ಕರ್ನಾಟಕ

ಭೂಗಳ್ಳರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ : ನಿರ್ಗತಿಕರಿಗೆ ಪುನರ್ವಸತಿ : ಸಿದ್ದರಾಮಯ್ಯ

Pinterest LinkedIn Tumblr

siddu pres2

ಬೆಂಗಳೂರು, ಮೇ 13: ಸರ್ಕಾರಿ ಭೂಮಿ ಹಾಗೂ ಕೆರೆ ಒತ್ತುವರಿ ಮಾಡಿರುವ ಭೂಗಳ್ಳರ ವಿರುದ್ಧ ಹಾಗೂ ಅದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುವುದು. ಅದೇ ಸಮಯದಲ್ಲಿ ಮನೆ ಕಳೆದುಕೊಂಡ ನಿರ್ಗತಿಕರಿಗೆ ಪುನರ್ವಸತಿ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‍ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಭೂಗಳ್ಳರು ಎಷ್ಟೇ ಪ್ರಭಾವಿಗಳು ಅಥವಾ ಶ್ರೀಮಂತರಾಗಿದ್ದರೂ ಮುಲಾಜಿಲ್ಲದೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆ ಎರಡನ್ನೂ ಭೂಗಳ್ಳರು ಮತ್ತು ಒತ್ತುವರಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ದಾಖಲಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

siddu pres1

ಕೆರೆ ಒತ್ತುವರಿಯಾಗಿದೆ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ಕುಮಾರಸ್ವಾಮಿ ಬೊಬ್ಬೆಹಾಕಿದ್ದರು. ಈ ಹಿಂದೆ ಎ.ಟಿ.ರಾಮಸ್ವಾಮಿ ಮತ್ತು ಬಾಲಸುಬ್ರಹ್ಮಣ್ಯ ಸಮಿತಿ ರಚನೆಯಾದ ಉದ್ದೇಶ ಸರ್ಕಾರಿ ಭೂಮಿ ಒತ್ತುವರಿಯನ್ನು ಗುರುತಿಸಿ ರಕ್ಷಿಸುವ ಸಲುವಾಗಿತ್ತು. ಅದನ್ನು ಆಧರಿಸಿ ಪ್ರತಿಪಕ್ಷಗಳು ಕೆರೆ ಒತ್ತುವರಿಯಾಗಿದೆ ಎಂದು ವಿಧಾನಸಭೆಯಲ್ಲಿ ಆರೋಪಿಸಿದ್ದರು. ಸರ್ಕಾರ ಭೂಗಳ್ಳರನ್ನು ರಕ್ಷಿಸುತ್ತಿದೆ ಎಂದು ಟೀಕಿಸಿದ್ದರು. ಆದರೆ, ಈಗ ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂಬ ಕಾರಣಕ್ಕಾಗಿ ಒತ್ತುವರಿ ತೆರವಿಗೆ ಗುರಿಯಾದ ಬಡ ಜನರ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಪ್ರತಿಪಕ್ಷಗಳಿಂದ ನಾನು ಇಂತಹ ಬೇಜವಾಬ್ದಾರಿತವನ್ನು ನಿರೀಕ್ಷಿಸಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಎರಡು ವರ್ಷದಲ್ಲಿ 40ಸಾವಿರ ಕೋಟಿ ರೂ.ಮೌಲ್ಯದ 4050 ಎಕರೆ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವು ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಬಡವರಿಗೆ, ನಿರ್ಗತಿಕರಿಗೆ ಅನ್ಯಾಯವಾಗಿದ್ದರೆ ಪುನರ್ವಸತಿ ಕಲ್ಪಿಸಲು ಚಿಂತನೆ ನಡೆಸಿದ್ದೇವೆ ಎಂದರು.

siddu pres

ಬಿಜೆಪಿ ಮೊನ್ನೆ ಸರ್ಕಾರದ ವೈಫಲ್ಯಗಳ ಕುರಿತು ಪುಸ್ತಕ ಬಿಡುಗಡೆ ಮಾಡಿದೆ. ಅದು ಆಧಾರ ರಹಿತ. ಪ್ರತಿಪಕ್ಷಗಳು ಅಭಿವೃದ್ಧಿಯನ್ನು ಕಣ್ಣುಮುಚ್ಚಿ ನೋಡುವ ಬದಲು ಕಣ್ಣು ಬಿಟ್ಟು ನೋಡಬೇಕು. ಕ್ಷೀರಭಾಗ್ಯ, ಅನ್ನಭಾಗ್ಯ, ವಿದ್ಯಾಸಿರಿ, ಕೃಷಿ ಸಾಲದಂತಹ ಸೌಲಭ್ಯಗಳನ್ನು ಪಡೆದ ಫಲಾನುಭವಿಗಳ ಅಭಿಪ್ರಾಯ ಪಡೆದುಕೊಳ್ಳಬೇಕು. ಎಲ್ಲಿಯೂ ಹೋಗದೆ ಸುಮ್ಮನೆ ಟೀಕೆ ಮಾಡುವುದು ಸರಿಯಲ್ಲ. ಪ್ರತಿಪಕ್ಷಗಳ ಟೀಕೆಗೆ ನಮ್ಮ ತಕರಾರಿಲ್ಲ. ಆದರೆ, ಸುಳ್ಳನ್ನು ಸತ್ಯ ಮಾಡಿ ಸರ್ಕಾರಕ್ಕೆ ಮಸಿ ಬಳಿಯುವ ದುರದ್ದೇಶ ಪೂರ್ವಕ ಟೀಕೆಗಳು ಸರಿಯಲ್ಲ ಎಂದರು.

ನಂದಿತಾ ಸಾವಿನ ಪ್ರಕರಣ ಆತ್ಮಹತ್ಯೆ ಎಂದು ನಿರ್ಧಾರವಾಗಿದೆ. ಹಿಂದೆ ಅದನ್ನು ಅತ್ಯಾಚಾರ, ಕೊಲೆ ಎಂದು ಬಿಜೆಪಿಯವರು ಪ್ರತಿಭಟಿಸಿದ್ದರು. ತನಿಖೆ ಮುಗಿಯುವವರೆಗೂ ತಾಳ್ಮೆಯಿಂದಿರದೆ ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದರು. ಎರಡು ವರ್ಷದ ನಮ್ಮ ಸರ್ಕಾರದಲ್ಲಿ ಯಾವ ಹಗರಣಗಳೂ ನಡೆದಿಲ್ಲ. ಪ್ರತಿಪಕ್ಷದವರು ಆರೋಪ ಮಾಡಿದ್ದಾರೆ. ಆದರೆ, ಅವು ಸಾಬೀತಾಗಿಲ್ಲ. ಹಿಂದೆ ಬಿಜೆಪಿ ಅಧಿಕಾರಾವಧಿಯಲ್ಲಿ ಸಚಿವರು ಹಾಗೂ ಶಾಸಕರಿಂದ ನಡೆದ ಭ್ರಷ್ಟಾಚಾರ, ಅನಾಚಾರಗಳ ಬಗ್ಗೆ ನಾನು ಪ್ರಸ್ತಾಪಿಸುವುದಿಲ್ಲ. ಸಾರ್ವಜನಿಕರೇ ತೀರ್ಮಾನಿಸಲಿದ್ದಾರೆ ಎಂದರು.

Write A Comment