ಬೆಂಗಳೂರು, ಮಾ.11: ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಕೆಂಪಣ್ಣ ಆಯೋಗದಿಂದ ಯಾವುದೇ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಆಯೋಗ ರದ್ದು ಮಾಡಿದರೆ ಆಸಕ್ತಿ ಇರುವವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಚಿತ್ರಕಲಾ ಪರಿಷತ್ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ ಜೊತೆ ಬೇಕಾದರೂ ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ.
ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಕಾನೂನುಗಳ ಹೆಸರಿನಲ್ಲಿ ಸುಳ್ಳನ್ನು ತಿರುಚಿ ಸತ್ಯ ಮಾಡಿ ಜನರನ್ನು ವಂಚಿಸುವ ಬದಲು ಜ್ಞಾನಜ್ಯೋತಿ ಸಭಾಂಗಣದಲ್ಲಿ ಬಹಿರಂಗ ಚರ್ಚೆಗ ವೇದಿಕೆ ಸಿದ್ಧಪಡಿಸಲಿ. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಸಾಮಾಜಿಕ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್.ಹಿರೇಮಠ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಕಾನೂನು ತಜ್ಞರ ಸಮ್ಮುಖದಲ್ಲಿ ನಾನು ಚರ್ಚೆ ಮಾಡಲು ಸಿದ್ಧನಿದ್ದೇನೆ. ನನಗೆ ಕಾನೂನಿನ ಪರಿಜ್ಞಾನವಿಲ್ಲ ಎನ್ನುವ ಉಗ್ರಪ್ಪ ಅವರು ಚರ್ಚೆಗೆ ಬರಲು ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದರು.
ಕಂಪಣ್ಣ ಆಯೋಗ ರದ್ದುಮಾಡಿ: ನ್ಯಾಯಮೂರ್ತಿ ಕೆಂಪಣ್ಣ ಅವರ ಆಯೋಗ ಸತ್ಯಶೋಧನಾ ಸಮಿತಿ ಮಾತ್ರ. ಅದರಿಂದ ಯಾರನ್ನೂ ಶಿಕ್ಷಿಸಲು ಸಾಧ್ಯವಿಲ್ಲ. ನನ್ನನ್ನೂ ಜೈಲಿಗೆ ಕಳುಹಿಸಲು ಆಗುವುದಿಲ್ಲ. ಅನಗತ್ಯವಾಗಿ ಜನರ ತೆರಿಗೆ ಹಣ 8-10 ಕೋಟಿಯನ್ನು ಖರ್ಚು ಮಾಡಿ ಆಯೋಗವನ್ನು ಮುಂದುವರೆಸುವ ಬದಲು ರದ್ದು ಮಾಡಿ ಎಂದು ಆಗ್ರಹಿಸಿದರು. ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣ ಕುರಿತು ಯಾರಾದರೂ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರೆ ಮೊದಲು ಕೆಂಪಣ್ಣ ಆಯೋಗದ ಮುಂದೆ ವಾದ ಮಂಡಿಸಿ ಎಂಬ ಉತ್ತರ ಸಿಗಬಹುದು. ಹೀಗಾಗಿ ನ್ಯಾಯಾಂಗ ಹೋರಾಟ ಮಾಡುವವರಿಗಾಗಿ ಆಯೋಗವನ್ನು ರದ್ದು ಮಾಡಬೇಕು. ಈ ಹಿಂದೆ ಜಿ ಕೆಟಗರಿ ನಿವೇಶನ ಹಂಚಿಕೆ ಹಗರಣದ ತನಿಖೆಗಾಗಿ ಪದ್ಮರಾಜ್ ಆಯೋಗ ರಚಿಸಲಾಗಿತ್ತು. ಆದರೆ ಎರಡೂವರೆ ಕೋಟಿ ಖರ್ಚಾದ ನಂತರ ಇದ್ದಕ್ಕಿದ್ದಂತೆ ಸರ್ಕಾರ ಆಯೋಗವನ್ನೇ ರದ್ದು ಮಾಡಿದೆ.
ಅದರ ಬದಲು ಆರಂಭದಲ್ಲೇ ಆಯೋಗ ರದ್ದು ಮಾಡಿ ನ್ಯಾಯಾಲಯದಲ್ಲಿ ಹೋರಾಟ ಮಾಡುವವರಿಗೆ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು. ಒಂದು ವೇಳೆ ಆಯೋಗ ರದ್ದಾದರೆ ಜೆಡಿಎಸ್ ಪಕ್ಷವೇ ನ್ಯಾಯಾಲಯಲ್ಲಿ ಅರ್ಕಾವತಿ ಡಿ ನೋಟಿಫಿಕೇಷನ್ ಹಗರಣವನ್ನು ಪ್ರಶ್ನಿಸಲಿದೆ ಎಂದು ಅವರು ಹೇಳಿದರು. ನನ್ನ ಕುಟುಂಬದ ಆಸ್ತಿಯನ್ನು ಸಿಬಿಐ ತನಿಖೆಗೆ ಒಳಪಡಿಸಿ ಎಂದು ಈ ಹಿಂದೆ ನಾನೇ ಖುದ್ದಾಗಿ ಒಂದೂವರೆ ದಿನ ಉಪವಾಸ ಧರಣಿ ನಡೆಸಿದ್ದೇನೆ. ಬಿಜೆಪಿ ಸರ್ಕಾರ ಅಕ್ರಮಗಳನ್ನು ಬಯಲಿಗೆಳೆದಾಗ ನನ್ನ ಕುಟುಂಬದ ವಿರುದ್ಧ ಪುಸ್ತಕವನ್ನೇ ಪ್ರಕಟಿಸಿ ನಿರ್ಮಲಾ ಸೀತಾರಾಂ ಅವರನ್ನು ಕರೆಸಿ ಬಿಡುಗಡೆ ಮಾಡಲಾಯಿತು. ನಾನು ಆರೋಪಗಳಿಗೆ ಹೆದರಿ ಪಲಾಯನ ಮಾಡುವುದಿಲ್ಲ. ಈ ನೆಲದ ಕಾನೂನನ್ನು ಗೌರವಿಸಿ ಹೋರಾಡಲು ಸಿದ್ಧನಿದ್ದೇನೆ. ಯಡಿಯೂರಪ್ಪ ಅವರ ವಿರುದ್ಧ ಡಿ ನೋಟಿಫಿಕೇಷನ್ ಪ್ರಕರಣಗಳನ್ನು ಬಯಲಿಗೆಳೆದಿದ್ದಕ್ಕಾಗಿ ನ್ಯಾಯಾಲಯದ ಮೊಕದ್ದಮೆ ಎದುರಿಸುತ್ತಿದ್ದೇನೆ. ಈಗ ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಬಗ್ಗುವ ಪ್ರಶ್ನೆಯೇ ಇಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಬದ್ಧವಾಗಿ 272 ಎಕರೆ ಡಿ ನೋಟಿಫಿಕೇಷನ್ ಮಾಡಿದ್ದೇನೆ. ಸಿದ್ದರಾಮಯ್ಯ ಅವರಂತೆ ರೀಡೂ ಬಳಸಿಕೊಂಡು ತಪ್ಪಿಸಿಕೊಳ್ಳುವ ಅಗತ್ಯ ನನಗಿಲ್ಲ ಎಂದರು.
ಎಂ.ಸಿ.ನಾಣಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಮಹಾ ಕಾನೂನು ಪಂಡಿತರಾದ ನಾಣಯ್ಯ ಅವರು ಕ್ಲೀನ್ ಚಿಟ್ ನೀಡಿದ ಮೇಲೆ ಕೆಂಪಣ್ಣ ಆಯೋಗದ ತನಿಖೆ ಏನು ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
