ಕರ್ನಾಟಕ

ರಫ್ತು ಕರ್ನಾಟಕ 4ನೇ ಸ್ಥಾನ; ಭೌಗೋಳಿಕ ವಿಸ್ತಾರದಲ್ಲಿ 8ನೇ ಸ್ಥಾನ; ಜನಸಂಖ್ಯೆ 9ನೇ ಸ್ಥಾನ

Pinterest LinkedIn Tumblr

ra

ನೈರ್ಸಗಿಕ ಸಂಪನ್ಮೂಲಗಳನ್ನು ಹೇರಳವಾಗಿ ಹೊಂದಿರುವ ಕರ್ನಾಟಕ ಅಂತರರಾಷ್ಟ್ರೀಯ ವ್ಯಾಪಾರ, ರಫ್ತು ವಹಿವಾಟಿನಲ್ಲಿ ದೇಶದ ಹಲವು ರಾಜ್ಯಗಳ ಜತೆ ಮುಂಚೂಣಿಯಲ್ಲಿದೆ. 2013-14ನೇ ಹಣಕಾಸು ವರ್ಷದಲ್ಲಿ ಕಾಫಿ, ಸಾಂಬಾರ ಪದಾರ್ಥ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಉತ್ಪನ್ನ ಮತ್ತು ಸೇವೆಗಳನ್ನು ವಿವಿಧ ದೇಶಗಳಿಗೆ ಮುಟ್ಟಿಸುವ ಮೂಲಕ ರಾಜ್ಯದಲ್ಲಿನ ಕಂಪೆನಿಗಳು ಒಟ್ಟು ₨2.90 ಲಕ್ಷ ಕೋಟಿ ರಫ್ತು ವಹಿವಾಟು ನಡೆಸಿವೆ.

ವಿಜ್ಞಾನ, ಕೈಗಾರಿಕೆ ಮತ್ತು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ, ರಫ್ತು ವಹಿವಾಟಿನಲ್ಲಿಯೂ ವಿಶೇಷ ಸಾಧನೆ ಮಾಡುತ್ತಿದೆ. ಭೌಗೋಳಿಕ ವಿಸ್ತಾರದಲ್ಲಿ ದೇಶದಲ್ಲಿ ಎಂಟನೇ ಸ್ಥಾನದಲ್ಲಿ ಮತ್ತು ಜನಸಂಖ್ಯೆಯಲ್ಲಿ 9ನೇ ಸ್ಥಾನದಲ್ಲಿರುವ ಕರ್ನಾಟಕ, ದೇಶದ ಒಟ್ಟು ಉತ್ಪನ್ನಗಳ ರಫ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ.

ಸಾಫ್ಟ್‌ವೇರ್‌ ಉತ್ಪನ್ನಗಳ ರಫ್ತಿನಲ್ಲಂತೂ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಾಗತಿಕ ಮಟ್ಟದ ಹಲವಾರು ಕಂಪೆನಿಗಳು ನೆಲೆಯೂರಿವೆ. ರಾಜ್ಯದ ಒಟ್ಟು ಉತ್ಪನ್ನಗಳ ರಫ್ತಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್‌ನ ಪಾಲು ಶೇ 61.29ರಷ್ಟಿದೆ. ಮುಂಬರುವ ದಿನಗಳಲ್ಲಿ ಈ ಕ್ಷೇತ್ರದ ಪಾಲು ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

ಕರ್ನಾಟಕದಲ್ಲಿ ಅಗಾಧವಾದ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿದ್ದು, ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರ ವಹಿವಾಟಿನಲ್ಲಿ ತನ್ನದೇ ಆದ ಹೆಗ್ಗಳಿಕೆಯನ್ನು ಹೊಂದಿದೆ. ಕಾಫಿ, ಸಾಂಬಾರ ಪದಾರ್ಥಗಳು, ರೇಷ್ಮೆ, ಗೋಡಂಬಿ, ಕರಕುಶಲ ವಸ್ತುಗಳು, ಅಗರಬತ್ತಿ ಮೊದಲಾದವುಗಳನ್ನು ಮೊದಲಿನಿಂದಲೂ ರಫ್ತು ಮಾಡುತ್ತಿದ್ದು, ಈ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೇಡಿಕೆ ಇದೆ. ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟಿಷರು ಕರ್ನಾಟಕದಿಂದ ಸಾಂಬಾರ ಪದಾರ್ಥಗಳನ್ನು ತಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದರು. ಇವುಗಳ ರುಚಿಗೆ ಮಾರುಹೋಗಿ ಅನೇಕ ಸಾಮ್ರಾಜ್ಯಗಳು ನಮ್ಮ ಮೇಲೆ ದಾಳಿ ಮಾಡಿವೆ ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಇದು ಇಲ್ಲಿನ ಸಾಂಬಾರ ಪದಾರ್ಥಗಳಿಗೆ ಇರುವ ಬೇಡಿಕೆಯನ್ನು ಬಿಂಬಿಸುತ್ತದೆ.

ಕಳೆದ ಎರಡು ದಶಕಗಳಿಂದೀಚೆಗೆ ಕರ್ನಾಟಕ ರಫ್ತು ವಹಿವಾಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಎಂಜಿನಿಯರಿಂಗ್ ಉತ್ಪನ್ನಗಳು, ಸಿದ್ಧ ಉಡುಪುಗಳು, ತೊಗಲಿನ ಉತ್ಪನ್ನಗಳು, ರಾಸಾಯನಿಕಗಳು, ಖನಿಜಗಳು, ಅದಿರು ಇತ್ಯಾದಿಗಳ ರಫ್ತಿನಲ್ಲಿ ರಾಜ್ಯ ಪ್ರಮುಖ ಪಾತ್ರ ವಹಿಸಿದ್ದು, ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ.

ದೇಶ, ವಿದೇಶಗಳು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕಂಪೆನಿಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಕರ್ನಾಟಕದಲ್ಲಿ ನೆಲೆಯೂರಿವೆ. ಆ ಕಂಪೆನಿಗಳ ಸಾಧನೆಯಿಂದಾಗಿ ಕರ್ನಾಟಕ  ರಾಜ್ಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ.

ದೇಶದ ಒಟ್ಟು ಸಾಫ್ಟ್‌ವೇರ್‌ ರಫ್ತಿನಲ್ಲಿ ರಾಜ್ಯದ ಪಾಲು ಮೂರನೇ ಒಂದು ಭಾಗಕ್ಕಿಂತ ಅಧಿಕವಾಗಿದೆ. ಅತ್ಯಾಧುನಿಕ ಎಂಜಿನಿಯರಿಂಗ್ ಉತ್ಪನ್ನಗಳ ರಫ್ತು ಮಾಡುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

ಕೈಗಾರಿಕೆ-ಯಂತ್ರೋಪಕರಣ
ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯವು ಮೊದಲಿನಿಂದಲೂ ಮುಂಚೂಣಿಯಲ್ಲಿದೆ. ಮೆಷಿನ್ ಟೂಲ್, ಉಕ್ಕು, ಸಿಮೆಂಟ್, ಆಟೊಮೊಬೈಲ್, ವಿಮಾನಯಾನ ಸೇರಿದಂತೆ ವಿವಿಧ ಕ್ಷೇತ್ರಗಳ 1054 ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ರಾಜ್ಯದಲ್ಲಿವೆ. 700 ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ 2500 ಮಾಹಿತಿ ತಂತ್ರಜ್ಞಾನ ಕಂಪೆನಿಗಳಿವೆ. ಇದಲ್ಲದೆ 600 ಜವಳಿ ಘಟಕಗಳು, ದೊಡ್ಡ ಪ್ರಮಾಣದ ಆಗ್ರೊ ಘಟಕಗಳೂ ಇವೆ. ಇವೆಲ್ಲ ಉದ್ಯಮ ಕ್ಷೇತ್ರಗಳೂ ಯುವಜನರಿಗೆ ಭಾರಿ ಪ್ರಮಾಣದಲ್ಲಿ ಉದ್ಯೋಗವನ್ನು ದೊರಕಿಸಿಕೊಟ್ಟಿವೆ.

ರಫ್ತು ಪ್ರಶಸ್ತಿ
ರಫ್ತುದಾರರಿಗೆ ಉತ್ತೇಜನ ನೀಡಲು, ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ರಾಜ್ಯದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯು ತನ್ನ ಅಧೀನದಲ್ಲಿ ‘ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ’ವನ್ನು ಆರಂಭಿಸಿದೆ. ಇದು ಪ್ರಮುಖವಾಗಿ ರಾಜ್ಯದಿಂದ 19 ಕ್ಷೇತ್ರಗಳಲ್ಲಿ ಉತ್ಪನ್ನಗಳು ರಫ್ತು ಆಗುತ್ತಿರುವುದನ್ನು ಗುರುತಿಸಿದೆ. ರಫ್ತುದಾರರ ಸಾಧನೆಯನ್ನು ಗುರುತಿಸಿ, ಅವರಿಗೆ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ 1992ರಿಂದೀಚೆಗೆ ಪ್ರತಿ ವರ್ಷ ‘ರಾಜ್ಯ ಮಟ್ಟದ ಶ್ರೇಷ್ಠ ರಫ್ತುದಾರ ಪ್ರಶಸ್ತಿ’ಗಳನ್ನೂ ನೀಡಲಾಗುತ್ತಿದೆ.

‘ರಫ್ತು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಅದು ಇತರರಿಗೆ ಸ್ಫೂರ್ತಿಯಾಗಲಿದೆ. ಅಲ್ಲದೆ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಪ್ರೇರಣೆಯಾಗಲಿದೆ’ ಎನ್ನುತ್ತಾರೆ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ.

2013-14ನೇ ಹಣಕಾಸು ವರ್ಷದಲ್ಲಿ ಕರ್ನಾಟಕದ ರಫ್ತು ವಹಿವಾಟು ರೂ2.90 ಲಕ್ಷ ಕೋಟಿಯಷ್ಟಿತ್ತು. ದೇಶದ ಒಟ್ಟಾರೆ ರಫ್ತು ವಹಿವಾಟಿನಲ್ಲಿ ಕರ್ನಾಟಕದ ಪಾಲೇ ಶೇ 14ರಷ್ಟು ಗಣನೀಯ ಪ್ರಮಾಣದ್ದಾಗಿದೆ.

ರಫ್ತು ಪ್ರಮಾಣ ಹೆಚ್ಚಳದಿಂದ ರಾಜ್ಯದ ಬೊಕ್ಕಸಕ್ಕೆ ಯಾವುದೇ ತೆರಿಗೆಯ ಲಾಭವಿಲ್ಲದೇ ಇದ್ದರೂ, ವಿದೇಶಿ ವಿನಿಮಯದಿಂದಾಗಿ ದೇಶದ ಆರ್ಥಿಕ ಪ್ರಗತಿಯ ಚಿತ್ರಣಕ್ಕೆ ಅನುಕೂಲವಾಗುತ್ತಿದೆ.

ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್‌) ಮತ್ತು ರಫ್ತು ಆಧಾರಿತ ಘಟಕಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ರಫ್ತು ವಹಿವಾಟು ಪ್ರಮಾಣ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಒಟ್ಟು 60 ವಿಶೇಷ ಆರ್ಥಿಕ ವಲಯಗಳಿಗೆ ಅನುಮೋದನೆ ನೀಡಲಾಗಿದೆ. ಆದರೆ, ಈವರೆಗೆ 25 ಮಾತ್ರ ಸ್ಥಾಪನೆಯಾಗಿವೆ. ಭೂ ಸ್ವಾಧೀನ ಸಮಸ್ಯೆ, ಆರ್ಥಿಕ ಹಿಂಜರಿತ ಮತ್ತಿತರ ಕಾರಣಗಳಿಂದಾಗಿ ಅನುಮೋದನೆಗೊಂಡಿರುವ ಎಲ್ಲ ಎಸ್‌ಇಜೆಡ್‌ ಕಾರ್ಯಾರಂಭ ಮಾಡಿಲ್ಲ. ಎಲ್ಲ ಅಡೆತಡೆಗಳನ್ನು ನಿವಾರಿಸಿ ಎಸ್ಇಜೆಡ್‌ ಆರಂಭವಾಗುವಂತೆ ನೋಡಿಕೊಂಡರೆ ಉದ್ಯೋಗಾವಕಾಶ ಭಾರಿ ಪ್ರಮಾಣದಲ್ಲಿ ಸೃಷ್ಟಿಯಾಗುವುದರ ಜೊತೆಗೆ ರಫ್ತು ವಹಿವಾಟು ಹೆಚ್ಚಳಕ್ಕೂ ನೆರವಾಗಲಿದೆ.

4.81 ಲಕ್ಷ ಎಂಎಸ್‌ಎಂಇ
ರಾಜ್ಯದಲ್ಲಿ 4.81 ಲಕ್ಷ ನೋಂದಾಯಿತ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ಸಂಸ್ಥೆಗಳಿದ್ದು(ಎಂಎಸ್‌ಎಂಇ), ಒಟ್ಟಾರೆಯಾಗಿ 28 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ. ಇವುಗಳಲ್ಲಿ ಒಟ್ಟು ರೂ18,635 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಇನ್ನು ರಾಜ್ಯದ ರಫ್ತಿನಲ್ಲಿ ಎಂಎಸ್‌ಎಂಇ ಪಾಲೇ ಶೇ 40ರಷ್ಟಿದೆ.

2014-19ರ ಅವಧಿಯ ಕೈಗಾರಿಕಾ ನೀತಿಯಲ್ಲಿ ಕೈಗಾರಿಕಾ ಸ್ನೇಹಿ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಅವಧಿಯಲ್ಲಿ ರಫ್ತು ಕ್ಷೇತ್ರದ ಬೆಳವಣಿಗೆ ದರವನ್ನು ಈಗಿರುವ ಶೇ 12ರಿಂದ ಶೇ 18ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ರಫ್ತು ಕ್ಷೇತ್ರದ ವಹಿವಾಟು ಪ್ರಮಾಣ ಸದ್ಯ ರೂ3 ಲಕ್ಷ ಕೋಟಿ ಇದ್ದು, ಇದನ್ನು ರೂ6 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅಲ್ಲದೆ ರಫ್ತು ಘಟಕಗಳಿಂದ ಐದು ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆಯೂ ಇದೆ.

ಯಾವ ದೇಶಗಳಿಗೆ ರಫ್ತು?
ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್‌ ಉತ್ಪನ್ನಗಳನ್ನು ಅಮೆರಿಕ, ಬ್ರಿಟನ್, ಥೈವಾನ್, ಸಿಂಗಪುರ, ಫ್ರಾನ್ಸ್‌ಗೆ, ಪೆಟ್ರೋಲಿಯಂ ಉತ್ಪನ್ನಗಳನ್ನು ನೆದರ್ಲೆಂಡ್, ಯೆಮನ್, ಜಪಾನ್, ಚೀನಾ ಮತ್ತಿತರ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಹರಳು ಮತ್ತು ಆಭರಣಗಳನ್ನು ಸಿಂಗಪುರ, ದುಬೈ, ಷಾರ್ಜಾ, ಕುವೇತ್, ಅಮೆರಿಕಗೆ, ಎಂಜಿನಿಯರಿಂಗ್ ಉತ್ಪನ್ನಗಳನ್ನು ಜರ್ಮನಿ, ಅಮೆರಿಕ, ಥೈಲ್ಯಾಂಡ್, ಮೆಕ್ಸಿಕೊ, ಜಪಾನ್‌ಗೆ ರವಾನಿಸಲಾಗುತಿದೆ.

ಕಾಫಿಯನ್ನು ಜೋರ್ಡಾನ್, ಇಸ್ರೇಲ್, ಸ್ಪೇನ್, ಸ್ವೀಡನ್, ಜರ್ಮನಿ, ಜಿನಿವಾಗೆ, ಮಸಾಲೆ ಪದಾರ್ಥಗಳನ್ನು ಅಮೆರಿಕ, ಜಪಾನ್, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾಗೆ ಹೆಚ್ಚಾಗಿ ರಫ್ತು ಮಾಡಲಾಗುತ್ತದೆ. ಸಿದ್ಧ ಉಡುಪುಗಳು, ರೇಷ್ಮೆ ಉತ್ಪನ್ನಗಳು ಮತ್ತು ಉಣ್ಣೆಯನ್ನು ಬ್ರಿಟನ್, ಇಟಲಿ, ಜರ್ಮನಿ, ಹಾಂಕಾಂಗ್, ಟರ್ಕಿ, ಕೆನಡಾ, ಆಸ್ಟ್ರೇಲಿಯಾ, ಅಮೆರಿಕಗೆ ರಫ್ತು ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸಲಾಗುತ್ತಿದೆ.

ಗಣಿಕಾರಿಕೆಯಿಂದ ಖೋತಾ
ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಗೆ ಸುಪ್ರೀಂ ಕೋರ್ಟ್‌ ಕಡಿವಾಣ ಹಾಕಿದ ಪರಿಣಾಮ ಮೂರು ವರ್ಷಗಳಿಂದೀಚೆಗೆ ಕಬ್ಬಿಣ ಮತ್ತು ಅದಿರು ಕ್ಷೇತ್ರದಲ್ಲಿನ ರಫ್ತು ವಹಿವಾಟು ಕಡಿಮೆಯಾಗಿದೆ. 2011-12ರಲ್ಲಿ ಅದಿರು ರಫ್ತಿನಿಂದ ರೂ1134 ಕೋಟಿ ವಹಿವಾಟು ನಡೆದಿದ್ದರೆ, 2013-14ರಲ್ಲಿ ಕೇವಲ ರೂ739 ಕೋಟಿ ವಹಿವಾಟು ನಡೆದಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಗಣಿಕಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ ಕಾರಣ ಈ ಕ್ಷೇತ್ರದ ರಫ್ತು ವಹಿವಾಟು ಕಡಿಮೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ರಫ್ತಿಗೆ ಬೆಂಬಲವಿದೆ
ಶೇಂಗಾ, ಮೆಣಸಿನಕಾಯಿ, ಅಕ್ಕಿಯನ್ನು ಇಂಡೊನೇಷ್ಯಾ, ಮಲೇಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ಮೊದಲಾದ ರಾಷ್ಟ್ರಗಳಿಗೆ ರಫ್ತು ಮಾಡುತ್ತೇವೆ. 2007ರಿಂದ ರಫ್ತು ವಹಿವಾಟು ನಡೆಸುತ್ತಿದ್ದು, ನಾಲ್ಕು ಬಾರಿ ಶ್ರೇಷ್ಠ ರಫ್ತು ಪ್ರಶಸ್ತಿ ಬಂದಿದೆ. ಕೇಂದ್ರ ಸರ್ಕಾರದಿಂದ ಶೇ 1ರಷ್ಟು ಸಬ್ಸಿಡಿ ಸಿಗುತ್ತಿದೆ. ರಾಜ್ಯ ಸರ್ಕಾರ ರಫ್ತಿಗೆ ತೆರಿಗೆ ವಿನಾಯಿತಿ ನೀಡಿದೆ.
ನಾವು ಈಗ ಚೆನ್ನೈ ಅಥವಾ ಮುಂಬೈನಿಂದ ರಫ್ತು ವಹಿವಾಟು ನಡೆಸುತ್ತಿದ್ದೇವೆ. ಮಂಗಳೂರು ಬಂದರನ್ನು ಸುಧಾರಣೆ ಮಾಡಿ ಇಲ್ಲಿಂದಲೇ ರಫ್ತು ಮಾಡಲು ಅವಕಾಶ ನೀಡಿದರೆ ಸಾಗಣೆ ವೆಚ್ಚ ತಗ್ಗುತ್ತದೆ. ಐಟಿ ವಲಯಕ್ಕೆ ಸಿಗುತ್ತಿರುವ ಆದ್ಯತೆ ಬೇರೆ ಉದ್ಯಮ ವಲಯಗಳಿಗೆ ಸಿಗುತ್ತಿಲ್ಲ. ಸರ್ಕಾರ ಇತರೆ ಉದ್ಯಮ ಕ್ಷೇತ್ರಗಳತ್ತಲೂ ಗಮನಹರಿಸಬೇಕು.
ಸತೀಶ್, ಗಣೇಶ್ ಎಕ್ಸಿಂ ಲಿ. ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ, ರಫ್ತು ಪ್ರಶಸ್ತಿ ಪುರಸ್ಕೃತರು.

ಮೂರು ವರ್ಷಗಳಿಂದ ಮೆಕ್ಕೆಜೋಳವನ್ನು ಮಲೇಷ್ಯಾ, ವಿಯೆಟ್ನಾಂ ಮೊದಲಾದ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದೇವೆ. ಸದ್ಯ ಕೃಷಿ ಆಧಾರಿತ ಉತ್ಪನ್ನಗಳ ರಫ್ತಿಗೆ ಒಳ್ಳೆಯ ಅವಕಾಶವಿದೆ. ಸರ್ಕಾರ ನೂತನ ವಿದೇಶ ವ್ಯಾಪಾರ ನೀತಿಯನ್ನು ಇತ್ತೀಚೆಗೆ ರೂಪಿಸಿದ್ದು, ಅದರಿಂದ ಇನ್ನಷ್ಟು ಅನುಕೂಲವಾಗುವ ನಿರೀಕ್ಷೆ ಇದೆ. ಮುಂಬೈ ಬಂದರು ಮೂಲಕ ಸದ್ಯ ರಫ್ತು ಮಾಡುತ್ತಿದ್ದೇವೆ. ಮಂಗಳೂರು ಬಂದರನ್ನು ಅಭಿವೃದ್ಧಿಪಡಿಸಿ, ಅಲ್ಲಿಂದಲೇ ರಫ್ತು ವಹಿವಾಟಿಗೆ ಅವಕಾಶ ಕಲ್ಪಿಸಿಕೊಟ್ಟರೆ ಬಹಳ ಅನುಕೂಲವಾಗುತ್ತದೆ.
ಲಲಿತ್ ಜೈನ್, ರಾಜಗುರು ಫುಡ್ಸ್, ವಿಜಯಪುರ, ರಫ್ತು ಪ್ರಶಸ್ತಿ ಪುರಸ್ಕೃತರು.

Write A Comment