ರಾಷ್ಟ್ರೀಯ

ಬೆಂಗಳೂರಿಗೆ ಯಾವುದೇ ಕ್ಷಣದಲ್ಲಿ ಸಿಬಿಐ ಅಧಿಕಾರಿಗಳ ಆಗಮನ

Pinterest LinkedIn Tumblr

DKRavi-CBI

ಬೆಂಗಳೂರು/ನವದೆಹಲಿ,ಮಾ.25: ನಿಗೂಢವಾಗಿ ಸಾವನ್ನಪ್ಪಿರುವ ಐಎಎಸ್ ಅಧಿಕಾರಿ ಡಾ.ಡಿ.ಕೆ.ರವಿ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೇಂದ್ರ ಗೃಹಸಚಿವಾಲಯ ಪರಿಶೀಲನೆ ನಡೆಸಿ ಅಧಿಸೂಚನೆ ಹೊರಡಿಸಿದೆ. ಈ ಕುರಿತು ಸಿಬಿಐ ಕಚೇರಿಗೆ ಪತ್ರ ರವಾನೆಯಾಗಿದ್ದು, ಯಾವುದೇ ಕ್ಷಣದಲ್ಲಾದರೂ ಹಿರಿಯ ಅಧಿಕಾರಿಗಳು ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ನಿನ್ನೆ ಮಧ್ಯಾಹ್ನವಷ್ಟೇ ರಾಜ್ಯ ಸರ್ಕಾರದಿಂದ ಬೆಂಗಳೂರಿನ ಸಿಬಿಐ ಆವರಣದಲ್ಲಿರುವ ಕೇಂದ್ರ ಗೃಹ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಕಚೇರಿಗೆ ಅಧಿಸೂಚನೆ ಹೊರಡಿಸಿರುವ ಪತ್ರ ಸಲ್ಲಿಕೆಯಾಗಿದ್ದು ಅದನ್ನು ಕೂಡಲೇ ನವದೆಹಲಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಮೂರು ತಿಂಗಳೊಳಗೆ ತನಿಖೆ ಆರಂಭಿಸಬೇಕು ಎಂಬುದು ಸೇರಿದಂತೆ ವಿವಿಧ ರೀತಿಯ ಪ್ರಸ್ತಾವನೆಯನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದ್ದು, ಇವುಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ತನಿಖೆಯ ಸ್ವರೂಪ ಹಾಗೂ ಯಾವ ಅಧಿಕಾರಿ ನೇತೃತ್ವ ವಹಿಸಬೇಕು ಎಂಬುದರ ಬಗ್ಗೆ ಸಿಬಿಐ ನಿರ್ದೇಶಕರು ನಿರ್ಧರಿಸಲಿದ್ದಾರೆ. ಈ ಪ್ರಕ್ರಿಯೆ ಇಂದೇ ಪೂರ್ಣಗೊಳ್ಳಬಹುದು ಎಂದು ಕೂಡ ಹೇಳಲಾಗುತ್ತಿದೆ. ಆದರೆ ಇದನ್ನು ಖಚಿತಪಡಿಸುತ್ತಿಲ್ಲ. ಪ್ರಸ್ತುತ ಸಿಬಿಐನಲ್ಲಿ ಜಂಟಿ ನಿರ್ದೇಶಕರಾಗಿರುವ ರೂಪ್ ಕುಮಾರ್ ದತ್ತ ಅವರ ಬಳಿ ರಾಜ್ಯದ ಪ್ರಸಕ್ತ ಬೆಳವಣಿಗೆ ಮತ್ತು ಪ್ರಕರಣ ಕುರಿತಂತೆ ಪ್ರಾಥಮಿಕ ಮಾಹಿತಿ ಕಲೆ ಹಾಕಲಾಗಿದೆ ಎಂದು ಕೂಡ ತಿಳಿದುಬಂದಿದೆ. ಮತ್ತು ಇವರು ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವುದರಿಂದ ಮತ್ತು ಅಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇರುವುದರಿಂದ ರವಿ ಪ್ರಕರಣದ ತನಿಖೆ ವೇಳೆ ಇವರ ಮಾರ್ಗದರ್ಶನವನ್ನು ಪಡೆದುಕೊಳ್ಳಲಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ಹೇಳಿವೆ.

Write A Comment