ಕರ್ನಾಟಕ

‘ಜೆ.ಪಿ.ಭವನ’ ಹೆಸರಿನಲ್ಲಿ ಜೆಡಿಎಸ್ ನೂತನ ಕಚೇರಿ ಆರಂಭ

Pinterest LinkedIn Tumblr

MCS_2656

ಬೆಂಗಳೂರು: ನಗರದಲ್ಲಿ ನೂತನ ಜೆಡಿಎಸ್ ಕಾರ್ಯಾಲಯ ಇಂದು ವಿದ್ಯುಕ್ತವಾಗಿ ಆರಂಭಗೊಂಡಿತು. ಕೃಷ್ಣ ಫ್ಲೋರ್‌ಮಿಲ್ಸ್ ಬಳಿಯಲ್ಲಿನ ಕಾರ್ಯಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಜೆಡಿಎಸ್ ಕಚೇರಿಗೆ ಜೆ.ಪಿ.ಭವನ ಎಂದು ನಾಮಕರಣ ಮಾಡುತ್ತೇವೆ ಎಂದರು. ಇಂದು ಅಧಿಕೃತವಾಗಿ ಕಚೇರಿ ಪ್ರಾರಂಭವಾಗಿದೆ. ಆದರೆ ಶನಿವಾರ ಶ್ರೀರಾಮನವಮಿಯ ಶುಭ ದಿನದಂದು ಕಾರ್ಯಕಾರಿ ಸಮಿತಿ ನಡೆಸಲಿದ್ದೇವೆ ಎಂದು ತಿಳಿಸಿದರು.  1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ

ಬಂದರೆ ಎರಡನೇ ಬಾರಿಗೆ ಜಯಪ್ರಕಾಶ್ ನಾರಾಯಣ್ ಅವರಿಂದ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಲಭಿಸಿತ್ತು. ಹಾಗಾಗಿ ಅವರ ಹೆಸರನ್ನು ಕಚೇರಿಗೆ ಇಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ದೇವೇಗೌಡ ಇಲ್ಲದಿದ್ದರೂ ಕಚೇರಿಯನ್ನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದ ಅವರು, ಪಕ್ಷಕ್ಕೆ ದೇಣಿಗೆ ನೀಡಬಯಸುವವರು ಚೆಕ್, ನಗದು ಅಥವಾ ಇನ್ಯಾವುದೇ ರೀತಿಯಲ್ಲಿ ನೀಡಬಹುದು. ಜೆಡಿಎಸ್ ಕಚೇರಿ ಬಳಿ ಹುಂಡಿಯನ್ನು ಇಡಲಿದ್ದು, ದೇಣಿಗೆ ಸಲ್ಲಿಸಬಹುದು ಎಂದು ಹೇಳಿದರು. ಶಾಸಕ ವೈ.ಎಸ್.ವಿ.ದತ್ತಾ ಮಾತನಾಡಿ, ನೂತನ ಕಚೇರಿ ಆರಂಭವಾಗಲಿರುವ ಜಕ್ಕರಾಯನಕೆರೆಗೂ, ಜನತಾದಳಕ್ಕೂ ಅವಿನಾಭಾವ ಸಂಬಂಧವಿದೆ. ಜಕ್ಕರಾಯನ ಕೆರೆ  ಹಿಂದಿನ ಹಲವಾರು ಹೋರಾಟಕ್ಕೆ ನೆಲೆಯಾಗಿತ್ತು. ಜೆಡಿಎಸ್‌ನ ಹೋರಾಟ ಶನಿವಾರದಿಂದ ಆರಂಭವಾಗಲಿದೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಉತ್ತಮ ಆಡಳಿತ ನಡೆಸಿದ್ದರು. ಮತ್ತೆ ಅವರನ್ನು ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ಕೋನರೆಡ್ಡಿ ಹೇಳಿದರು. ಸಮಾರಂಭದಲ್ಲಿ ಸಂಸದರಾದ ಪುಟ್ಟರಾಜು, ಕುಪೇಂದ್ರರೆಡ್ಡಿ, ಶಾಸಕರಾದ ಚೆಲುವರಾಯಸ್ವಾಮಿ, ಮಧು ಬಂಗಾರಪ್ಪ, ಶಾರದಾ ಪೂರ್ಯಭನಾಯಕ್, ಜಿ.ಟಿ.ದೇವೇಗೌಡ, ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ, ನಾರಾಯಣಗೌಡ, ಗೋಪಾಲಯ್ಯ, ಪಟೇಲ್ ಶಿವರಾಂ, ಶರವಣ, ಬಂಡೇಪ್ಪ ಕಾಶ್ಯಂಪೂರ್ ಸೇರಿದಂತೆ ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.

Write A Comment