ಮುಂಬೈ: ಅಳುಬುರುಕುತನ, ಖೇದಕ್ಕೆ ಒಳಗಾಗುವುದು ಕೇವಲ ಖಿನ್ನತೆಯ ಲಕ್ಷಣವಲ್ಲ. ಅದೊಂದು ಮಾನಸಿಕ ರೋಗ. ಇಂತಹ ಆಘಾತಕಾರಿ ರೋಗ ಲಕ್ಷಣಗಳು ಹತ್ತು ಮಂದಿಯಲ್ಲಿ ಒಬ್ಬರಿಗೆ ಇರುತ್ತದೆ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. ಇಂತಹ ರೋಗ ಲಕ್ಷಣ ಹೊಂದಿರುವವರು ರಸ್ತೆಯಲ್ಲಿ ಇದ್ದಕ್ಕಿದಂತೆ ವಾಹನವನ್ನು ವೇಗವಾಗಿ ಚಲಾಯಿಸುತ್ತಾರೆ. ಮಾತ್ರವಲ್ಲ ಸಾರ್ವಕಾಲಿಕ ಕಿರಿ ಕಿರಿ ಮಾಡಲು ಹಿಂದು ಮುಂದು ನೋಡುವರಲ್ಲ ಎನ್ನುತ್ತಾರೆ ತಜ್ಞ ವೈದ್ಯರು.
ಇತ್ತಿಚೆಗೆ ಫ್ರಾನ್ಸ್ ವಿಮಾನ ಪತನಗೊಳಿಸಿ 150 ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಲಿ ತೆಗೆದುಕೊಂಡ ಸಹ ಪೈಲಟ್ ಆಂಡ್ರೆಸ್ ಲುಬಿಟ್ಜ್ ಇಂತಹದ್ದೇ ಖಿನ್ನತೆಗೆ ಒಳಗಾಗಿದ್ದ, ಹೀಗಾಗಿ ಇಂತಹ ರೋಗ ಲಕ್ಷಣದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಖಿನ್ನತೆ ಎನ್ನುವುದು ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ. ಐದು ಮಹಿಳೆಯರಲ್ಲಿ ಓಬ್ಬರ, ಹತ್ತು ಪುರುಷರಲ್ಲಿ ಒಬ್ಬರು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಖಿನ್ನತೆಗೆ ಒಳಗಾಗುತ್ತಾರಂತೆ. ಧೂಮಪಾನ ಮಾಡುವ ಮಧ್ಯವಯಸ್ಕರು, ಶಿಕ್ಷಕರು ಹೇಳಿಕೊಟ್ಟ ಪಾಠ ತಲೆಗೇರದ ವಿದ್ಯಾರ್ಥಿಗಳು, ಪದೇ ಪದೇ ಕಿರಿ ಕಿರಿ ಉಂಟು ಮಾಡುವವರಿಂದ ಈ ಖಿನ್ನತೆ ಕಾಣಿಸಿಕೊಳ್ಳುವುದು ಸಾಮಾನ್ಯವಂತೆ. ನಾವು ರಸ್ತೆಯಲ್ಲಿ ಹೋಗಬೇಕಾದರೆ ನೂರಾರು ಮಂದಿ ಎದುರಾಗುತ್ತಾರೆ ಯಾರಿಗೆ ಗೊತ್ತು ಅವರಲ್ಲಿ ಒಬ್ಬರು ಖಿನ್ನತೆಗೆ ಒಳಗಾಗಿ ಏನು ಬೇಕಾದರೂ ಮಾಡಬಹುದು. ಹೀಗಾಗಿ ಖಿನ್ನತೆ ಬಗ್ಗೆ ಎಚ್ಚರ ವಹಿಸುವುದು ಸೂಕ್ತ ಎನ್ನುತ್ತಾರೆ ಮನೋವೈದ್ಯ ಶಂಷಾ ಸೋನವಾಲ.
ಖಿನ್ನತೆಗೆ ಒಳಗಾದವರು ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿರುತ್ತಾರೆ. ನಿದ್ರಿಸಲು ಸಾಧ್ಯವಾಗದೆ ನರಳುತ್ತಾರೆ. ಏಳಲು ಮನಸ್ಸೆ ಬರುವುದಿಲ್ಲ. ಏಕಾಗ್ರತೆ ಸಾಧ್ಯವಾಗುವುದಿಲ್ಲ. ಯಾವುದೇ ನಿರ್ಧಾರ ಕೈಗೊಳ್ಳಲಾರದೆ ನರಳಾಡುತ್ತಾರೆ. ಇಂತಹ ಯಾವುದೇ ಲಕ್ಷಣಗಳು ಕಂಡು ಬಂದರೆ ತಕ್ಷಣ ಮನೋವೈದ್ಯರನ್ನು ಕಂಡ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ ಸೋನವಾಲ.
