ಕುಂದಾಪುರ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಕುಂದಾಪುರದ ಬೊಬ್ಬರ್‍ಯನಕಟ್ಟೆ ಸಮೀಪದಲ್ಲಿನ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಕುಂದಾಪುರದ ಚಿಕ್ಕನ್‌ಸಾಲ್ ನಿವಾಸಿ ಸತೀಶ್ ಪೂಜಾರಿ (25) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ.
ಘಟನೆ ವಿವರ: ಕುಂದಪುರದ ಖಾಸಗಿ ಆಸ್ಪತ್ರೆಯಾದ ವಿನಯಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವಿಭಾಗದ ಸಿಬ್ಬಂದಿಯಾಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಸತೀಶ್ ಅವರು ಈ ಮೊದಲು ಮೊಬೈಲ್ ಅಂಗಡಿ ಹೊಂದಿದ್ದರು, ಅಲ್ಲದೇ ಇಲೆಕ್ಟ್ರೀಷಿಯನ್ ವೃತ್ತಿಯಲ್ಲಿ ನೈಪುಣ್ಯತೆ ಹೊಂದಿದ್ದ ಅವರು ಕೆಲಕಾಲ ಆ ವೃತ್ತಿಯಲ್ಲಿ ಮುಂದೆ ಸಾಗಿದ್ದರು. ಅದ್ರೇ ಕಾರಣಾಂತರದಿಂದ ಒಂದೂವರೆ ವರ್ಷದ ಹಿಂದೆ ಕುಂದಾಪುರದ ವಿನಯಾ ಆಸ್ಪತ್ರೆಗೆ ಕೆಲಸಕ್ಕೆ ಸೇರಿದ್ದರು. ಸರಳ ಸಜ್ಜನರಾಗಿ ವಿದೇಯತೆಯಿಂದ ಕೆಲಸ ಮಾಡಿಕೊಂಡಿದ್ದ ಸತೀಶ್ ಅವರು ಭಾನುವಾರ ಸಂಜೆ ಬಳಿಕ ತನ್ನ ಕೆಲಸ ಮುಗಿಸಿ ಮನೆಗೆ ತೆರಳುವ ಸಂದರ್ಭ ಕೋಟೇಶ್ವರದಿಂದ ಮದುವೆ ಕಾರ್ಯಕ್ರಮ ಮುಗಿಸಿ ವಾಪಾಸ್ಸು ಕುಂದಾಪುರಕ್ಕೆ ಆಗಮಿಸುತ್ತಿದ್ದ ಬೆಂಗಳೂರು ಮೂಲದ ಕಪ್ಪು ಬಣ್ಣದ ಕಾರು ಸತೀಶ್ ಅವರ ಬೈಕಿಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ಬಳಿಕ ಕಾರು ಅಲ್ಲಿಂದ ಪರರಿಯಾಗಿ ಸಮೀಪದ ಖಾಸಗಿ ಹೋಟೇಲೊಂದರ ಎದುರು ನಿಲ್ಲಿಸಿ ಅದರಲ್ಲಿದ್ದವರು ಪರಾರಿಯಾಗಿದ್ದಾರೆ.
ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಅಪಘಾತಕ್ಕೆ ಕಾರಣವಾದ ಕಾರು ವಶಕ್ಕೆ ಪಡೆದು ಸಂಬಂದಪಟ್ಟವರನ್ನು ಹುಡುಕಲು ಬಲೆ ಬೀಸಿದ್ದಾರೆ.





