ಕನ್ನಡ ವಾರ್ತೆಗಳು

ಗ್ರಾಮ ಪಂಚಾಯತ್ ಚುನಾವಣೆ: ದ.ಕ ಜಿಲ್ಲೆಯಲ್ಲಿ ಶಾಂತಿಯುತ ಮತದಾನ | ಕೆಲವೆಡೆ ನೀರಸ: ಹಲವೆಡೆ ಮಿಶ್ರ ಪ್ರತಿಕ್ರಿಯೆ | ಅದರೂ ಶೇ. 74 ಮತದಾನ

Pinterest LinkedIn Tumblr

gp_Ola_ mogru_5

ಮಂಗಳೂರು : ದ.ಕ. ಜಿಲ್ಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಮೂಲಕವಾಗಿ ರಂಗೇರಿದ ಗ್ರಾ.ಪಂ. ಚುನಾವಣೆಯ ಮತದಾನ ಶುಕ್ರವಾರ ಬೆಳಗ್ಗಿನಿಂದ ಸಂಜೆಯವರೆಗೆ ಶಾಂತಿಯುತವಾಗಿ ನಡೆದಿದೆ. ಜಿಲ್ಲೆಯಲ್ಲಿ ಅಂದಾಜು ಶೇ.74ರಷ್ಟು ಮತದಾನವಾಗಿದೆ. 2010ರಲ್ಲಿ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಶೇ.73.51ರಷ್ಟು ಮತದಾನವಾಗಿತ್ತು.

ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆರಾಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಂಗೇರಿದ ಚುನಾವಣಾ ಕಣದಲ್ಲಿ ಸ್ವಲ್ಪ ತಂಪು ಕಾಣಿಸುವಂತಾಯಿತು.ದ.ಕ. ಜಿಲ್ಲೆಯ ಬೆಳ್ತಂಗಡಿ, ವಿಟ್ಲ, ಬಂಟ್ವಾಳ, ಉಳ್ಳಾಲ, ಮೂಲ್ಕಿ, ಮೂಡಬಿದಿರೆ ಸೇರಿದಂತೆ ಬಹುತೇಕ ಭಾಗದಲ್ಲಿ ಮಧ್ಯಾಹ್ನ ಸಮಯದಲ್ಲಿ ಸಾಧಾರಣ ಮಳೆಯಾಗಿದ್ದರಿಂದ ಮತದಾರರಿಗೆ ಸ್ವಲ್ಪ ತೊಂದರೆಯಾಯಿತು. ದಕ್ಷಿಣ ಕನ್ನಡ ಜಿಲ್ಲೆಯ 227 ಗ್ರಾಪಂಗಳ ಪೈಕಿ ಕೆಲವು ಗ್ರಾಮಗಳಲ್ಲಿ ಹಕ್ಕು ಚಲಾವಣೆಗೆ ನೀರಸ ಮತ್ತು ಹಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಎಲ್ಲ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಮತದಾರರನ್ನು ವಾಹನದಲ್ಲಿ ಸಾಗಿಸುವ, ಮತಗಟ್ಟೆಯ ಬಳಿ ಮತ ಯಾಚಿಸುವ, ಪೊಲೀಸರು ಅವರನ್ನು ಚದುರಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು.

Gp_election_munur_2 Gp_election_munur_4 Gp_election_munur_8 gp_Kalladka_3

ಪಕ್ಷಾತೀತ ಚುನಾವಣೆಯಾದರೂ ಕೂಡ ಹಲವು ಚಿಹ್ನೆಗಳಿರುವ ಮತಪತ್ರ ಅನಕ್ಷರಸ್ಥ ಮಾತ್ರವಲ್ಲ, ಅಕ್ಷರಸ್ಥ ಮತದಾರರನ್ನೂ ಗೊಂದಲಕ್ಕೀಡು ಮಾಡಿತ್ತು. ಮತಯಾಚನೆ ಸಂದರ್ಭ ಕ್ರಮ ಸಂಖ್ಯೆಯೊಂದಿಗೆ ಒಂದೇ ಕಡೆ ಹೆಸರು ಮತ್ತು ಚಿಹ್ನೆಯಿರುವ ಮಾದರಿ ಮತಪತ್ರವನ್ನು ತೋರಿಸಲಾಗಿದ್ದರೆ, ಮತಗಟ್ಟೆಯಲ್ಲಿ ಮಾತ್ರ ಅದಕ್ಕೆ ಹೋಲಿಕೆಯೇ ಇರಲಿಲ್ಲ. ಅಂದರೆ ಕ್ರಮ ಸಂಖ್ಯೆ ಇಲ್ಲದ ಹತ್ತಿರ ಹೆಸರು ಮತ್ತು ಚಿಹ್ನೆಯನ್ನು ಒಳಗೊಂಡು ಎರಡು ಕಡೆ ಮುದ್ರಿಸಲ್ಪಟ್ಟ ಮತಪತ್ರವನ್ನು ನೀಡಲಾಗಿತ್ತು. ಇದರಿಂದ ಕ್ಷಣಗಾಲ ಮತದಾರರು ಗಲಿಬಿಲಿಗೊಳಗಾದರು.

ಕೆಲವು ಕಡೆಯ ಮತಗಟ್ಟೆಗಳಲ್ಲಿ ಮತದಾರರಿಗಾಗಿ ಚುನಾವಣಾ ಸಿಬ್ಬಂದಿ ಕಾಯುತ್ತಿದ್ದರು. ಬೆಳಗ್ಗೆ ಮತ್ತು ಸಂಜೆಯ ಹೊತ್ತು ಬಿರುಸಿನ ಮತದಾನ ನಡೆದರೆ, ಮಧ್ಯಾಹ್ನದ ವೇಳೆ ಕೆಲವು ಮತಗಟ್ಟೆಗಳು ಬಿಕೋ ಎನ್ನುತ್ತಿತ್ತು.

ದ.ಕ. ಜಿಲ್ಲಾ ವ್ಯಾಪ್ತಿಯ ಒಟ್ಟು 227 ಗ್ರಾ.ಪಂ.ನ ವಿವಿಧ ಸ್ಥಾನಗಳಿಗೆ 7619 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಶುಕ್ರವಾರ ಈ ಎಲ್ಲ ಅಭ್ಯರ್ಥಿಗಳ ಭವಿಷ್ಯ 1212 ಮತಗಟ್ಟೆಗಳ ಮತಪೆಟ್ಟಿಗೆಯೊಳಗೆ ಭದ್ರವಾಗಿದ್ದು, ಜೂ.5ರಂದು ಇದರ ತೀರ್ಪು ಪ್ರಕಟಗೊಳ್ಳಲಿದೆ. ಕಳೆದ ಕೆಲವು ದಿನಗಳಿಂದ ಗ್ರಾಮ ಮಟ್ಟದಲ್ಲಿ ಭಾರೀ ಕುತೂಹಲ ತರಿಸಿದ್ದ ಹಳ್ಳಿ ಸಮರದ ಅಂತಿಮ ಕಾದಾಟ ಶುಕ್ರವಾರ ಸಂಜೆ ಪೂರ್ಣಗೊಳ್ಳುತ್ತಿದ್ದಂತೆ ಅಭ್ಯರ್ಥಿಗಳೆಲ್ಲ ಕೊಂಚ ನೆಮ್ಮದಿ ಉಂಟಾಗಿದೆ.

Write A Comment