
ಮುಂಬೈ, ಮೇ.26: ಗುದ್ದಿ ಪಲಾಯನ ಮಾಡಿದ ಪ್ರಕರಣದಲ್ಲಿ ಸದ್ಯಕ್ಕೆ ನಿರಾಳವಾಗಿರುವ ಬಾಲಿವುಡ್ ನಟ ಸಲ್ಮಾನ್ಖಾನ್ಗೆ ದುಬೈಗೆ ತೆರಳಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. 2002ರ ಗುದ್ದೋಡು ಪ್ರಕರಣದ ಆರೋಪ ಎದುರಿಸುತ್ತಿರುವ ನಟ ಸಲ್ಮಾನ್ಖಾನ್ಗೆ ನ್ಯಾಯಾಲಯ ಜಾಮೀನು ನೀಡುವಾಗ ವಿದೇಶಕ್ಕೆ ತೆರಳದಂತೆ ಸೂಚನೆ ನೀಡಿತ್ತು. ಅಲ್ಲದೆ, ಸಲ್ಮಾನ್ ಅವರ ಪಾಸ್ಪೋರ್ಟ್ ವೀಸಾ ಎಲ್ಲವನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಸಂಬಂಧ ನಟ ಸಲ್ಮಾನ್ಖಾನ್ ಪರ ವಕೀಲರು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ವಿದೇಶಕ್ಕೆ ತೆರಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.ಈ ಕುರಿತು ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಸಲ್ಮಾನ್ಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ. ಅನುಮತಿ ಸಿಕ್ಕಿರುವ ಸಲ್ಮಾನ್ ಖಾನ್ ದುಬೈಗೆ ತೆರಳಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ವಿಶೇಷ ನೃತ್ಯ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ತಮ್ಮ ನೂತನ ಚಿತ್ರ `ಭಜರಂಗ ಭಾಯಿಜಾನ್` ಚಿತ್ರದ ಪ್ರಚಾರದಲ್ಲೂ ತೊಡಗಿಕೊಳ್ಳುವ ಸಾಧ್ಯತೆಯಿದೆ.
ನ್ಯಾಯಮೂರ್ತಿ ಶಾಲಿನಿ ಪಾನ್ಸ್ಕರ್ ಜೋಷಿ ಅವರನ್ನೊಳಗೊಂಡ ಪೀಠ ಸಲ್ಮಾನ್ಗೆ ದುಬೈಗೆ ತೆರಳಲು ಅನುಮತಿ ನೀಡಿ `ಇಂಡೊ-ಅರ್ಬನ್` ಬಾಲಿವುಡ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಾರೆ.
ಅಲ್ಲದೆ, ವಿದೇಶದಿಂದ ಹಿಂತಿರುಗಿದ 12 ಗಂಟೆಯೊಳಗೆ ಸಲ್ಮಾನ್ ತನ್ನ ಪಾಸ್ಪೋರ್ಟ್ ಇತರೆ ದಾಖಲೆಗಳನ್ನು ಪೊಲೀಸರಿಗೆ ಒಪ್ಪಿಸಬೇಕೆಂದೂ ಸೂಚಿಸಿದೆ ಹಾಗೂ ವಿಮಾನದ ಸಂಖ್ಯೆ, ಸಮಯ, ದುಬೈನಲ್ಲಿ ಉಳಿದುಕೊಳ್ಳುವ ಸ್ಥಳ, ಹೋಟೆಲ್, ದೂರವಾಣಿ ಸಂಖ್ಯೆ, ಇತರೆ ಮಾಹಿತಿಗಳನ್ನೂ ಸಹ ತನಿಖಾಧಿಕಾರಿಗಳಿಗೆ ನೀಡಬೇಕೆಂದು ನಿರ್ದೇಶನ ನೀಡಿದೆ.
ಮೇ 27ರಿಂದ 30ರ ವರೆಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಟ ಸಲ್ಮಾನ್ಗೆ ಅವಕಾಶ ನೀಡುವಂತೆ ವಕೀಲ ನಿರಂಜನ್ ಮುದರಗಿ ಅರ್ಜಿ ಸಲ್ಲಿಸಿದ್ದರು.