ಕನ್ನಡ ವಾರ್ತೆಗಳು

ಗುರುವಾಯನಕೆರೆ ಸಮೀಪ ದ್ವಿಚಕ್ರ ವಾಹನಗಳ ಮುಖಾಮುಖಿ ಢಿಕ್ಕಿ: ವಿದ್ಯಾರ್ಥಿ ಸಹಿತ ಇಬ್ಬರು ಬಲಿ

Pinterest LinkedIn Tumblr

bike_accdnt_photo_m

ಬೆಳ್ತಂಗಡಿ, ಫೆ.25: ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯ ಪರಿಣಾಮ ಇಬ್ಬರು ಸವಾರರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಗುರುವಾಯನಕರೆ ಸನಿಹ ಮದ್ದಡ್ಕ ವರಕಬೆ ಎಂಬಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.

ಉಜಿರೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ, ಉಜಿರೆ ಅನುಗ್ರಹ ಕಾಲೇಜಿನ ಸನಿಹದ ಗ್ರೇಸಿ ವಿಲ್ಲಾ ನಿವಾಸಿ ಜೋಯೆಲ್ ಸ್ಟೀಫನ್ ಸಿಕ್ವೇರ(20) ಮತ್ತು ಬೆಳ್ತಂಗಡಿಯಲ್ಲಿ ಹೋಟೆಲ್ ಕಾರ್ಮಿಕರಾಗಿದ್ದ ಕುವೆಟ್ಟು ಅನಿಲಡೆ ಮನೆ ನಿವಾಸಿ ಮನೋಹರ್ ಶೆಟ್ಟಿ(35) ಮೃತಪಟ್ಟವರಾಗಿದ್ದಾರೆ.

Tannir_Bavi_accident_1

ಜೋಯೆಲ್ ಸ್ಟೀಫನ್ ಜೊತೆಗೆ ಬೈಕ್‌ನ ಹಿಂಬದಿ ಸವಾರ ಉಜಿರೆ ಕಾಲೇಜಿನ ವಿದ್ಯಾರ್ಥಿ ಉಜಿರೆಯ ಬಡಗೊಟ್ಟು ನಿವಾಸಿ ಸಂದೀಪ್ ಹೊಳ್ಳ(20) ಎಂಬುವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ಉಜಿರೆ ಕಾಲೇಜಿನ ವಾರ್ಷಿಕೋತ್ಸವವಾಗಿತ್ತು. ವಾರ್ಷಿಕೋತ್ಸವ ಮುಗಿಸಿ ರಾತ್ರಿ 11:30ರ ಸುಮಾರಿಗೆ ಜೋಯೆಲ್ ಸಹಪಾಠಿ ಮಿತ್ರ ಕೀರ್ತನ್ ಎಂಬವರನ್ನು ಮದ್ದಡ್ಕದಲ್ಲಿರುವ ಆತನ ಮನೆಗೆ ಬಿಡಲು ಸಂದೀಪ್ ಸೇರಿದಂತೆ ಇನ್ನಿಬ್ಬರು ಗೆಳೆಯರೊಂದಿಗೆ ಎರಡು ಬೈಕ್‌ನಲ್ಲಿ ತೆರಳಿದ್ದರು. ಮದ್ದಡ್ಕದಿಂದ ಹಿಂದಿರುತ್ತಿದ್ದಾಗ ಈ ಅವಘಡ ಸಂಭವಿಸಿದೆ.

Tannir_Bavi_accident_2

 

ಮನೋಹರ ಬೆಳ್ತಂಗಡಿಯ ಹೋಟೆಲೊಂದರಲ್ಲಿ ಕಾರ್ಮಿಕರಾಗಿದ್ದು, ರಾತ್ರಿ ಕೆಲಸ ಮುಗಿಸಿ ತನ್ನ ಎಂ80 ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ಎರಡು ದ್ವಿಚಕ್ರ ವಾಹನಗಳು ಮದ್ದಡ್ಕ ವರಕಬೆ ಬಳಿ ತಲುಪಿದಾಗ ಮುಖಾಮುಖಿ ಢಿಕ್ಕಿ ಹೊಡೆದಿವೆ. ಇದರಿಂದ ಗಂಭೀರ ಗಾಯಗೊಂಡ ಮನೋಹರ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ ಜೋಯೆಲ್‌ರನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಮುಂಜಾವ ಮೃತ ಪಟ್ಟಿದ್ದಾರೆ.

ಕಾಲೇಜಿನ ವಾರ್ಷಿಕೋತ್ಸವ ಮುಗಿದ ಬಳಿಕ ಮದ್ದಡ್ಕ ನಿವಾಸಿ ಸಹಪಾಠಿ ಕೀರ್ತನ್‌ನನ್ನು ಬಿಡಲು ರಾತ್ರಿ ಒಬ್ಬನೇ ಹೋಗುವುದು ಸರಿ ಯಲ್ಲವೆಂದು ಜೋಯೆಲ್ ಮತ್ತು ಗೆಳೆಯರು ಎರಡು ಬೈಕ್‌ನಲ್ಲಿ ನಾಲ್ವರು ಹೊರಟಿದ್ದರು. ಕೀರ್ತನ್‌ನನ್ನು ಮನೆಗೆ ಬಿಟ್ಟು ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮೃತ ಜೋಯೆಲ್ ಜೆರೋಂ ಕ್ಲೆಮೆಂಟ್ ಸಿಕ್ವೇರ ಹಾಗೂ ಶಾಂತಿ ರೂಪಾ ಮೋರಸ್‌ರ ಪ್ರಥಮ ಪುತ್ರ. ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ಸಂದೀಪ್ ಹೊಳ್ಳ ಅವರು ಉಜಿರೆ ಬಡಕೊಟ್ಟು ನಿವಾಸಿ ನಾರಾಯಣ ಹೊಳ್ಳ ಎಂಬವರ ಪುತ್ರ. ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಮನೆಯ ಆಸರೆಯಾಗಿದ್ದ ಮನೋಹರ್ : ಬೆಳ್ತಂಗಡಿಯಲ್ಲಿ ಹೋಟೆಲ್ ಕಾರ್ಮಿಕರಾಗಿದ್ದ ಮನೋಹರ್ ಮನೆಯ ಆಧಾರ ಸ್ತಂಭವಾಗಿದ್ದು, ಅವರ ದುಡಿಮೆಯಿಂದಲೇ ಜೀವನ ಸಾಗುತ್ತಿತ್ತು. ಗೇರುಕಟ್ಟೆ ಸಮೀಪದ ಮಜಲಡ್ಡದ ಪ್ರೇಮಾ ಎಂಬವರನ್ನು ವಿವಾಹ ವಾಗಿರುವ ಇವರಿಗೆ 5 ವರ್ಷ ಪ್ರಾಯದ ಓರ್ವ ಪುತ್ರಿ ಇದ್ದು, 3 ವರ್ಷ ಪ್ರಾಯದ ಓರ್ವ ಪುತ್ರ ವರ್ಷದ ಹಿಂದೆ ಅನಾರೋಗ್ಯದಿಂದ ಮೃತ ಪಟ್ಟಿದ್ದಾನೆ. ಇವರದು ಅತ್ಯಂತ ಬಡಕುಟುಂಬವಾಗಿದ್ದು, ಮನೋಹರ್‌ರ ಅಗಲಿಕೆಯಿಂದ ಈ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ.

Write A Comment