ನವದೆಹಲಿ, ಮಾ.29-ದೇಶದ 13 ರಾಜ್ಯಗಳು ಮತ್ತು ಕೆಲ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಲ್ಲಿನ ಜನಸಂಖ್ಯೆಗಿಂತ ಆಧಾರ್ ಕಾರ್ಡ್ಗಳ ಸಂಖ್ಯೆಯೇ ಹೆಚ್ಚಾಗಿರುವ ಎಡವಟ್ಟು ಬೆಳಕಿಗೆ ಬಂದಿದೆ. 2011ರ ಜನಗಣತಿಯಂತೆ ಕೇಂದ್ರಾಡಳಿತ ಮತ್ತು 36 ರಾಜ್ಯಗಳ ಪೈಕಿ 13 ರಾಜ್ಯಗಳಲ್ಲಿ ಜನಸಂಖ್ಯೆಗಿಂತ ಆಧಾರ್ಕಾರ್ಡ್ಗಳು ದುಪ್ಪಟ್ಟಾಗಿವೆ. ಇದು ಅಧಿಕಾರಿಗಳು ಮಾಡುವ ಎಡವಟ್ಟಿಗೆ ತಾಜಾ ನಿದರ್ಶನವಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಹೊಸದಾಗಿ ರಚನೆಯಾದ ತೆಲಂಗಾಣ ರಾಜ್ಯಗಳಲ್ಲಿ ಇರುವ ಜನಸಂಖ್ಯೆಗಿಂತ ಆಧಾರ್ ಕಾರ್ಡ್ಗಳ ಸಂಖ್ಯೆಯೇ ಹೆಚ್ಚಾಗಿದೆ.
ಜನಗಣತಿ ಆಧಾರವಾಗಿಟ್ಟುಕೊಂಡೇ ಆಧಾರ್ ಕಾರ್ಡ್ಗಳನ್ನು ನೀಡಬೇಕೆಂದು ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿತ್ತು. ವಿಶೇಷವಾಗಿ 2011ರ ಜನಗಣತಿ ಮತ್ತು ವಲಸೆ ಹೋಗುವ ಜನಸಂಖ್ಯೆ ಪರಿಗಣಿಸಿ ಆಧಾರ್ ಕಾರ್ಡ್ಗಳನ್ನು ರಚನೆ ಮಾಡಬೇಕೆಂಬ ನಿಯಮವಿತ್ತು.
ಆದರೆ, ಬಹುತೇಕ ಅಧಿಕಾರಿಗಳು ಮನೆಮನೆಗೆ ತೆರಳಿ ಲೆಕ್ಕ ಹಾಕದೆ ಕಚೇರಿಯಲ್ಲಿ ಕುಳಿತು ಬೇಕಾಬಿಟ್ಟಿಯಾಗಿ ಆಧಾರ್ ಕಾರ್ಡ್ಗಳನ್ನು ವಿತರಣೆ ಮಾಡಿದ್ದಾರೆ. ದೆಹಲಿಯಲ್ಲಿ ಇರುವ ಜನಸಂಖ್ಯೆಗಿಂತ ಶೇ.27ರಷ್ಟು ಆಧಾರ್ ಕಾರ್ಡ್ಗಳನ್ನು ನೀಡಲಾಗಿದೆ. ಇದೇ ರೀತಿ ಆಂಧ್ರ ಪ್ರದೇಶ ಶೇ.13, ಹಿಮಾಚಲ ಪ್ರದೇಶ ಶೇ.12, ಸಿಕ್ಕಿಂ ಶೇ.10, ಪಂಜಾಬ್ ಶೇ.9, ಕೇರಳ ಶೇ.9, ಲಕ್ಷದ್ವೀಪ ಶೇ.8, ಜಾರ್ಖಂಡ್ ಶೇ.7, ಚಂಡೀಗಢ ಶೇ.6, ಗೋವಾ ಶೇ.6, ಪಾಂಡಿಚೇರಿ ಶೇ.6, ತ್ರಿಪುರಾ ಶೇ.3 ಮತ್ತು ಹರಿಯಾಣದಲ್ಲಿ ಶೇ.5ರಷ್ಟು ಜನಸಂಖ್ಯೆಗಿಂತ ಆಧಾರ್ ಕಾರ್ಡ್ಗಳು ಹೆಚ್ಚಾಗಿವೆ.
ಜನಸಂಖ್ಯೆ ಗಣತಿ ಪ್ರಕಾರ ದೇಶದಲ್ಲಿ 786 ಕಾರ್ಡ್ಗಳನ್ನು ವಿತರಣೆ ಮಾಡಲಾಗಿದೆ ಎಂಬುದು ಅಧಿಕಾರಿಗಳ ಹೇಳಿಕೆ. ವಾಸ್ತವವಾಗಿ 2011ರ ಜನಗಣತಿಯಲ್ಲಿ ಮತದಾನಕ್ಕೆ ಅವಕಾಶ ಪಡೆದವರು 642 ಮಿಲಿಯನ್ನಷ್ಟು ಮಾತ್ರ. ಯಾವುದೇ ಒಬ್ಬ ವ್ಯಕ್ತಿಗೆ ಆಧಾರ್ ಕಾರ್ಡ್ ವಿತರಣೆ ಮಾಡುವಾಗ ಆತನ ಪೂರ್ವಾಪರ ವಿವರಣೆಗಳನ್ನು ಕಲೆ ಹಾಕಿ ನೀಡಬೇಕೆಂಬ ನಿಯಮವಿದೆ. ಆದರೆ, ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತೇ ಮನಸೋ ಇಚ್ಛೆ ಕಾರ್ಡ್ಗಳನ್ನು ವಿತರಿಸಿರುವುದು ಬೆಳಕಿಗೆ ಬಂದಿದೆ.
