ನವದೆಹಲಿ: ಕಳೆದ ಕೆಲ ತಿಂಗಳಿನಿಂದ ಆಮ್ ಆದ್ಮಿ ಪಾರ್ಟಿಯಲ್ಲಿ ನಡೆಯುತ್ತಿದ್ದ ನಾಟಕೀಯ ಬೆಳವಣಿಗೆಗಳು ಇಂದು ಮತ್ತೊಂದು ತಿರುವು ಪಡೆದುಕೊಂಡಿದ್ದು, ಕೇಜ್ರಿವಾಲ್ ವಿರುದ್ದ ತಿರುಗಿ ಬಿದ್ದಿದ್ದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯಿಂದ ಉಚ್ಚಾಟಿಸಲಾಗಿದೆ.
ನವದೆಹಲಿಯಲ್ಲಿ ಇಂದು ನಡೆದ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ಇಬ್ಬರು ನಾಯಕರನ್ನು ಉಚ್ಚಾಟಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಭಾಗವಹಿಸಲು ತಮಗೆ ಅಡ್ಡಿಯುಂಟು ಮಾಡಲಾಗಿದೆ ಎಂದು ಆರೋಪಿಸಿ ಯೋಗೇಂದ್ರ ಯಾದವ್ ಧರಣಿ ಕುಳಿತ ಘಟನೆಯೂ ಬೆಳಿಗ್ಗೆ ನಡೆದಿತ್ತು.
ತಮ್ಮನ್ನು ಉಚ್ಚಾಟಿಸಿರುವ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಸಭೆಯಲ್ಲಿ ಕೆಲವು ಶಾಸಕರು ಗೂಂಡಾಗಳಂತೆ ವರ್ತಿಸಿದ್ದಾರೆ. ಅಕ್ಷರಶಃ ತಮ್ಮ ಮೇಲೆ ಹಲ್ಲೆ ನಡೆಸಿ ಹೊರ ಹಾಕಿದ್ದಾರೆ. ಇದೆಲ್ಲವೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಣತಿಯಂತೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಇಬ್ಬರು ನಾಯಕರು ಮತ್ತೊಂದು ಪಕ್ಷವನ್ನು ಹುಟ್ಟು ಹಾಕಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಆಮ್ ಆದ್ಮಿ ಮೇಲೆ ಆಪಾರ ನಂಬಿಕೆ ಇರಿಸಿ ಭಾರೀ ಬಹುಮತದಿಂದ ವಿಧಾನಸಭೆಗೆ ಆಯ್ಕೆ ಮಾಡಿದ್ದ ದೆಹಲಿ ಜನತೆ ಮಾತ್ರ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿ ಇದು ಇತರೆ ಪಕ್ಷಗಳಿಗಿಂತ ಭಿನ್ನವೇನಿಲ್ಲ ಎಂಬ ಮಾತನ್ನಾಡುತ್ತಿದ್ದಾರೆ.
