ಮಂಗಳೂರು, ಮಾರ್ಚ್.18: ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಉಚಿತ ಆರೋಗ್ಯಸೇವೆ ಒದಗಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಗಂಬೀರ ಕಾಯಿಲೆಗಳಿಂದ ಬಳಲುವ ಎ.ಪಿ.ಎಲ್.ಕುಟುಂಬಗಳ ಸದಸ್ಯರಿಗೂ ಸಹ-ಪಾವತಿ ಆಧಾರದ ಮೇಲೆ ಚಿಕಿತ್ಸೆ ಒದಗಿಸಲು ರಾಜೀವ್ ಆರೋಗ್ಯ ಭಾಗ್ಯ,ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಗಂಭೀರ ಹಾಗೂ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾದ ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳ ಸದಸ್ಯರಿಗೆ ರಾಜ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸಹ-ಪಾವತಿ ಆಧಾರದಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯ ನೆರವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.
ಹೃದ್ರೋಗ, ಕ್ಯಾನ್ಸರ್,ನರರೋಗ, ಮೂತ್ರ ಪಿಂಡದ ಖಾಯಿಲೆ, ಸುಟ್ಟ ಗಾಯ, ಅಪಘಾತ (ಮೋಟಾರು ವಾಹನ ಕಾಯಿದೆಯಡಿಯಲ್ಲಿ ವಿಮೆ ಮಾಡಿದಂತಹ ಅಪಘಾತ ಪ್ರಕರಣಗಳನ್ನು ಹೊರತುಪಡಿಸಿ) ನವಜಾತ ಶಿಶುಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ ಗಂಭೀರ ಖಾಯಿಲೆಗಳಿಗೆ ಚಿಕಿತ್ಸೆಯ ಸೌಲಭ್ಯ ಈ ಯೋಜನೆಯಲ್ಲಿ ದೊರೆಯುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯಲು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಕೊಡಲ್ಪಟ್ಟ ಎ.ಪಿ.ಎಲ್.ಕಾರ್ಡ್ ಹೊಂದಿರುವ ಎಲ್ಲಾಕುಟುಂಬಗಳು ಈ ಯೋಜನೆಯ ಅಧಿಕೃತ ಫಲಾನುಭವಿಗಳಾಗಿರುತ್ತಾರೆ.
ಸಹಪಾವತಿ ವಿಧಾನದಲ್ಲಿ ಸಾಮಾನ್ಯ ವಾರ್ಡ್ ಸೌಲಭ್ಯಕ್ಕಾಗಿ ಮೂಲ ಪ್ಯಾಕೇಜ್ ದರದಲ್ಲಿ ಕ್ರಮವಾಗಿ ಸರ್ಕಾರ ಹಾಗೂ ಫಲಾನುಭವಿಗಳು 70:30 ರ ಅನುಪಾತದಲ್ಲಿ ಪಾವತಿಸಲು ಬದ್ದರಾಗಿರಬೇಕು.ಈ ವಾರ್ಡ್ಗಳ ಸೌಲಭ್ಯ ಪಡೆಯುವ ಫಲಾನುಭವಿಗಳು ಯಾವುದೇ ಹೆಚ್ಚುವರಿ ಸೌಲಭ್ಯಗಳಿಗೆ ಅರ್ಹರಾಗಿರುವದಿಲ್ಲ. ಅರೆ ಖಾಸಗಿ, ಖಾಸಗಿ ಮತ್ತು ಲಕ್ಸುರಿ ವಾರ್ಡ್ಗಳಿಗೆ ನೋಂದಾಯಿತ ಆಸ್ಪತ್ರೆಗಳು ತಮ್ಮದೇ ಆದ ಪ್ಯಾಕೇಜ್ ದರಗಳನ್ನು ನಿಗಧಿಪಡಿಸಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ಸರ್ಕಾರವು ಮೂಲ ಪ್ಯಾಕೇಜ್ ದರದ ಶೇ.50%ರಷ್ಟು ಮೂತ್ತವನ್ನು ಮಾತ್ರ ಪಾವತಿಸುತ್ತದೆ. ಇನ್ನುಳಿದ ಬಿಲ್ಲಿನ ಮೂತ್ತವನ್ನು ನೆಟ್ವರ್ಕ್ ಆಸ್ಪತ್ರೆಗೆ ಫಲಾನುಭವಿಯು ಸಹಪಾವತಿಯ ಆಧಾರದಲ್ಲಿ ಪಾವತಿಸಬೇಕಾಗುದೆ.
ರಾಜ್ಯದಲ್ಲಿ ಒಟ್ಟು 109 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ನೋಂದಾಯಿತವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿ, ಗ್ಲೋಬಲ್ ಮಲ್ಟಿಸ್ಪೆಷಾಲಿಟಿ ಅಸ್ಪತ್ರೆ ಮಂಗಳೂರು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಪುತ್ತೂರು, ಬೆನಕ ಹೆಲ್ತ್ ಕೇರ್ ಸೆಂಟರ್ ಉಜಿರೆ ಸೇರಿವೆ.
