ಮಂಗಳೂರು,ಮಾರ್ಚ್.12: ಶ್ರೀ ಮತ್ತು ಶ್ರೀಮತಿ ಇಂದಿರಾಬಾಬು ಕೊಟ್ಟಾರಿ ಅರ್ಪಿಸುವ ಶ್ರೀ ಯಜ್ಞಾಧ್ಯ ಪ್ರೊಡಕ್ಷನ್ನಲ್ಲಿ ತಯರಾದ ತುಳು ಚಿತ್ರರಂಗದ ಬಹು ನಿರೀಕ್ಷಿತ ಹಾಸ್ಯ ಹಾಗೂ ಕಥಾ ಪ್ರಧಾನವಾಗಿರುವ “ಸೂಂಬೆ’ ತುಳು ಚಲನಚಿತ್ರ ನಾಳೆಯಿಂದ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಸಾಯಿಕೃಷ್ಣ ಕುಡ್ಲ ಅವರು ಮಾಹಿತಿ ನೀಡಿದ್ದಾರೆ.
ಬುಧವಾರ ನಗರದ ಸಿನೆಪೊಲಿಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಶೋರ್ ಕೊಟ್ಟಾರಿ ಮತ್ತು ಶ್ವೇತಾ ಕೆ. ಕೊಟ್ಟಾರಿ ಅವರ ನಿರ್ಮಾಣ ಹಾಗೂ ಸಾಯಿ ಕೃಷ್ಣ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಮಂಗಳೂರಿನ ಜ್ಯೋತಿ, ಸಿನೆಪೊಲಿಸ್, ಬಿಗ್ಸಿನೆಮಾ, ಪಿವಿಆರ್, ಉಡುಪಿಯ ಅಲಂಕಾರ್, ಕಾರ್ಕಳದ ರಾಧಿಕಾ, ಫ್ಲಾನೆಟ್, ಮೂಡಬಿದ್ರೆಯ ಅಮರಶ್ರೀ, ಬಿ.ಸಿ. ರೋಡ್ನ ನಕ್ಷತ್ರ, ಬೆಳ್ತಂಗಡಿಯ ಭಾರತ್, ಪುತ್ತೂರಿನ ಅರುಣಾ, ಮಣಿಪಾಲದ ಐನಾಕ್ಸ್ ಸೇರಿದಂತೆ ದ.ಕ. ಹಾಗೂ ಉಡುಪಿ ಜಿಲ್ಲೆಯ ಒಟ್ಟು 12 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.
ಮಂಗಳೂರಿನ ಯುವ ಪ್ರತಿಭೆ ರಾಹುಲ್ ಈ ಚಿತ್ರದ ನಾಯಕನಾಗಿದ್ದು, ನಾಯಕಿಯಾಗಿ ಹಿಂದಿ ಧಾರಾವಾಹಿ ನಟಿ ಶ್ರೀತಮ ಮುಖರ್ಜಿ ಅಭಿನಯಿಸಿದ್ದಾರೆ. ಕರಾವಳಿಯ ಬಹುತೇಕ ಕಾಮಿಡಿ ಕಲಾವಿದರು ಹಾಗೂ ಕನ್ನಡದ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಯುವ ಸಂಗೀತ ನಿರ್ದೇಶಕ ಎಡ್ಬರ್ಗ್ ದಿಲೋನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಸಾಹಿತ್ಯ ಹಾಗೂ ರಾಗ ಸಂಯೋಜನೆಯನ್ನು ಶಶಿರಾಜ್ ರಾವ್ ಕಾವೂರು ನೀಡಿದ್ದಾರೆ ಎಂದು ಸಾಯಿಕೃಷ್ಣ ವಿವರಿಸಿದರು.
ತುಳು ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದ ಹಲವಾರು ಖ್ಯಾತ ನಟರು ಹಾಗೂ ತುಳು ಚಿತ್ರದ ಕಲಾವಿದರು ಅಭಿನಯಿಸಿರುವುದು “ಸೂಂಬೆ’ ಚಿತ್ರದ ಬಹುಮುಖ್ಯ ಆಕರ್ಷಣೆ. ವಿಶೇಷ ಅತಿಥಿ ಪಾತ್ರದಲ್ಲಿ ಸ್ಯಾಂಡಲ್ವುಡ್ನ ಶ್ರೀನಗರ ಕಿಟ್ಟಿ ಹಾಗೂ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಅವರು ಮೊದಲ ಬಾರಿಗೆ ತುಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೊರ್ವ ಹಾಸ್ಯ ಕಲಾವಿದ ಬಿರದಾರ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ತುಳು ಚಿತ್ರ ರಂಗದ ಖ್ಯಾತ ನಟರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸುಂದರ್ ರೈ ಮಂದಾರ, ಪ್ರಸನ್ನ ಶೆಟ್ಟಿ ಬೈಲೂರು, ಜ್ಯೋತಿಷ್ ಶೆಟ್ಟಿ, ಸುಧಿಧೀರ್ ಬಲ್ಮಠ, ಸುರೇಶ್ ಕುಲಾಲ್ ಹಾಗೂ ಇತರ ಕಲಾವಿದರು “ಸೂಂಬೆ’ಯಲ್ಲಿದ್ದಾರೆ ಎಂದು ಸಾಯಿಕೃಷ್ಣ ಕುಡ್ಲ ತಿಳಿಸಿದ್ದಾರೆ.
ಚಿತ್ರದ ಬಜೆಟ್ ಒಂದು ಕೋಟಿ…
ನಿರ್ಮಾಪಕ ಕಿಶೋರ್ ಕೊಟ್ಟಾರಿ ಮಾತನಾಡಿ, ತುಳುವಿನ ಕಾಮಿಡಿ ಪ್ರಮುಖರ ಜತೆಗೆ ಕನ್ನಡದ ಪ್ರಮುಖ ಕಲಾವಿದರನ್ನು ಜತೆಯಾಗಿಸಿದ “ಸೂಂಬೆ’ ಚಿತ್ರ ತುಳು ಚಿತ್ರರಂಗದಲ್ಲಿ ಇನ್ನೊಂದು ಯಶಸ್ವಿ ಚಿತ್ರವಾಗಲಿದೆ. ಮಂಗಳೂರು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಚಿತ್ರ ತಯಾರಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಶ್ವೇತಾ ಕೆ. ಕೊಟ್ಟಾರಿ, ಸಹ ನಿರ್ಮಾಪಕ ಹೇಮಂತ್ ಕೊಟ್ಟಾರಿ, ಕಾರ್ಯಕಾರಿ ನಿರ್ಮಾಪಕ ಅಶ್ವಿತ್ ಕೊಟ್ಟಾರಿ, ಚಿತ್ರನಟರಾದ ಭೋಜರಾಜ್ ವಾಮಂಜೂರ್, ರಾಹುಲ್, ಪ್ರಸನ್ನ ಶೆಟ್ಟಿ ಬೈಲೂರು, ಸಂಗೀತ ನಿರ್ದೇಶಕ ಎಡ್ಬರ್ಗ್ ದಿಲೋನ್ ಮೊದಲಾದವರು ಉಪಸ್ಥಿತರಿದ್ದರು.









