ಶುಕ್ರವಾರ ಮೇ 1 ರಂದು ದುಬೈನ “ಜೆ.ಎಸ್.ಎಸ್. ಪ್ರೈವೆಟ್ ಶಾಲೆ”ಯ ಭವ್ಯ ಪ್ರಾಂಗಣದಲ್ಲಿ ಯು.ಎ.ಇ. ಬಸವ ಸಮೀತಿ ದುಬೈ ತನ್ನ 9 ನೇ ವಾರ್ಷಿಕೋತ್ಸವದ “ಬಸವಜಯಂತಿ” ಹಬ್ಬವನ್ನು ಬಲು ಸಂಭ್ರಮದಿಂದ ಆಚರಿಸಿತು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಶ್ರೀ ಗುರುಬಸವ ಸ್ವಾಮಿಗಳು ಪಾಂಡೋಮಟ್ಟಿ ಹಾಗೂ ರಂಜಾನ್ ದರ್ಗಾ ಅವರು ಆಗಮಿಸಿದ್ದರು. ಹಾಸ್ಯ ಭಾಷಣಕಾರ ಶ್ರೀ. ಬಸವರಾಜ ಮಹಾಮನಿ ಕೂಡ ಉಪಸ್ತಿತರಿದ್ದರು. ಶ್ರೀಮತಿ ಸುಮಾ ಹಾಗೂ ಸುಮಂಗಲೆಯರು “ಪೂರ್ಣಕುಂಭ” ಹಾಗು ಆರತಿಯೊಂದಿಗೆ ಮಹಾಸ್ವಾಮಿಗಳನ್ನು ಹಾಗೂ ಅತಿಥಿಗಳನ್ನು ಸ್ವಾಗತಿಸಲಾಯಿತು.
ಕು. ದೀಕ್ಷಾ ರೇವಣ್ಣಳ “ಗಣೇಶ ವಂದನ” ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಿರೂಪಕಿಯರಾದ ಶ್ರೀಮತಿ ಲಕ್ಷ್ಮಿ ಲಿಂಗದಳ್ಳಿ ಹಾಗೂ ಶ್ರೀಮತಿ ರೋಹಿಣಿ ಅನಂತ, ಪೂಜ್ಯ ಶ್ರೀ ಗಳು, ಗೌರವಾನ್ವಿತ ಅತಿಥಿಗಳು ಮತ್ತು ಯು. ಎ. ಈ. ಬಸವ ಸಮೀತಿ ದುಬೈನ ಸಲಹಾ ಸಮಿತಿಯ ಪದಾಧಿಕಾರಿಗಳಾದ ಡಾ. ಶಿವಕುಮಾರ, ಶ್ರೀ ಮುರುಗೇಶ ಗಾಜರೆ, ಶ್ರೀ ಮಲ್ಲಿಕಾರ್ಜುನ ಮುಳ್ಳೂರ, ಶ್ರೀ ಚಂದ್ರಶೇಖರ ಲಿಂಗದಳ್ಳಿ, ಶ್ರೀ ಸಂಗಮೇಶ ಬಿಸರಳ್ಳಿ, ಶ್ರೀ ರುದ್ರಯ್ಯ ಹಾಗೂ ಶ್ರೀಮತಿ ರೂಪಾ ನಂದೀಶ ಅವರನ್ನು ವೇದಿಕೆಗೆ ಬರಮಾಡಿಕೊಂಡು ಬಸವಜ್ಯೋತಿಯನ್ನು ಬೆಳಗಿಸಿದರು. ಬಸವಜ್ಯೋತಿಯ ಮಹತ್ವವನ್ನು ಕವಿ ಶ್ರೀ ಈರಣ್ಣ ರಚಿಸಿದ ಸುಶ್ರಾವ್ಯವಾದ ಗೀತೆಯ ಮುಖಾಂತರ ಅಭಿಷೇಕ ಗಾಜರೆ ಹಾಗು ಶರ್ಮಿಳಾ ಜೋಶಿ ಸಾರಿದರು.
ಶ್ರೀ ನಂದೀಶ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸರ್ವರನ್ನು ಸ್ವಾಗತಿಸಿ “ಯು.ಎ.ಇ. ಬಸವ ಸಮೀತಿ ದುಬೈ”ನ ಕಾರ್ಯವೈಖರಿ ಕುರಿತು ಮಾತನಾಡುತ್ತಾ “ಬಸವಸಮೀತಿ” ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ಉತ್ತೇಜನವಿತ್ತು ಪ್ರೋತ್ಸಾಹಿಸುತ್ತಿರುವ ಮತ್ತು ಜೆ.ಎಸ್.ಎಸ್ ನ ಬೃಹತ್ ಪ್ರಾಂಗಣವನ್ನು ನೀಡಿ ಶುಭ ಹಾರೈಸುತ್ತಿರುವ ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರೇಶ್ವರ ಸ್ವಾಮಿಗಳಿಗೆ ಹೃತ್ಪೂರ್ವಕವಾಗಿ ತಮ್ಮ ಕೃತಜ್ಞತೆ ಗಳನ್ನು ಅರ್ಪಿಸಿದರು.
ಶ್ರೀ ಈರಣ್ಣ ಮೂಲಿಮನಿ ಅವರು ಮಹಾ ಸ್ವಾಮಿಗಳ ಸಮಗ್ರ ಸಾಧನೆಗಳ ವಿವರವಾದ ಮಾಹಿತಿಯೊಂದಿಗೆ ಅವರನ್ನು ಪರಿಚಯಿಸಿದರು. ನಂತರ ಶ್ರೀ ಬಸವರಾಜ ಸಾಲಿಮಠ, ಶ್ರೀ. ಬಸವರಾಜ ಮಹಾಮನಿಯವರನ್ನು ಸಭೆಗೆ ಪರಿಚಯಿಸಿದರು.
ಗೌರವಾನ್ವಿತ ಅತಿಥಿಗಳಾದ, ಶ್ರೀ ರಮಜಾನ್ ದರ್ಗಾ ಅವರು ಯು. ಎ. ಈ. ಬಸವ ಸಮಿತಿ ಹಮ್ಮಿಕೊಂಡಿರುವ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ವಚನಗಳು ಸರಳ ಹಾಗೂ ಸಮಾನ ಬದುಕನ್ನು ಪ್ರತಿಪಾದಿಸುತ್ತವೆ, ಅವರು ಎಲ್ಲ ಸಮುದಾಯದವರ ವ್ರತ್ತಿಗಳಿಗೆ ಸಮಾನ ಗೌರವವನ್ನು ತಂದುಕೊಟ್ಟರು ಎಂದು ಸಾರಿದರು. “ಬಸವ ತತ್ವ” ಒಂದು ವಿಜ್ಞಾನ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿ ಕೊಟ್ಟರು.
ಭಾರತದ ವಿವಿಧ ಗಣ್ಯರ ವೇಷಭೂಷಣ ಧರಿಸಿ ವೇದಿಕೆ ಮೇಲೆ ಪುಟ್ಟ ಮಕ್ಕಳು ಬರುವ ದೃಶ್ಯ ನಿಜಕ್ಕೂ ನಯನ ಮನೋಹರವಾಗಿತ್ತು. ವೇಷಭೂಷಣ ಸ್ಪರ್ಧೆಯ ನಿರ್ಣ್ಣಾಯಕತ್ವವನ್ನು ಶ್ರೀಮತಿ ಡಾ. ಮಮತಾ ರೆಡ್ಡೆರ ಹಾಗು ಶ್ರೀಮತಿ ಕುಸುಮಾಕ್ಷಿ ಪಯ್ಯಾರ, ದಕ್ಷತೆಇಂದ ನಿಭಾಯಿಸಿದರು. ಅದರಲ್ಲೂ ಸಂಗೊಳ್ಳಿ ರಾಯಣ್ಣನ ವೇಷದಲ್ಲಿ ಬಂದ ಆರುಷ್ ಕುಲದೀಪ ಸಭಿಕರ ಮೆಚ್ಚುಗೆಗೆ ಪಾತ್ರನಾದನು. ಕಿತ್ತೂರು ಚೆನ್ನಮ್ಮನ ವೇಷದಲ್ಲಿ ಪುಟ್ಟ ಬಾಲಕಿ ಸೂಕ್ತಿ ಆರ್ಭಟಿಸಿದಳು.
ನಂತರ ಯು.ಎ.ಇ ಬಸವಸಮೀತಿಯ, ಶ್ರೀಮತಿ ಜ್ಯೋತಿ ಬಡ್ಡಿ ಅವರ ಸಾರಥ್ಯದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ದೀಪಾ, ವಾಸಂತಿ ಹಾಗು ಜ್ಯೋತಿ ಅವರು ಹಾಡಿದ ಜಾನಪದ ಗೀತೆಗಳು, ಸ್ಪರ್ಶ ತಂಡದ ಭರತನಾಟ್ಯ, ವಿದುಷಿ ಆರತಿ ರವಿಕುಮಾರ್ ಅವರ “ಸಪ್ತಸ್ವರ” ತಂಡದಿಂದ ಲಿಂಗಾಷ್ಟಕ, Klassical Rhythms ತಂಡದಿಂದ ವಿದುಷಿ ರೋಹಿಣಿ ಸಂಯೋಜಿಸಿದ ಜಾನಪದ ನೃತ್ಯ, ನೆರೆದ ಜನ ಜಂಗುಳಿಯನ್ನು ಮನರಂಜಿಸಿದವು. ತಾಂಡವ ನೃತ್ಯ ಎಲ್ಲರ ಮನ ಸೂರೆಗೊಳ್ಳುವಂತೆ ಐಶ್ವರ್ಯ, ವಿಶಾಲ, ಸಿಮರನ್ ಹಾಗು ಪ್ರಗತಿ ಪ್ರಸ್ತುತ ಪಡಿಸಿದರು. ಶ್ರೀ ರಾಘವೇಂದ್ರರ ಕೀರ್ತನೆ ಕೇಳಲು ತುಂಬಾ ಇಂಪಾಗಿತ್ತು.
ಬಸವ ಸಮೀತಿಯವತಿಯಿಂದ ಏರ್ಪಡಿಸಿದ್ದ ವಿವಿಧ ಪಾಕ ಸ್ಪರ್ಧೆಗಳಲ್ಲಿ ಹಾಗು ಕ್ರಿಕೆಟ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶ್ರೀ ಗುರುಬಸವ ಮಹಾಸ್ವಾಮೀಜಿಗಳವರ ಆಶೀರ್ವಚನ ನೆರೆದ ಶರಣರಿಗೆ ಜ್ಞಾನದ ಹಸಿವು ತಣಿಸಿತು. ನಂತರ ಕರ್ನಾಟಕದಿಂದ ತರಿಸಿದ್ದ ಹೋಳಿಗೆ, ಮಾವಿನಹಣ್ಣಿನ ಸೀಕರಣೆ, ಇನ್ನಿತರ ಘಮ ಘಮಿಸುವ ಪ್ರಸಾದ ಶರಣರೆಲ್ಲರ ಹಸಿವನ್ನು ತಣಿಸಿತು.
ನಂತರ ಶ್ರೀ. ಬಸವರಾಜ ಮಹಾಮನಿಯವರ ಚುಟುಕುಗಳು ಹಾಗು ಹಾಸ್ಯ ಸನ್ನಿವೇಶಗಳು ಎಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.
ಈ “ಬಸವಜಯಂತಿ” ಹಬ್ಬದ ಆಚರಣೆಯಲ್ಲಿ ಸುಮಾರು ಆರು ನೂರಕ್ಕೂ ಮಿಕ್ಕಿ ಯು.ಎ.ಇ. ಕನ್ನಡಿಗರು ಹಾಜರಾಗಿದ್ದರು ಇಲ್ಲಿಯ ಗಣ್ಯರಾದ ಧ್ವನಿ ಪ್ರತಿಷ್ಥಾನದ ಶ್ರೀ ಪ್ರಕಾಶ್ ಪಯ್ಯಾರು, ಫಾರ್ಚ್ಯೂನ್ ಗ್ರ್ಯಾಂಡ್ ನ ನಿರ್ದೇಶಕರಾದ ಶ್ರೀ ರವೀಶ್ ಗೌಡ, ಕರ್ನಾಟಕ ಸಂಘ ಅಬು ಧಾಬಿಯ ಶ್ರೀ. ಮನೋಹರ ತೋನಸೆ, ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷ ಶ್ರೀ ಸತೀಶ ವೆಂಕಟರಮಣ, ಕನ್ನಡಿಗರು ದುಬೈನ ಅಧ್ಯಕ್ಷ ಶ್ರೀ ಸದನ್ ದಾಸ ಹಾಗೂ ಇನ್ನಿತರ ಸಂಘಗಳ ಪದಾಧಿಕಾರಿಗಳು ನಾಡಿನ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಸುಂದರವಾದ ಬ್ಯಾನರ್ ವಿನ್ಯಾಸಕ ಶ್ರೀ ಗಣೇಶ ರೈ ಆವರಿಗೂ ಧನ್ಯವಾದ ಅರ್ಪಿಸಲಾಯಿತು. ಕೊನೆಯಲ್ಲಿ ಶ್ರೀಮತಿ ಅನಿತಾ ದಂಡಿನ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಅಂತಿಮ ಘಟ್ಟವನ್ನು ತಲುಪಿತು.
-ವರದಿ: ಶ್ರೀ ಮುರುಗೇಶ್ ಗಾಜರೆ



















































































































1 Comment
Abinandanegalu Shubhavaagali