ಕನ್ನಡ ವಾರ್ತೆಗಳು

ಮುಜರಾಯಿ ದೇವಾಲಯಗಳ ಸಿಬ್ಬಂದಿಗೆ ಏಕರೂಪ ಕನಿಷ್ಟ ವೇತನ ನಿಗಧಿಗೆ ಪ್ರಸ್ತಾವನೆ : ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ

Pinterest LinkedIn Tumblr

temple_dc_meeting

ಮಂಗಳೂರು,ಮೇ. 26 : ‘ ಎ’ ಸಮೂಹದ ಮುಜರಾಯಿ ದೇವಾಲಯಗಳಲ್ಲಿ ಹೊರ ಹಾಗೂ ಒಳಾಂಗಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಟ ಏಕರೂಪ ವೇತನ ನಿಗದಿಗೆ ಸಹಾಯಕ ಆಯುಕ್ತರು, ಆಯಾ ದೇವಾಲಗಳ ಕಾರ್ಯನಿರ್ವಹಣಾಧಿಕಾರಿಗಳನ್ನೊಳಗೊಂಡ ಉಪಸಮಿತಿಯನ್ನು ರಚಿಸಿ ವರದಿಯೊಂದನ್ನು ಜಿಲ್ಲಾ ಮಟ್ಟದ ಸಮಿತಿಗೆ ಜೂನ್ 15 ರೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಮಂಗಳವಾರ ತಮ್ಮ ಕಛೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದರು.

ಅನುವಂಶಿಕ ಅರ್ಚಕವೃತ್ತಿ, ಹಾಗೂ ಇತರೆ ಕೆಲಸಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿಗಳು ಅನುವಂಶಿಕವಾಗಿ ವೃತ್ತಿಯನ್ನು ನಿರ್ವಹಿಸುತ್ತಿರುವರೆ ಇಲ್ಲವೇ ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರದ ಮೂಲಕ ಘೋಷಣೆಯನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

‘ಎ’ ಸಮೂಹದ ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಟ ವೇತನ ನೀಡುವ ಬಗ್ಗೆ ಎಲ್ಲಾ ದೇವಾಲಯಗಳಲ್ಲಿರುವ ನೌಕರರು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ, 1997 ರಂತೆ ನಿಯಮ 8 ರಂತೆ ವೇತನ ಶ್ರೇಣಿಗೆ ಅರ್ಹತೆಯನ್ನು ಹೊಂದಿರುವರೇ ಎಂಬುದರ ಬಗ್ಗೆ ಪರಿಶೀಲಿಸಿ, ಒಂದು ವೇಳೆ ಸದರಿ ನೌಕರರ ಸೇವೆಯನ್ನು ಸಕ್ರಮಗೊಳಿಸಿದಲ್ಲಿ ವಾರ್ಷಿಕವಾಗಿ ಆಗುವ ಆರ್ಥಿಕ ಹೊರೆಯ ಅಂಕಿ ಅಂಶಗಳೊಂದಿಗೆ ಸ್ಪಷ್ಟ ಅಭಿಪ್ರಾಯದ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 4 ಜನರ ಸಮಿತಿಯೊಂದನ್ನು ಸರ್ಕಾರ ರಚಿಸಿ ಆದೇಶಿಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸಭೆಗೆ ತಿಳಿಸಿದರು.

ದೇವಾಲಯಗಳಲ್ಲಿ ಸಿಬ್ಬಂದಿ ಮಾದರಿಯನ್ನು ಆಯಾ ದೇವಾಲಯಗಳ ಶ್ರೇಣಿಗನುಗುಣವಾಗಿ ಆದ್ಯತೆ ಮೇಲೆ ರಚಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 491 ದೇವಾಲಯಗಳು ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟಿದ್ದು, ಇವುಗಳಲ್ಲಿ ‘ಎ’ ಶ್ರೇಣಿಯ 24, ‘ಬಿ’ಶ್ರೇಣಿಯ 34 ಮತ್ತು ‘ಸಿ’ಶ್ರೇಣಿಯ 433 ದೇವಾಲಯಗಳು ಇದ್ದು ಕ್ರಮವಾಗಿ 964, 2,000  ಮತ್ತು 860 ಸಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮುಜರಾಯಿ ಸಹಾಯಕ ಆಯುಕ್ತರಾದ ಪ್ರಭಾಕರ್ ಅವರು ಸಭೆಗೆ ಮಾಹಿತಿ ನೀಡಿದರು.

ಸರ್ಕಾರದ ನಿಯಮದಂತೆ ಮುಜರಾಯಿ ದೇವಾಲಯಗಳ ಒಟ್ಟು ಆದಾಯದಲ್ಲಿ ಶೇ.35 ರಷ್ಟು ಆದಾಯವನ್ನು ಸಿಬ್ಬಂದಿ ವೇತನ ಮತ್ತು ಇತರೆ ವೆಚ್ಚಗಳಿಗೆ ವೆಚ್ಚ ಮಾಡಬಹುದಾಗಿದ್ದು, ಜಿಲ್ಲೆಯ ಯಾವುದೇ ದೇವಾಲಯ ಇಷ್ಟು ಪ್ರಮಾಣದಲ್ಲಿ ವೆಚ್ಚ ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ 2014-15 ನೇ ಸಾಲಿನಲ್ಲಿ ಒಟ್ಟು 77,60,64,775 ರೂ.ಗಳ ಆದಾಯ ಬಂದಿದ್ದು, ಇದರಲ್ಲಿ ಶೇ.8.49 ರಷ್ಟು ಅಂದರೆ ರೂ.6,58,94,567 ಗಳನ್ನು ಸಿಬ್ಬಂದಿಗಳ ವೇತನಕ್ಕೆ ವೆಚ್ಚ ಮಾಡಲಾಗಿದೆ ಎಂದರು. ಸಭೆಯಲ್ಲಿ ಮುಜರಾಯಿ ಎ ಶ್ರೇಣಿ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ವಾಲ್ಟರ್ ಡಿ ಮೆಲ್ಲೋ ಮುಂತಾದವರು ಹಾಜರಿದ್ದರು.

Write A Comment