ಬಂಟ್ವಾಳ,ಮಾರ್ಚ್.21 : ಬಿ.ಸಿ.ರೋಡ್ ಸರ್ಕಲ್ ಬಳಿ ಶುಕ್ರವಾರ ಬೈಕ್-ಟ್ಯಾಂಕರ್ ಮಧ್ಯೆ ನಡೆದ ಅಪಘಾತದಲ್ಲಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಕಾಸರಗೋಡಿನ ಪೆರ್ಲ ನಿವಾಸಿ ಉಮೇಶ್ ರೈ ಎಂಬವರ ಪುತ್ರಿ ದೀಪ್ತಿ ರೈ (24) ಮೃತಪಟ್ಟ ಯುವತಿ.
ತನ್ನ ಭಾವಿ ಪತಿ ಕಾಸರಗೋಡು ಮೂಲದ ವಿನೋದ್ ಎಂಬವರೊಂದಿಗೆ ಬೈಕ್‌ನಲ್ಲಿ ಪೆರ್ಲದಿಂದ ವಿಟ್ಲ-ಬಿ.ಸಿ.ರೋಡ್ ರಸ್ತೆಯಾಗಿ ಮಂಗಳೂರಿಗೆ ತೆರಳುತ್ತಿದ್ದರು. ದೀಪ್ತಿಯ ತಂದೆ ಮಂಗಳೂರು ರೈ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಭೇಟಿಯಾಗಲು ಬೈಕ್‌ನಲ್ಲಿ ತೆರಳುತ್ತಿದ್ದರೆಂದು ತಿಳಿದುಬಂದಿದೆ.
ಬಿ.ಸಿ.ರೋಡ್ ಸರ್ಕಲ್ ಸಮೀಪ ಹಿಂದಿನಿಂದ ಧಾವಿಸಿ ಬಂದ ಟ್ಯಾಂಕರೊಂದು ವಾಹನವೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಯಿತು. ಆಗ ರಸ್ತೆಗೆ ಬಿದ್ದ ದೀಪ್ತಿ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬೈಕ್ ಸವಾರ ವಿನೋದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಗ್ಗೆ ಬಂಟ್ವಾಳ ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿನೋದ್ ಮತ್ತು ದೀಪ್ತಿಗೆ ಮದುವೆ ನಿಶ್ಚಯವಾಗಿತ್ತೆಂದು ಅವರ ಸಂಬಂಧಿಕರು ತಿಳಿಸಿದ್ದಾರೆ.


