ ಯಾವ ಪಕ್ಷ ಆಡಳಿತದಲ್ಲಿರುತ್ತದೆಯೋ ಅಂತಹ ಪಕ್ಷವೇ ತನಗೆ ಅನುಕೂಲವಾಗುವಂತಹ ರೀತಿಯಲ್ಲಿ ಮೀಸಲಾತಿಯನ್ನು ಸಿದ್ಧಪಡಿಸುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕುವ ಸಂಭವವೂ ಉಂಟು. ಹೀಗಾಗಿ ಈಗ ಎಲ್ಲರ ಚಿತ್ತ ಮೀಸಲಾತಿ ಮೇಲೆ ನೆಟ್ಟಿದೆ.
ಜಿಲ್ಲಾಡಳಿತ ನೀಡುವ ವರದಿಯನುಸಾರ ನಗರಾಭಿವೃದ್ಧಿ ಇಲಾಖೆ ಮೀಸಲಾತಿಯನ್ನು ಪ್ರಕಟಿಸುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಚುನಾವಣಾ ಆಯೋಗವೇ ಮೀಸಲಾತಿಯನ್ನು ಪ್ರಕಟಿಸಬೇಕೆಂದು ವಿವಿಧ ರಾಜಕೀಯ ಪಕ್ಷಗಳು ಒತ್ತಾಯಿಸಿದರೂ, ಆಡಳಿತಾರೂಢ ಪಕ್ಷ ಈ ಹೊಣೆಗಾರಿಕೆಯನ್ನು ಕಳೆದುಕೊಳ್ಳಲು ಸುತರಾಂ ಇಷ್ಟಪಡುತ್ತಿಲ್ಲ.
ಭಾರೀ ಬೇಡಿಕೆ:
ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯು ಹೇಗೆ ವಿಧಾನಸಭೆ ಚುನಾವಣೆ ನಾಚಿಸುವಂತೆ ನಡೆಯಿತೋ ಅದೇ ರೀತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೂ ಭರ್ಜರಿ ಪೈಪೋಟಿ ಶುರುವಾಗಿದೆ. ಹಿಂದೆ ಕೇವಲ 12 ತಿಂಗಳ ಅವಧಿಗೆ ಮಾತ್ರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ನಿಗದಿಪಡಿಸಲಾಗಿತ್ತು. ಹೀಗಾಗಿ ಇದರ ಬಗ್ಗೆ ಯಾರೂ ಅಷ್ಟೊಂದು ಗಮನಹರಿಸುತ್ತಿರಲಿಲ್ಲ. ಆದರೆ ಇತ್ತೀಚೆಗೆ ವಿಧಾನಮಂಡಲದ ಉಭಯ ಸದನಗಳಲ್ಲೂ ಕರ್ನಾಟಕ ಪಂಚಾಯತ್ ತಿದ್ದುಪಡಿ ಕಾಯ್ದೆಯನ್ನು ಬಹುಮತದಿಂದ ಅಂಗೀಕರಿಸಲಾಯಿತು. ಇದರ ಪ್ರಕಾರ ಮೊದಲ 30 ತಿಂಗಳ ಅವಧಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಯಾವುದೇ ಕಾರಣಕ್ಕೂ ಅವಿಶ್ವಾಸ ಗೊತ್ತುವಳಿ ಮೂಲಕವೂ ಪದಚ್ಯುತಿಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ.
ಒಂದು ವೇಳೆ ಸದಸ್ಯರ ವಿಶ್ವಾಸ ಕಳೆದುಕೊಂಡರೆ, ಇಲ್ಲವೆ ಅಧಿಕಾರ ದುರುಪಯೋಗ ಆರೋಪದ ಮೇಲೆ 30 ತಿಂಗಳ ಬಳಿಕ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಅಲ್ಲಿಯವರೆಗೂ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಕುರ್ಚಿ ಗಟ್ಟಿಯಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು, ವಸತಿ ಯೋಜನೆಗಳು ಸಾಕಷ್ಟು ಜಾರಿಗೆ ಬರುತ್ತಿದ್ದು, ಪ್ರತಿ ಗ್ರಾ.ಪಂ.ಗೆ ವಾರ್ಷಿಕ ಮೂರು ಕೋಟಿ ಅನುದಾನ ಸಿಗುತ್ತದೆ. ಹೀಗಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು, ಮೀಸಲಾತಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
