ಝಾಕಿರ್ ತಮೀಮ್
ಕೊಣಾಜೆ : ದ್ವಿಚಕ್ರ ವಾಹನವೊಂದು ಪಾದಚಾರಿ ಬಾಲಕನೊಬ್ಬನಿಗೆ ಢಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮೊಂಟೆಪದವು -ಮಂಜನಾಡಿ ಬಳಿಯ ಅನ್ಸಾರ್ ನಗರ ಎಂಬಲ್ಲಿ ನಡೆದಿದೆ.
ಮೊಂಟೆಪದವು ಮಸೀದಿ ಬಳಿಯ ನಿವಾಸಿ ಮುಹಮ್ಮದ್ ಯಾನೆ ಕುಂಞಿಮೋನು ಎಂಬವರ ಪುತ್ರ ಝಾಕಿರ್(14) ಹಾಗೂ ಖಾಲಿದ್ ಎಂಬವರ ಪುತ್ರ ತಮೀಮ್(14) ಮೃತಪಟ್ಟವರಾಗಿದ್ದಾರೆ. ಇವರಿಬ್ಬರು ಮಂಜನಾಡಿಯ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ನ ಆಂಗ್ಲ ಮಾಧ್ಯಮ ಶಾಲೆಯ 8ನೆ ತರಗತಿ ವಿದ್ಯಾರ್ಥಿಗಳಾಗಿದ್ದರು.
ಘಟನೆ ವಿವರ: ಮಂಜನಾಡಿ ನಿವಾಸಿ ಸಿರಾಜ್ ಎಂಬವರು ಝಾಕಿರ್ನನ್ನು ತನ್ನ ಆ್ಯಕ್ಟಿವಾ ಹೋಂಡಾದಲ್ಲಿ ಕುಳ್ಳಿರಿಸಿ ಮಂಜನಾಡಿ ಕಡೆಗೆ ಅತಿವೇಗದಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಆ್ಯಕ್ಟಿವಾ ಅಲ್-ಮದೀನಾ ಕಾಂಪ್ಲೆಕ್ಸ್ ನ ಪಕ್ಕದ ತಿರುವಿಗೆ ತಲುಪಿದಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತಮೀಮ್ನಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ತಮೀಮ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಢಿಕ್ಕಿಯ ರಭಸಕ್ಕೆ ಆ್ಯಕ್ಟಿವಾ ಉರುಳಿಬಿದ್ದಿದ್ದು, ಅದರಲ್ಲಿ ಸಹಸವಾರನಾಗಿದ್ದ ಝಾಕಿರ್ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದನು. ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಇಂದು ಮೃತಪಟ್ಟಿದ್ದಾನೆ. ಸಿರಾಜ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಝಾಕಿರ್ನ ತಂದೆ ಮುಹಮ್ಮದ್ ಕುಂಞಿ ಮೋನು ಕತರ್ನಲ್ಲಿ ಕೆಲಸ ಮಾಡುತ್ತಿದ್ದು, 1 ತಿಂಗಳ ಹಿಂದೆಯಷ್ಟೇ ಮನೆಗೆ ಬಂದಿದ್ದರು. ಇವರ ಇಬ್ಬರು ಪುತ್ರರಲ್ಲಿ ಝಾಕಿರ್ ಹಿರಿಯವನಾಗಿದ್ದ.
ಹಾಗೆಯೇ ತಮೀಮ್ನ ತಂದೆ ಖಾಲಿದ್ ಸೌದಿ ಅರೇಬಿಯಾದಲ್ಲಿ ಉದ್ಯೋ ಗದಲ್ಲಿದ್ದರು. ಮಗನ ಮರಣದ ಸುದ್ದಿ ತಿಳಿದು ಅವರಿಂದು ಊರಿಗೆ ಬಂದಿದ್ದಾರೆ. ಶೋಕ ಸಾಗರ: ಇಬ್ಬರು ಬಾಲಕರು ಅಪ ಘಾತದಲ್ಲಿ ಮೃತಪಟ್ಟ ಸುದ್ದಿಯನ್ನು ತಿಳಿದು ಕುಟುಂಬ ವರ್ಗ ಮಾತ್ರವಲ್ಲದೆ ಇಡೀ ಮೊಂಟೆಪದವು, ಮಂಜನಾಡಿ ಪರಿಸರವೇ ಶೋಕ ಸಾಗರದಲ್ಲಿ ಮುಳುಗಿದೆ.
ಸಚಿವ ಯು.ಟಿ.ಖಾದರ್, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್, ಜಿಪಂ ಸದಸ್ಯ ಎನ್.ಎಸ್.ಕರೀಂ, ತಾಪಂ ಸದಸ್ಯ ಅಹ್ಮದ್ ಕುಂಞಿ, ಹೈದರ್ ಪರ್ತಿಪ್ಪಾಡಿ ಮೊದಲಾದವರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ತಮೀಮ್ ಹಾಗೂ ಝಾಕಿರ್ ಸ್ನೇಹಿತರು :ತಮೀಮ್ ಹಾಗೂ ಝಾಕಿರ್ ಇಬ್ಬರೂ ಚಿಕ್ಕಂದಿನಿಂದಲೇ ಸ್ನೇಹಿತರಾಗಿದ್ದು, ನೆರೆ ಹೊರೆ ಮನೆ ಯವರೇ ಆಗಿದ್ದರು. ಶಾಲೆಗೆ ಹೋಗುವಾಗ ಅಥವಾ ಯಾವುದೇ ಕಾರ್ಯಕ್ರಮಗಳಿಗೆ ಹೋಗು ವುದಿದ್ದರೂ ಜೊತೆಯಾಗಿ ತೆರಳುತ್ತಿದ್ದರು. ಇವರ ಅಕಾಲಿಕ ಅಗಲಿಕೆಯ ನೋವು ಎರಡು ಕುಟುಂಬ ಗಳನ್ನು ಜರ್ಝರಿತವನ್ನಾಗಿಸಿದೆ.
ಎಂಟನೆ ತರಗತಿ ವಿದ್ಯಾರ್ಥಿಗಳು: ಝಾಕಿರ್ ಮತ್ತು ತಮೀಮ್ ಇಬ್ಬರೂ ಒಂದೇ ಶಾಲೆಯ ವಿದ್ಯಾರ್ಥಿಗಳಾಗಿದ್ದರು. ಮಂಜನಾಡಿಯ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ನ ಆಂಗ್ಲ ಮಾಧ್ಯಮ ಶಾಲೆಯ 8ನೆ ತರಗತಿ ವಿದ್ಯಾರ್ಥಿಗಳಾಗಿದ್ದ ಇವರು ಪಠ್ಯ ಹಾಗೂ ಪಠ್ಯೇತರ ಚಟು ವಟಿಕೆಗಳಲ್ಲೂ ಮುಂದಿದ್ದರು ಎನ್ನಲಾಗಿದೆ..


