ಕರ್ನಾಟಕ

ಪೌಷ್ಟಿಕಾಂಶದ ಖನಿ ಫಲಾಹಾರ: ಆಹಾರದಿಂದ ಆರೋಗ್ಯ

Pinterest LinkedIn Tumblr

bhec11Food-collage_0ಗಾಳಿ, ನೀರಿನ ನಂತರ ಮನುಷ್ಯನಿಗೆ ಅತ್ಯವಶ್ಯವಾದ ಮೂರನೆಯ ಜೀವನಾಧಾರವೇ ಆಹಾರ. ಪ್ರತಿನಿತ್ಯವೂ ಮನುಷ್ಯನಿಗೆ ಜೀವಿಸಲು ಆಹಾರ ಬೇಕೇ ಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು, ರೋಗ ನಿರೋಧಕ ಶಕ್ತಿ ವರ್ಧಿಸಿಕೊಳ್ಳಲು ನಮಗೆ ಪೌಷ್ಟಿಕ, ಉತ್ತಮ ಆಹಾರ ಬೇಕೇ ಬೇಕು. ನಮ್ಮ ಆರೋಗ್ಯವೂ ಶೇಕಡಾ 50ಕ್ಕೂ ಹೆಚ್ಚು ನಾವು ತಿನ್ನುವ ಆಹಾರವನ್ನೇ ಅವಲಂಬಿಸಿದೆ.

ಅದನ್ನೇ ವೈದ್ಯಶಾಸ್ತ್ರದ ಪಿತಾಮಹನಾದ ಹಿಪೋಕ್ರೆಟಿಸ್ ಕೂಡಾ ‘ನಿಮ್ಮ ಆಹಾರ ಔಷಧಿಯಾಗಿರಲಿ ಮತ್ತು ನಿಮ್ಮ ಔಷಧಿ ಆಹಾರವೇ ಆಗಿರಲಿ’ ಎಂದು ಹೇಳಿರುವುದು. ಆದರೆ ಇಂದಿನ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಆಹಾರ ಉತ್ಪಾದನೆ, ಹಂಚುವಿಕೆಯಿಂದ ಹಿಡಿದು ಸೇವನೆಯವರೆಗೆ ವ್ಯತ್ಯಾಸವಾಗುತ್ತಿದ್ದು, ಆಗುತ್ತಿರುವ ವಾತಾವರಣದ ಬದಲಾವಣೆಯಿಂದ ಹೊಸ ಹೊಸ ರೋಗಾಣುಗಳ ಹುಟ್ಟುವಿಕೆ, ಅವುಗಳ ಚಿಕಿತ್ಸೆಗೆ ತೊಡಕಾಗುತ್ತಿರುವ ಆಂಟಿಬಯೊಟಿಕ್‌ ಪ್ರತಿರೋಧ ಇವೆಲ್ಲ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾವು ಸೇವಿಸುವ ಆಹಾರ ಸುರಕ್ಷತೆ ಹಾಗೂ ಭದ್ರತೆಗೇ ಭಂಗ ತರುತ್ತಿರುವ, ಆಹಾರಜನ್ಯ ರೋಗಗಳ ಚಿಕಿತ್ಸೆಗೆ ಸವಾಲಾಗುವ ಸಂದರ್ಭಗಳು ದಿನೇ ದಿನೇ ಹೆಚ್ಚುತ್ತಿದೆ.

ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಹಾರ ಕಲಬೆರಿಕೆಯೂ ಹೆಚ್ಚುತ್ತಿದೆ. ಆದ್ದರಿಂದ ಆಹಾರ ಸುರಕ್ಷತೆಯಿಲ್ಲದೇ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಈ ಬಾರಿಯ  ವಿಶ್ವಆರೋಗ್ಯ ದಿನ ಏಪ್ರಿಲ್ 7, 2015ರ ಘೋಷವಾಕ್ಯವನ್ನು ಆಹಾರ ಸುರಕ್ಷತೆ ಸಾಗುವಳಿಯಿಂದ ಸೇವನೆಯವರೆಗೂ, ಅಂದರೆ ‘ತೋಟದಿಂದ ತಟ್ಟೆಯವರೆಗೆ ಆಹಾರ ಸುರಕ್ಷತೆ’ ಎಂದು ಸಾರಿರುವುದು.

ಇಂದು ಅಸುರಕ್ಷಿತ ಆಹಾರದಲ್ಲಿ ಹಾನೀಕಾರಕ ಬ್ಯಾಕ್ಟೀರಿಯಾ, ವೈರಸ್, ಪರಾವಲಂಬಿ ಜೀವಿಗಳು ಹಾಗೂ ರಾಸಾಯನಿಕ ವಸ್ತುಗಳಿಂದ ಬೇಧಿ, ದೀರ್ಘಕಾಲಿಕ ಕಾಯಿಲೆಗಳಿಂದ ಹಿಡಿದು ಕ್ಯಾನ್ಸರ್‌ವರೆಗೂ ಹಲವು ಆಹಾರಜನ್ಯ ರೋಗಗಳುಂಟಾಗುತ್ತವೆ. ವಿಶ್ವದಲ್ಲಿ 2ಮಿಲಿಯನ್‌ಗೂ, ಅದರಲ್ಲೂ ಹೆಚ್ಚಾಗಿ ಶಿಶುಗಳು, ಮಕ್ಕಳು, ವೃದ್ದರೂ ಸೇರಿದಂತೆ ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ಉಂಟಾಗುವ ಅತಿಸಾರದಿಂದ ಸಾವನ್ನಪ್ಪುತ್ತಿದ್ದಾರೆ.

ಅಪೌಷ್ಠಿಕತೆ ನಿವಾರಣೆಯತ್ತ ಪ್ರಯತ್ನದಲ್ಲಿ ದಾಪುಗಾಲು ಹಾಕುತ್ತಿದ್ದರೂ ವಿಟಮಿನ್ ಕೊರತೆ, ಖನಿಜಾಂಶಗಳ ಕೊರತೆ, ಬೊಜ್ಜು ಹಾಗೂ ಅದರಿಂದಾಗುವ ಸಮಸ್ಯೆ, ಸಾಂಕ್ರಾಮಿಕವಲ್ಲದ ಹಲವು ರೋಗಗಳಿಂದ ಬಳಲುವುದು, ಇವೆಲ್ಲ ಸಮಸೈಗಳಿಗೂ ಬಹುಶಃ ಅಗ್ಗದ, ಹೆಚ್ಚು ಹೆಚ್ಚು ಸಂಸ್ಕರಿಸಿದ, ಅನೂಕೂಲಕರ ಹಾಗೂ ಕೇವಲ ನಾಲಿಗೆಯ ರುಚಿ ತಣಿಸುವುದಕ್ಕಷ್ಟೇ ಆಹಾರ ಸೇವಿಸುವ ಅಂಶಗಳೆಲ್ಲಾ ಉತ್ತೇಜನಕಾರಿಯಾಗಿದೆ.

ನಾವೆಲ್ಲರೂ ಆಹಾರಕ್ಕಾಗಿ ಸಸ್ಯಮೂಲ ಆಹಾರಗಳಾದ ಹಣ್ಣು, ತರಕಾರಿ, ಬೇಳೆಕಾಳುಗಳು, ಧಾನ್ಯಗಳು, ಸಸ್ಯ ಎಣ್ಣೆಗಳನ್ನು ಹೆಚ್ಚಾಗಿ ಅವಲಂಬಿಸಿದ್ದು, ಹಲವರು ಪ್ರಾಣಿಜನ್ಯ ಆಹಾರಗಳನ್ನು (ಮಾಂಸಹಾರ, ಮೀನು, ಸಮುದ್ರ ಉತ್ಪನ್ನಗಳು ಇತ್ಯಾದಿ) ಅವಲಂಬಿಸಿದ್ದಾರೆ. ನಾವು ಸೇವಿಸುವ ಆಹಾರದಲ್ಲಿ ಮುಖ್ಯವಾಗಿ ಕಾಬ್ರೋಹೈಡ್ರೇಟ್, ಪ್ರೋಟೀನ್, ಕೊಬ್ಬು ಹಾಗೂ ಖನಿಜ, ವಿಟಮಿನ್‌ಗಳು 5 ಮುಖ್ಯ ಅಂಶಗಳು ಕಾಬ್ರೋಹೈಡ್ರೇಟ್ ಆಹಾರದಲ್ಲಿ ಶೇಕಡಾ 60ರಷ್ಟು ಶಕ್ತಿಯನ್ನು ದೊರಕಿಸಿಕೊಡುವುದು.

ಇದು ಅಕ್ಕಿ, ಗೋಧಿ, ಆಲೂಗಡ್ಡೆ, ಬ್ರೇಡ್, ಬೀನ್ಸ್ ಇವುಗಳಲ್ಲಿ ಹೆಚ್ಚಿರುವುದು. ಕಬ್ಬು ಸಹಜ ಕಾಬ್ರೋಹೈಡ್ರೇಟ್ ಆಹಾರವಾದರೆ ಸಕ್ಕರೆ ಅತಿ ಹೆಚ್ಚು ಉಪಯೋಗಿಸಲ್ಪಡುವ ಸಂಸ್ಕರಿಸಿದ ಆಹಾರ. ಇದು ಕೇವಲ ಕ್ಯಾಲೊರಿಯನ್ನಷ್ಟೇ ಶರೀರಕ್ಕೆ ದೊರಕಿಸಕೊಡುವುದೇ ಹೊರತು ಯಾವುದೇ ವಿಟಮಿನ್, ಖನಿಜಾಂಶಗಳು ಇದರಲ್ಲಿಲ್ಲ. ಇದನ್ನು ಹೆಚ್ಚು ಹೆಚ್ಚು ಸೇವಿಸಿದಾಗ ದಂತ ಕುಳಿ ಹಾಗೂ ತೂಕ ಹೆಚ್ಚಿಸಿ ಬೊಜ್ಜು ಬರಿಸುವುದೇ ಹೊರತು ಯಾವುದೇ ಆರೋಗ್ಯಕರ ಲಾಭವಿಲ್ಲ. ಇದನ್ನು ಬಿಳಿವಿಷವೆಂದು ಪರಿಗಣಿಸಿ ಸಾಧ್ಯವಾದಷ್ಟು ಹಿತಮಿತವಾಗಿ ಸೇವಿಸಬೇಕು. ಹಾಗೆಯೇ ಬೆಲ್ಲವನ್ನು ಕೂಡ ಕಡಿಮೆ ಸೇವಿಸಬೇಕು.

ಆಹಾರದ ಪ್ರೋಟೀನ್ ಅಂಶ ಶೇಕಡಾ 15-20ರಷ್ಟು ಇರಬೇಕು. ಹಾಗೂ ಇದು ಶಾರೀರಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರೋಟೀನ್‌  ನಮಗೆ ಬೇಳೆ ಕಾಳುಗಳು, ಅಕ್ಕಿ , ನೆಲಗಡಲೆ, ಸೋಯಾ, ಮೊಳಕೆ ಕಾಳು ಇತ್ಯಾದಿಗಳಿಂದ ಸಿಗುತ್ತವೆ. ಆದರೆ ಈ ಬೇಳೆ ಕಾಳು ಧಾನ್ಯಗಳನ್ನು 100 ಡಿಗ್ರಿಗೂ ಹೆಚ್ಚು ಉಷ್ಣತೆಯಲ್ಲಿ ಹುರಿದು, ಕರಿದು ಮಾಡಿದರೆ ವಿಟಮಿನ್‌ಗಳ ಅಂಶ (ಮುಖ್ಯವಾಗಿ ವಿಟಮಿನ್ ಸಿ ಹಾಗೂ ಬಿ), ಖನಿಜಾಂಶಗಳು ಮತ್ತು ಕಿಣ್ವಗಳು ನಾಶ ಹೊಂದಿ ಜೀರ್ಣಕ್ರಿಯೆಯು ತಡವಾಗಿ ಹಲವು ವಿಟಮಿನ್‌ಗಳ ಕೊರತೆ ಹಾಗೂ ಖನಿಜಾಂಶಗಳ ಕೊರತೆಯಿಂದ ಕಾಯಿಲೆಗೊಳಗಾಗುತ್ತೇವೆ.

ಅದೇ ಧಾನ್ಯ, ಕಾಳುಗಳನ್ನು ಮೊಳಕೆ ಬರಿಸಿದರೆ ಪ್ರೋಟೀನ್ ಹಾಗೂ ವಿಟಮಿನ್, ಖನಿಜಾಂಶಗಳು ಹೆಚ್ಚುತ್ತವೆ. ನೀರಿನಾಂಶ ಹಾಗೂ ನಾರಿನಾಂಶಗಳು ಹೆಚ್ಚಿ ಜೀರ್ಣಕ್ರೀಯೆಗೂ, ಮಲ ವಿಸರ್ಜನೆಗೂ ಸಹಾಯವಾಗುತ್ತವೆ. ಕೊಬ್ಬಿನಾಂಶವು ಶೇಕಡಾ 15-20 ರಷ್ಟು ಆಹಾರದಲ್ಲಿ ಇರಬೇಕು. ಇದು ಚಯಾಪಚಯ ಕ್ರಿಯೆಗೆ ಮತ್ತು ವಿಟಮಿನ್ ಎ,ಡಿ,ಇ,ಕೆ ಗಳ ಹೀರುವಿಕೆಯಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತದೆ. ಆದರೆ ನೆಲಗಡಲೆ, ಸೋಯಾ, ತೆಂಗಿನಕಾಯಿ ಇತ್ಯಾದಿಗಳನ್ನು ಎಣ್ಣೆಯ ರೂಪದಲ್ಲಿ ಸೇವಿಸುವುದಕ್ಕಿಂತ ಹಾಗೆ ಸೇವಿಸುವುದು ಒಳ್ಳೆಯದು.

ಎಣ್ಣೆ ತುಪ್ಪಗಳನ್ನು ಬಿಸಿ ಮಾಡಿದಾಗ ಉತ್ಪಾದನೆಯಾಗುವ ಪ್ರೀರಾಡಿಕಲ್ಸ್‌ಗಳು ಹೃದಯಾಘಾತ, ಪಾರ್ಶವಾಯು ಆಗುವುದನ್ನು ಹೆಚ್ಚಿಸುತ್ತದೆ. ಸಂತೃಪ್ತ ಕೊಬ್ಬಿನ ಬಳಕೆ ಆಹಾರದ ಶೇಕಡಾ 10ಕ್ಕೂ ಕಡಿಮೆ ಇರಬೇಕು. ನಾರಿನಾಂಶವುಳ್ಳ ಆಹಾರವು ಅತೀ ಅಗತ್ಯ. ಇದು ಪಾಲೀಷ್ ಮಾಡದಿರುವ ಅಕ್ಕಿ ಇಡೀ ಗೋಧಿ, ಬಾರ್ಲಿ, ಕಂದಮೂಲಗಳು ಎಲ್ಲ ರೀತಿಯ ತರಕಾರಿ ಹಣ್ಣುಗಳಲ್ಲಿರುತ್ತವೆ. ಇದರಿಂದ ಮಲವಿಸರ್ಜನೆಗೆ ಸಹಾಯಮಾಡುತ್ತದೆ. ನಾರಿನಾಂಶವು ಶರೀರ ಸ್ನೇಹಿ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಿ ಕೊಲೆಸ್ಟ್ರಾಲ್ ಶೀಘ್ರಗತಿಯಲ್ಲಿ ರಕ್ತದಲಿ ಏರುವುದನ್ನು ಕಡಿಮೆ ಮಾಡುತ್ತದೆ. ಆದರೆ ಮಾಂಸ, ಹೈನು ಪದಾರ್ಥಗಳು, ಪಾಲಿಷ್ ಮಾಡಿದ ಸಂಸ್ಕರಿಸಿದ ಆಹಾರಗಳಲ್ಲಿ ಯಾವುದೇ ನಾರಿನಾಂಶ ಇರುವುದಿಲ್ಲ.

ಇದರಿಂದ ಮಲಬದ್ಧತೆ ಉಂಟಾಗಿ ಮೂಲವ್ಯಾಧಿಯಿಂದ ಹಿಡಿದು ಕರುಳಿನ ಕ್ಯಾನ್ಸರ್‌ವರೆಗೆ ಹಲವು ಕಾಯಿಲೆಗಳಿಗೆ ಕಾರಣವಾಗಬಹುದು. ಹಣ್ಣು ತರಕಾರಿಗಳಲ್ಲಿ ನಾರಿನಾಂಶ ಜೊತೆಗೆ ಅಧಿಕವಾಗಿ ವಿಟಮಿನ್‌ಗಳು (ಉದಾಹರಣೆಗೆ ಪಪ್ಪಾಯಿ, ಮಾವಿನ ಹಣ್ಣಿನಲ್ಲಿ ವಿಟಮಿನಿ ಎ ಅಧಿಕವಾಗಿದ್ದರೆ ನೆಲ್ಲಕಾಯಿ, ಸೀಬೆಕಾಯಿಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ.) ಹಣ್ಣುಗಳನ್ನು ಸಕ್ಕರೆ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದಕ್ಕಿಂತ ಹಾಗೇ ಸೇವಿಸುವುದು ಅತ್ಯುತ್ತಮ.

ಆಹಾರದಲ್ಲಿ ಉಪ್ಪಿನ ಬಳಕೆಯನ್ನು ದಿನಕ್ಕೆ 5 ಗ್ರಾಂಗೂ ಕಡಿಮೆಗೆ ಮಿತಗೊಳಿಸಬೆಕು. ಇಲ್ಲದಿದ್ದಲ್ಲಿ ನಮ್ಮ ಶರೀರದ ಜೀವಕೋಶಗಳಲ್ಲಿ ಸರಿಯಾದ ಕಾರ್ಯನಿರ್ವಹಣೆಗೆ ಇರಬೇಕಾದ ಸೋಡಿಯಂ ಹಾಗೂ ಪೋಟ್ಯಾಸಿಯಂ ಅಂಶಗಳ ಅನುಪಾತ (1:8) ಏರುಪೇರಾಗಿ ಹೆಚ್ಚು ಶಕ್ತಿಯ ವ್ಯಯವಾಗಿ ನಾವು ಕಾಯಿಲೆಗೆ ಎಡೆಮಾಡಿಕೊಡುತ್ತೇವೆ. ಜಂಕ್ ಫುಡ್‌ನಲ್ಲಿ ಅತಿ ಬೇಯಿಸಿದ ಆಹಾರಗಳಲ್ಲಿ ಸಿದ್ಧ ಆಹಾರಗಳಲ್ಲಿ ಹೆಚ್ಚೆಚ್ಚು ಉಪ್ಪಿನಾಂಶ ಇರುವುದರಿಂದ ಅವುಗಳನ್ನು ಹೆಚ್ಚು ಉಪಯೋಗಿಸುವುದು ಅಪಾಯಕಾರಿ.

ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಉತ್ಪಾದನೆಯ ಹಂತದಲ್ಲಿ ಸಾಧ್ಯವಾದಷ್ಟು ಕಡಿಮೆ ರಾಸಾಯನಿಕ ಗೊಬ್ಬರಗಳನ್ನು, ಕೀಟನಾಶಕಗಳನ್ನು ಉಪಯೋಗಿಸಿ ಹೆಚ್ಚೆಚ್ಚು ಸಾವಯವ ಕೃಷಿಗೆ ಒತ್ತು ಕೊಡಬೇಕು. ಮಾರುಕಟ್ಟೆಯಿಂದ ತರುವ ತರಕಾರಿ, ಹಣ್ಣುಗಳನ್ನು ಸ್ವಚ್ಛವಾಗಿ ತೊಳೆದು ಉಪಯೋಗಿಸಬೇಕು. ಆಹಾರ ತಯಾರಿಕೆಯಲ್ಲಿ ಪರಿಶುದ್ಧ ನೀರು ಹಾಗೂ ಕಚ್ಚಾ ಆಹಾರ ವಸ್ತುಗಳನ್ನು ಬಳಸಬೇಕು. ಕಚ್ಚಾ ಮತ್ತು ಬೇಯಿಸಿದ ಆಹಾರವನ್ನು ಪ್ರತ್ಯೇಕವಾಗಿರಿಸಬೇಕು.

ನಿರ್ದಿಷ್ಟ ಹದಕ್ಕೆ ಬೇಯಿಸಬೇಕು ಹಾಗೂ ಸರಿಯಾದ ಉಷ್ಣತೆಯನ್ನು ಕಾಪಾಡಬೇಕು. ಮಾರುಕಟ್ಟೆಗಳಲ್ಲಿ ಆಹಾರ ಖರೀದಿಸುವಾಗ ಪ್ಯಾಕಿಂಗ್ ಗುಣಮಟ್ಟ, ಬೆಲೆ ಎಲ್ಲವನ್ನೂ ಪರಿಗಣಿಸಬೇಕು. ಇದನ್ನೆ ಸರ್ವಜ್ಞ ಹೇಳಿದ್ದು ‘ನಾಲಿಗೆಯ ಸವಿ ಸುಖಕೆ ಚೀಲವನ್ನು ತುಂಬಿದರೆ ಶೂಲೆಗಳು (ಕಾಯಿಲೆ)ಹಲವು ತೆರನಾಗಿ ರುಚಿಗಳು ಕಾಲನೋಶನಕ್ಕೂ ಸರ್ವಜ್ಞ’ ಎಂದು. ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆಯ ಪ್ರಕಾರ ‘ತೋಟದಿಂದ ತಟ್ಟೆಯವರೆಗೆ  ಆಹಾರ ಸುರಕ್ಷತೆ’ ಪ್ರತಿ ಹಂತದಲ್ಲಿಯೂ ಅನುಷ್ಠಾನಗೊಳ್ಳಬೇಕು.

Write A Comment