ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಇದರ ಜಿಲ್ಲೆ 317-ಡಿ 5 ನೇ ಪ್ರಾಂತ್ಯದ ಪ್ರಾಂತೀಯ ಅಧ್ಯಕ್ಷರಾದ ಲಯನ್ ಚಂದ್ರಮೋಹನ್ ಜೆ.ಎಂಜೆಎಫ್ ಇವರ ನೇತೃತ್ವದಲ್ಲಿ 2014-15 ರ ಪ್ರಾಂತೀಯ ಸಮ್ಮೇಳನ “ನಮನ” ದಿನಾಂಕ 8-3-2015 ರಂದು ಸಂಜೆ ನಗರದ ಸುಲ್ತಾನ್ ಬತ್ತೇರಿಯಲ್ಲಿನ ಬೋಟ್ ಕ್ಲಬ್ ನಲ್ಲಿ ಜರಗಿತು. ಸಮ್ಮೇಳನವನ್ನು ಲಯನ್ಸ್ ಮತ್ತು ಲಯನೆಸ್ ಕ್ಲಬ್, ಕಂಕನಾಡಿ ಪಡೀಲ್ ವತಿಯಿಂದ ಅಯೋಜಿಸಲಾಗಿತ್ತು.
ಜಿಲ್ಲೆ 317-ಡಿ 5 ನೇ ಪ್ರಾಂತೀಯ ಅಧ್ಯಕ್ಷರಾದ ಲಯನ್ ಚಂದ್ರ ಮೋಹನ್ ಜೆ .ಎಂಜೆಎಫ್ ಇವರ ಧರ್ಮಪತ್ನಿ ಶ್ರೀಮತಿ ಅಶಾ ಚಂದ್ರ ಮೋಹನ್ ಅವರು ದೀಪ ಬೆಳಗಿಸುವ ಮೂಲಕ ಸಮ್ಮೇಳನವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಲಯನ್ ಎಸ್.ಎಮ್ ಐರನ್ ಪಿಎಂಜೆಎಫ್ ಇವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಪ್ರಸಿದ್ಧ ಹಾಸ್ಯ ಭಾಷಣಕಾರ್ತಿ ಶ್ರೀಮತಿ ಸಂಧ್ಯಾ ಶೆಣೈ, ಉಡುಪಿ ಇವರು ತಮ್ಮ ಹಾಸ್ಯಭರಿತ ಮಾತಿನ ಶೈಲಿಯಿಂದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಬರಹಗಾರರು ಹಾಗೂ ಸಮಾಜ ಸೇವಕಿ ರೋಹಿಣಿ ಕುಡುಪು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮ್ಮೇಳನದಲ್ಲಿ ಲಯನ್ಸ್ ಜಿಲ್ಲೆಯ ಸುಮಾರು 600 ಪ್ರತಿನಿಧಿಗಳು ಹಾಗೂ ಪ್ರತಿಷ್ಠಿತ ಲಯನ್ಸ್, ಲಯನೆಸ್ ಅತಿಥಿಗಳು ಹಾಗೂ ಅಮಂತ್ರಿತರು ಭಾಗವಹಿಸಿದ್ದರು.
ಕ್ಲಬಿನ ಕಾರ್ಯಾಚಟುವಟಿಕೆಗಳು :
ಪ್ರಾಂತ್ಯ -5 ರಲ್ಲಿ ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ , ಬಲ್ಮಠ, ಬಿಜೈ. ಅಶೋಕ್ ನಗರ, ವೆಲೆನ್ಸಿಯಾ ಮತ್ತು ಗಾಂಧಿನಗರ ಒಟ್ಟು 6 ಲಯನ್ಸ್ ಕ್ಲಬ್ ಗಳು ಮತ್ತು ಲಯನೆಸ್ ಕ್ಲಬ್, ಕಂಕನಾಡಿ ಪಡೀಲ್ ಮತ್ತು ಅಶೋಕ ನಗರ ಒಟ್ಟು 2 ಲಯನೆಸ್ ಕ್ಲಬ್ ಗಳು ಪ್ರಾಂತೀಯ ಅಧ್ಯಕ್ಷರ ಉತ್ಸಾಹಿ ನಾಯಕತ್ವದಲ್ಲಿ ಮಂಗಳೂರಿನ ಅಸುಪಾಸಿನ ಪ್ರದೇಶದ ಬಡ ಜನರ ಅವಸ್ಯಕತೆಗಳನ್ನು ಪೊರೈಸುತ್ತಾ ಬಂದಿದ್ದು, ಲಯನ್ಸ್ ಜಿಲ್ಲಾ ರಾಜ್ಯಪಾಲರ ಕಾರ್ಯಕ್ರಮಗಳಾದ ಶಿಕ್ಷಣ, ಆರೋಗ್ಯ,, ಮಧುಮೇಹ ರೋಗ ನಿಯಂತ್ರಣ,ನೇತ್ರ ಚಿಕಿತ್ಸೆ ಮತ್ತು ನಿರ್ವಸಿತರಿಗೆ ಮನೆ ನಿರ್ಮಿಸಲು ಆರ್ಥಿಕ ಸಹಾಯ ಇತ್ಯಾದಿಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಈ ವರ್ಷದ ಕಳೆದ 5 ತಿಂಗಳುಗಳಲ್ಲಿ ರೂ 22 ಲಕ್ಷ ಮೌಲ್ಯದ ಸೇವಾ ಚಟುವಟಿಕೆಗಳನ್ನು ಈ 6 ಲಯನ್ಸ್ ಕ್ಲಬ್ ಗಳು ಮತ್ತು 2 ಲಯನೆಸ್ ಕ್ಲಬ್ ಗಳು ನೆರೆವೇರಿಸಿದೆ.
ಇದಲ್ಲದೆ, ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ದಂತ ಚಿಕಿತ್ಸಾ ಶಿಬಿರ, ನೇತ್ರ ಚಿಕಿತ್ಸೆ ಶಿಬಿರಗಳು ಹಾಗೂ ಇನ್ನೂ ಅನೇಕ ಜನಪರ ಸೇವಾ ಚಟುವಟಿಕೆಗಳನ್ನು ನಡೆಸಿವೆ. ಪ್ರಾಂತೀಯ ಸಮ್ಮೇಳನವು ಪ್ರತೀ ವರ್ಷ ನಡೆಯುತ್ತಿದ್ದು ಇದರಲ್ಲಿ ಭಾಗವಹಿಸುವ ಕ್ಲಬ್ ಗಳ ಸದಸ್ಯರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶ ನೀಡಲಾಗುತ್ತಿದೆ. ಅಲ್ಲದೇ ಸಮ್ಮೇಳನದಲ್ಲಿ ಪ್ರಾಂತೀಯ ಹಾಗೂ ವಲಯಾಧ್ಯಕ್ಷರು ಪ್ರತೀ ಕ್ಲಬ್ ಗಳ ಸೇವಾ ಚಟುವಟಿಕೆಗಳ ಮೌಲ್ಯಮಾಪನ ಮಾಡುತ್ತಾರೆ ಎಂದು ಪ್ರಾಂತೀಯ ಅಧ್ಯಕ್ಷರಾದ ಲಯನ್ ಚಂದ್ರ ಮೋಹನ್ ಜೆ .ಎಂಜೆಎಫ್ ಅವರು ಈ ಸಂದರ್ಭದಲ್ಲಿ ಕ್ಲಬಿನ ಕಾರ್ಯಾಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಪ್ರೀತಿಕ ಅವರ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತ್ತು. ಲಯನ್ ವಸಂತ್ ಕುಂದರ್ ಪ್ರಾರ್ಥನೆ ನೆರವೇರಿಸಿದರು. ಲಯನ್ ದೀಪಾಲಿ ಕಂಬದಕೋಣೆ ರಾಷ್ಟ್ರ ಧ್ವಜಾರೋಹಣಗೈದರು. ಲಯನ್ ಎಸ್.ಎಮ್ ಐರನ್ ಪಿಎಂಜೆಎಫ್ ಅತಿಥಿಗಳನ್ನು ಸ್ವಾಗತಿಸಿದರು. ಲಯನ್ ಕೆ.ಸಿ.ಪ್ರಭು ಪಿಎಂಜೆಎಫ್ ಇವರು ಮುಖ್ಯ ಅತಿಥಿ ಸಂಧ್ಯಾ ಶೆಣೈ ಅವರ ಪರಿಚಯ ಪತ್ರ ಓದಿದರು.
ಸಮ್ಮೇಳನದ ಸಾರ್ವಜನಿಕ ಸಂಪರ್ಕಾಧಿಕಾರಿ ಲಯನ್.ಎಂ.ಅಶೋಕ್ ಶೇಟ್ ಎಂಜೆಎಫ್, ಲಯನ್ ಹರೀಶ್ ಕಲ್ಬಾವಿ, ಲಯನ್ ಉಮಾ ಬಿ.ಹೆಗ್ಡೆ, ಲಯನ್ ಹರಿಣಿ ಸಿ.ಶೆಟ್ಟಿ ಎಂಜೆಎಫ್, ಲಯನ್ ಜೂಲಿಯೆಟ್ ಮಸ್ಕರೆನ್ಹಸ್, ಲಯನ್ ಅರುಣ್ ಶೆಟ್ಟಿ ಹಾಗೂ ಈ ಪ್ರಾಂತ್ಯಕ್ಕೆ ಸಂಬಂಧಪಟ್ಟ ವಿವಿಧ ಕ್ಲಬಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಲಯನ್ ಎಂ.ಎಸ್.ಮುರಳಿ ದಾಸ್ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸತೀಶ್ ಸುರತ್ಕಲ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಿತು.

































































