ಮಂಗಳೂರು, ಎ.23: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012 ಜೂನ್ ನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಐವರನ್ನು ಅಪರಾಧಿಗಳೆಂದು ನಿನ್ನೆ ನ್ಯಾಯಾಲಯದಿಂದ ಘೋಷಣೆಯಾದ ಬೆನ್ನಿಗೇ ನ್ಯಾಯಾಲಯದ ಆವರಣದಲ್ಲಿಯೇ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಅಕ್ಷಯ ಕುಮಾರ್ ಎಂಬಾತನನ್ನು ಗುರುವಾರ ನಸುಕಿನಲ್ಲಿ ಸುರತ್ಕಲ್ ನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತನ ವಿರುದ್ಧ ಈಗ ಬಂಧನದಿಂದ ತಪ್ಪಿಸಿಕೊಂಡ ಪ್ರಕರಣವೂ ದಾಖಲಾಗಿದ್ದು, ಕೊಲೆಗೆ ಸಂಬಂಧಿಸಿದಂತೆ ಎಲ್ಲ ಐವರು ಆರೋಪಿಗಳಿಗೆ ನ್ಯಾಯಾಲಯವು ಗುರುವಾರ ಶಿಕ್ಷೆ ಪ್ರಕಟಿಸಿತು.
2012, ಜೂ.15ರಂದು ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕುಮಾರ ಎಂಬಾತನ ಹತ್ಯೆ ನಡೆದಿದ್ದು, ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಅಕ್ಷಯ್ ಕುಮಾರ್, ಸಂತೋಷ್ ಪೂಜಾರಿ, ಕೇತನ್ ಕುಮಾರ್, ಶರಣ್ ರೋಹಿದಾಸ್ ಪೂಜಾರಿ ಮತ್ತು ಗೌತಮ್ ಎಂಬವರ ವಿರುದ್ಧ ನಗರದ ಎರಡನೇ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲದಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ನಿನ್ನೆ ತೀರ್ಪು ಪ್ರಕಟಿಸಲಿದ್ದು, ಪ್ರಕರಣದಲ್ಲಿ ಬಂಧಿಸಲ್ಪಟ್ಟು, ಬಳಿಕ ಹೈಕೋರ್ಟ್ ನಿಂದ ಜಾಮೀನು ಬಿಡುಗಡೆಗೊಂಡಿದ್ದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಎಲ್ಲ ಐವರನ್ನು ಅಪರಾಧಿಗಳೆಂದು ಘೋಷಿಸಿದ ನ್ಯಾಯಾಲಯವು ಗುರುವಾರ ವಿಚಾರಣೆ ನಡೆಸಿ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿತ್ತು. ಅಲ್ಲದೆ ಈ ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಈ ಐವರು ಅಪರಾಧಿಗಳನ್ನು ಓರ್ವ ಕಾನ್ ಸ್ಟೇಬಲ್ ವಶಕ್ಕೆ ಪಡೆದುಕೊಂಡಿದ್ದರು. ಈ ಸಂದರ್ಭ ಮೂತ್ರ ವಿಸರ್ಜನೆಯ ನೆಪ ಹೇಳಿ ಶೌಚಾಲಯದ ಕಡೆ ತೆರಳಿದ್ದ ಅಕ್ಷಯ ಕುಮಾರ್ ನ್ಯಾಯಾಲಯದ ಆವರಣ ಗೋಡೆ ಹಾರಿ ಪರಾರಿಯಾಗಿದ್ದ.
ಈ ಬಗ್ಗೆ ಬಂದರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಂದರು ಮತ್ತು ಕಾವೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಲಭ್ಯ ಮಾಹಿತಿಗಳ ಆಧಾರದಲ್ಲಿ ಇಂದು ನಸುಕಿನ 3.30ರ ಸುಮಾರಿಗೆ ಸುರತ್ಕಲ್ ನಲ್ಲಿ ಅಕ್ಷಯ ಕುಮಾರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
