ಕರ್ನಾಟಕ

ಅರಮನೆಗೆ ಹೊಸ ಯುವರಾಜ

Pinterest LinkedIn Tumblr

ara

ಮೈಸೂರು: ಚಿನ್ನದ ಬಣ್ಣದ ಉದ್ದನೆಯ ಕೋಟು, ಕೆಂಪು ಬಣ್ಣದ ಜರಿ ಪೇಟ, ಹರಳಿನ ಹಾರಗಳ ಜತೆಗೆ ಚಿನ್ನದ ತೋಳಬಂದಿ ಧರಿಸಿದ್ದ 22 ವರ್ಷದ ಯದುವೀರ್‌ ಅವರು ‘ಯದುವೀರ್‌ ಶ್ರೀಕೃಷ್ಣದತ್ತ ಚಾಮ­ರಾಜ ಒಡೆಯರ್‌’ ಆಗಿ ಮರುನಾಮಕರಣ­ವಾ­ಗುವ ಮೂಲಕ ಇಲ್ಲಿಯ ಅಂಬಾವಿಲಾಸ ಅರ­ಮನೆಯ ಯುವರಾಜರಾಗಿ ಸೋಮವಾರ ಆಯ್ಕೆಯಾದರು.

ಇದರ ಅಂಗವಾಗಿ ಮಧ್ಯಾಹ್ನ 1.20ರಿಂದ 1.50­ರವರೆಗೆ ಮಿಥುನ ಲಗ್ನದಲ್ಲಿ ಅರಮನೆಯ ಕಲ್ಯಾಣ­ಮಂಟಪದಲ್ಲಿ ವಿಧಿವಿಧಾನಗಳು ನಡೆದವು. ಯದು­ವೀರ್‌ ಅವರ ಹಸ್ತವನ್ನು ರಾಜವಂಶಸ್ಥೆ ಪ್ರಮೋದಾ­ದೇವಿ ಒಡೆಯರ್‌ ಅವರ ಹಸ್ತಕ್ಕೆ ಒಪ್ಪಿಸಲಾಯಿತು. ನಂತರ ಯದುವೀರ್‌ ಅವರನ್ನು ಮಡಿಲಲ್ಲಿ ಕೂಡಿಸಿಕೊಂಡ ಪ್ರಮೋದಾದೇವಿ, ಕಿವಿಯಲ್ಲಿ ‘ಯದುವೀರ್‌ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್‌’  ಎಂದು ಹೇಳುವ ಮೂಲಕ ಪುತ್ರನೆಂದು ಸ್ವೀಕರಿಸಿದರು.

ಆಗ ಕೊಬ್ಬರಿ ಹಾಗೂ ಸಕ್ಕರೆ ಬೆರೆಸಿದ ಸಿಹಿಯನ್ನು ಮಂಟಪದಲ್ಲಿದ್ದವರಿಗೆ, ನಂತರ ನೆರೆದಿದ್ದವರಿಗೆ ವಿತರಿಸ­ಲಾಯಿತು. ಈ ಅಭೂತಪೂರ್ವ ಕಾರ್ಯಕ್ರಮಕ್ಕೆ  ಪ್ರಮೋದಾ­­­ದೇವಿ ಒಡೆಯರ್‌ ಅವರ ತಾಯಿ 91 ವರ್ಷದ ಪುಟ್ಟರತ್ನಮ್ಮಣ್ಣಿ ಸಾಕ್ಷಿಯಾದರು. ಶ್ರೀಕಂಠ­ದತ್ತ ನರಸಿಂಹರಾಜ ಒಡೆಯರ್‌ ಅವರ ನಾಲ್ವರು ಸಹೋದರಿಯರಾದ ಮೀನಾಕ್ಷಿದೇವಿ, ಕಾಮಾಕ್ಷಿದೇವಿ, ಇಂದಿರಾ­ಕ್ಷಿದೇವಿ ಹಾಗೂ ವಿಶಾಲಾಕ್ಷಿದೇವಿ ಅವರು ತೇವ­ಗೊಂಡ ಕಣ್ಣುಗಳನ್ನು ಸೆರಗಿನಿಂದ ಒರೆಸಿ­ಕೊಂ­ಡರು. ದತ್ತು ಸ್ವೀಕಾರದಿಂದ ಅರಮನೆಗೆ ಮತ್ತೆ ‘ರಾಜಕಳೆ’ ಬಂದುದಕ್ಕೋ ಅಥವಾ ಈ ಸಂಭ್ರಮ ಕಣ್ತುಂಬಿ­ಕೊಳ್ಳಲು ತಮ್ಮ ಸಹೋದರ ಶ್ರೀಕಂಠದತ್ತ ನರಸಿಂಹ­ರಾಜ ಒಡೆಯರ್‌ ಇಲ್ಲವಲ್ಲ ಎಂಬ ದುಃಖಕ್ಕೋ ಅಥವಾ ಇವೆರೆಡರ ಸಮ್ಮಿಶ್ರ ಭಾವವೋ ಎಂಬಂತೆ ಕಣ್ಣಾಲಿಗಳು ಒದ್ದೆಯಾಗಿದ್ದವು.

ಈ ಕುರಿತು ‘ನಮ್ಮ ಹಿರಿಯ ಅಕ್ಕ ದಿ. ಗಾಯತ್ರಿದೇವಿ ಮೊಮ್ಮಗ ಯದುವೀರ್‌, ಅರಮನೆ ಉದ್ಧಾರಕ್ಕೆ ರಾಜ­ನಾಗಿ ಬಂದ. ನಮ್ಮ ವಂಶ ಮುಂದುವರಿ­ಯು­ತ್ತದೆ. ಇದನ್ನು ನೋಡಲು ಶ್ರೀಕಂಠಣ್ಣ ಇಲ್ಲ’ ಎನ್ನುವ ಮಾತು­ಗಳನ್ನು ನಾಲ್ವರೂ ಸಹೋದರಿಯರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಯದುವೀರ್‌ ಅವರ ತಾಯಿ ತ್ರಿಪುರಸುಂದರಿದೇವಿ ಮತ್ತು ತಂದೆ ಸ್ವರೂಪ್‌ ಆನಂದ್‌ ಗೋಪಾಲ್‌ರಾಜ್‌ ಅರಸ್‌ ಅವರ ಪರವಾಗಿ, ಯದುವೀರ್‌ ಚಿಕ್ಕಮ್ಮ ಇಂದಿರಾಕ್ಷಿದೇವಿ ಹಾಗೂ ಚಿಕ್ಕಪ್ಪ ರಾಜಾಚಂದ್ರ ರಾಜೇ ಅರಸ್‌ ಅವರು ಅಲಂಕೃತ ಮಂಟಪದಲ್ಲಿ ಕುಳಿತು ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದರು.

ನಂತರ ರಾಜ ಗುರುಗಳಾದ ಬ್ರಹ್ಮತಂತ್ರ ಪರತಂತ್ರ ಪರಕಾಲ ಮಠದ ಗುರುಗಳಾದ ಅಭಿನವ ವಾಗೀಶ ಬ್ರಹ್ಮತಂತ್ರ ಪರಕಾಲ ಸ್ವಾಮೀಜಿಗೆ ಯದುವೀರ್‌ ಅವರು ಪಾದಪೂಜೆ ನೆರವೇರಿಸಿದರು. ಆಮೇಲೆ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್, ಅರ್ಚಕರಾದ ನೀಲಕಂಠ ದೀಕ್ಷಿತ್ ಹಾಗೂ ವಿಶ್ವನಾಥ್‌ ದೀಕ್ಷಿತ್‌, ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ ದೀಕ್ಷಿತ್‌ ಸೇರಿದಂತೆ ಅರಮನೆ ಆವರಣ­ದಲ್ಲಿಯ 13 ದೇವಸ್ಥಾನಗಳ ಅರ್ಚಕರು ಫಲಮಂತ್ರಾ­ಕ್ಷತೆಯನ್ನು ಯದುವೀರ್‌ ಅವರಿಗೆ ಅರ್ಪಿಸಿದರು.

ಆಮೇಲೆ ರಾಜ ಪರಿವಾರದವರು, ಬಂಧುಗಳು ಬೆಲೆ­ಬಾಳುವ ಕಾಣಿಕೆಗಳನ್ನು ಯುವರಾಜರಿಗೆ ನೀಡಿ  ಹಾರೈಸಿ­­ದರು. ಹೀಗೆ, ದಸರಾ ಸಂದರ್ಭದಲ್ಲಿನ ಸಂಭ್ರಮ­ವನ್ನು ನೆನಪಿಸಿದ ಈ ಕಾರ್ಯಕ್ರಮಕ್ಕೆ ಅರಸು ಮನೆತನಕ್ಕೆ ಸಂಬಂಧಿಸಿದ ಬಂಧುಗಳು, ಸಚಿವ­ರಾದ ಅಂಬರೀಷ್‌, ಕೆ.ಜೆ. ಜಾರ್ಜ್, ಶಾಸಕ ವಾಸು, ಮೈಸೂರು ವಿ.ವಿ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಸಾಕ್ಷಿ­ಯಾದರು. ಆಮೇಲೆ ಭೂರಿ ಭೋಜನ ನಡೆಯಿತು. ಸಂಜೆ ಯುವರಾಜರನ್ನು ಹೊತ್ತ ಬೆಳ್ಳಿರಥದ ಮೆರವಣಿಗೆಯು ಆನೆ ಬಾಗಿಲಿನಿಂದ ಹೊರಟು ಬಲರಾಮದ್ವಾರ, ಚಾಮುಂಡಿ ತೊಟ್ಟಿಯಿಂದ ಮತ್ತೆ ಆನೆ ಬಾಗಿಲಿನ ಮೂಲಕ ಅರಮನೆ ಪ್ರವೇಶಿಸಿತು.

ನಸುಕಿನಿಂದಲೇ ಹೋಮ, ಹವನ
‘ದತ್ತು ಸ್ವೀಕಾರ ಮಹೋತ್ಸವ’ ಅಂಗವಾಗಿ ಅರ­ಮನೆಯ ಧರ್ಮಾಧಿಕಾರಿ ಜನಾರ್ದನ ಅಯ್ಯಂ­ಗಾರ್ ನೇತೃತ್ವದಲ್ಲಿ ಸೋಮವಾರ ನಸುಕಿ­ನಿಂದ ಪೂಜೆಗಳು ನಡೆದವು. ಅರಮನೆ ಜೋಯಿಸ ಶ್ಯಾಮ್‌ ರಾಮಸ್ವಾಮಿ ಹಾಜರಿದ್ದರು.

Write A Comment