ಕನ್ನಡ ವಾರ್ತೆಗಳು

ಉಳ್ಳಾಲ ಉರೂಸ್ ದಿನಗಳಲ್ಲಿ 7 ಗಂಟೆ ಬಳಿಕ ಸಮುದ್ರ ವೀಕ್ಷಣೆಗೆ ನಿಷೇಧ

Pinterest LinkedIn Tumblr
ullalla_uroos_photo
ಉಳ್ಳಾಲ,ಮಾರ್ಚ್.24 : ಸಮುದ್ರ ತಟದಲ್ಲಿ ವಿಹರಿಸುವ ವಿಹಾರಾರ್ಥಿಗಳು, ಪ್ರವಾಸಿಗಳಿಗೆ ಅದೆಷ್ಟು ಎಚ್ಚರಿಕೆ ನೀಡಿದರೂ ಫಲಿಸದ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಉಳ್ಳಾಲ ಉರೂಸ್ ದಿನಗಳಲ್ಲಿ ಸಂಜೆ ಬಳಿಕ ಸಮುದ್ರ ವೀಕ್ಷಣೆಗೆ ನಿಷೇಧ ಹೇರುವುದು, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡ ಬೇಕೆಂಬ ಬಗ್ಗ್ಗೆ ಉಳ್ಳಾಲ ಸಯ್ಯದ್ ಮದನಿ ದರ್ಗಾ ಉರೂಸ್ ಪ್ರಯುಕ್ತ ಭಾನುವಾರ ದರ್ಗಾ ಸಭಾಂಗಣದಲ್ಲಿ ನಡೆದ ಸರ್ವ ಧರ್ಮೀಯರು, ರಾಜಕೀಯ ಮುಖಂಡರ ಸಭೆಯಲ್ಲಿ ಆಗ್ರಹ ಕೇಳಿ ಬಂತು.
ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಉರೂಸ್ ಉಳ್ಳಾಲದ ಜನತೆಗೆ ಹೆಮ್ಮೆಯ ವಿಚಾರವಾಗಿದ್ದು ಕಾರ್ಯಕ್ರಮಕ್ಕೆ ಬರುವವರು ಎಲ್ಲರೂ ಒಳ್ಳೆಯವರು ಎಂದು ಹೇಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಜನರು ಹೆಚ್ಚಿನ ತಾಳ್ಮೆ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಹೇಳಿದರು. ಉರೂಸ್ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದು ಉಳ್ಳಾಲ ಶ್ರೀ ಚೀರುಂಭ ಭಗವತೀ ತೀಯ ಸೇವಾ ಸಮಾಜದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಅಭಿಪ್ರಾಯ ಪಟ್ಟರು.
ಕಡಲ್ಕೊರೆತ ತಡೆ ಕಾಮಗಾರಿ ನಡೆಯುತ್ತಿದ್ದು ಸಾಕಷ್ಟು ಪ್ರವಾಸಿಗರು ಸಮುದ್ರ ವೀಕ್ಷಣೆಗೆ ತೆರಳುತ್ತಿದ್ದಾರೆ. ಸಂಜೆ ವೇಳೆ ಅಲೆಗಳ ಅಬ್ಬರ ಇರುವುದು ಅವರಿಗೆ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಸಂಜೆ 7ಗಂಟೆ ಬಳಿಕ ಸಮುದ್ರ ವೀಕ್ಷಣೆಗೆ ತಡೆ ಹೇರಬೇಕು ಎಂದು ಉಳ್ಳಾಲ ಮೊಗವೀರ ಸಂಘ ಅಧ್ಯಕ್ಷ ಸದಾನಂದ ಬಂಗೇರ ಹೇಳಿದರು.  ಪೆರ್ಮನ್ನೂರು ಚರ್ಚ್ ಧರ್ಮಗುರುಗಳ ಸಹಾಯಕ ರೆ. ರಾಹುಲ್ ಡೆಕ್ಸ್ಟರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಕಾಂಗ್ರೆಸ್ ಜಿಲ್ಲಾ ಹಿಂದುಳಿದ ವಿಭಾಗಗಳ ಅಧ್ಯಕ್ಷ ಸದಾಶಿವ ಉಳ್ಳಾಲ್, ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್, ನಗರಸಭೆಯ ಅಧ್ಯಕ್ಷ ದಿನೇಶ್ ರೈ ಮತ್ತಿತರರು ಮಾತನಾಡಿದರು.
*ಸಣ್ಣ ಘಟನೆ ನಡೆದರೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ಇಲಾಖೆ ಸಮಾಜದ ಒಂದು ಅಂಗ, ಪೊಲೀಸರ ಮೇಲೆ ಜನರು ನಂಬಿಕೆ ಕಳೆದುಕೊಂಡರೆ ಶಾಂತಿ, ಸುವ್ಯವಸ್ಥೆ ಅಸಾಧ್ಯ. ಇಲಾಖೆಯಿಂದ ಪ್ರಮುಖ ಸ್ಥಳಗಳಲ್ಲಿ ವೀಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿದ್ದು, ದರ್ಗಾ ಖಾಸಗಿಯವರನ್ನು ನೇಮಿಸಲಿ. 200 ಸಿಸಿ ಕ್ಯಾಮರ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ -ಮುರುಗನ್, ಮಂಗಳೂರು ಕಮಿಷನರ್
*ಉಳ್ಳಾಲ ಕ್ಷೇತ್ರದ ಶಾಸಕರು ಆರೋಗ್ಯ ಸಚಿವರು, ಕೇವಲ ಭಾಷಣ ಮಾಡಿದರೆ ಸಾಲದು, ಶುಚಿತ್ವಕ್ಕೆ ಆದ್ಯತೆ ನೀಡಬೇಕು. ನಾವಾದರೂ ಸ್ಥಳೀಯರಾಗಿದ್ದು ಸುಧಾರಿಸಿಕೊಂಡು ಹೋಗುತ್ತೇವೆ. ಆದರೆ ಉರೂಸ್‌ಗೆ ಹೊರ ರಾಜ್ಯದ ಜನರು ಬರುವುದರಿಂದ ಅವರ ಮುಂದೆ ಮರ್ಯಾದೆ ತೆಗೆಯಬೇಡಿ. -ಸೀತಾರಾಮ ಬಂಗೇರ, ಬಿಜೆಪಿ ಹಿರಿಯ ಮುಖಂಡ
 

 

Write A Comment