– ಡಾ. ಎಸ್.ಎಸ್. ವಾಸನ್
ಗೈನೆಕೊಮಾಸ್ಟಿಯಾ ಆನುವಂಶಿಕವಾಗಿಯೂ ಬರಬಹುದು ಅಥವಾ ಕಾಯಿಲೆ, ಕಿಡ್ನಿ ಹಾಗೂ ಲಿವರ್‌ಗೆ ಸಂಬಂಧಿಸಿದ ರೋಗಗಳಿಂದಾಗಿಯೂ ಅಥವಾ ಈ ತೊಂದರೆಗಳಿಗೆ ತೆಗೆದುಕೊಳ್ಳುವ ಔಷಧಿಗಳ ಉಪಪರಿಣಾಮಗಳಿಂದಲೂ ಕಾಣಿಸಿಕೊಳ್ಳಬಹುದು.
ಕೆಲವೊಮ್ಮೆ ದೇಹ ಹುರಿಗೊಳ್ಳಿಸಿಕೊಳ್ಳಲು ಸಂವರ್ಧನಾ ಸ್ಟಿರಾಯ್ಡ್‌ಗಳನ್ನು ತೆಗೆದುಕೊಳ್ಳುವ ಪುರುಷರಲ್ಲಿಯೂ ಈ ಬೆಳವಣಿಗೆಯನ್ನು ಕಾಣಬಹುದು. ಕೆಲವೊಮ್ಮೆ ವೃಷಣಗಳಲ್ಲಿ ಆಗುವ ಗಡ್ಡೆಗಳಿಂದಲೂ ಸ್ತನದಲ್ಲಿ ಬೆಳವಣಿಗೆ ಕಾಣಬಹುದು. ಈ ಗಡ್ಡೆಗಳಿಂದಾಗಿ ಹೆಚ್ಚಿನ ಪ್ರಮಾಣದ ಈಸ್ಟ್ರೋಜನ್ ಉತ್ಪಾದನೆ ಹೆಚ್ಚಾದಾಗ ಇಂಥ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ.
ಆನುವಂಶಿಕವಾಗಿ ಸಾಗುವುದು ಹೇಗೆ?
ಕ್ಲೆನೆಫೆಲ್ಟರ್ಸ್ ಸಿಂಡ್ರೋಮ್ (ಕೆಎಸ್) ಎಂದು ಕರೆಯಲಾಗುವ ಕ್ರೋಮೋಸೋಮ್ ಸಮಸ್ಯೆಯಿಂದ ಈ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ. 650 ಪುರುಷರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ.
ಕೆಎಸ್ ಕ್ರೋಮೋಸೋಮ್ ಇರುವವರಲ್ಲಿ ಒಂದು ಹೆಚ್ಚುವರಿ ಎಕ್ಸ್ ಕ್ರೋಮೋಸೋಮ್ ಇರುತ್ತದೆ. ದೈಹಿಕ ಚಟುವಟಿಕೆಗಳು ನಿರಾತಂಕವಾಗಿ ಸಾಗುವಷ್ಟು ಟೆಸ್ಟ್ರೊಸ್ಟರಾನ್ ಉತ್ಪತ್ತಿಯಾಗದಂತೆ ತಡೆಯುತ್ತದೆ. ಪುರುಷನ ಗುಣಸ್ವರೂಪ ಲಕ್ಷಣಗಳ ಬೆಳವಣಿಗೆಯಲ್ಲಿ ಕುಂಠಿತ ಕಾಣಿಸಿಕೊಳ್ಳುತ್ತವೆ.
ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿಯೂ ವ್ಯತ್ಯಯವಾಗುತ್ತದೆ. ಸಾಮಾನ್ಯವಾಗಿ ಇಂಥ ಪುರುಷರ ವೃಷಣಗಳೂ ಅತಿ ಚಿಕ್ಕ ಗಾತ್ರದ್ದಾಗಿರುತ್ತವೆ. ಸಾಮಾನ್ಯವಾಗಿ ಬಂಜೆತನದಿಂದ ಬಳಲುತ್ತಾರೆ ಹಾಗೂ ಗೈನೆಕೊಮಾಸ್ಟಿಯಾದ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುತ್ತವೆ.
ಔಷಧಿಗಳಿಂದ ಈ ತೊಂದರೆ ಹೇಗೆ ಕಾರಣವಾಗುತ್ತದೆ?
ಸಾಮಾನ್ಯವಾಗಿ ಖಿನ್ನತೆಯ ನಿವಾರಣೆಗೆ ತೆಗೆದುಕೊಳ್ಳುವ ಔಷಧಿಗಳು, ರಕ್ತದ ಏರೊತ್ತಡಕ್ಕಾಗಿ, ವೃಷಣದ ಹಿಗ್ಗುವಿಕೆ, ಟಿ.ಬಿ ಹಾಗೂ ಕೆಲ ಬಗೆಯ ಕೀಮೊಥೆರಪಿಯಿಂದಲೂ ಸ್ತನದಲ್ಲಿ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ.
ಮಿತಿಮೀರಿದ ಔಷಧಿಗಳ ಸೇವನೆ, ಅಲ್ಕೋಹಾಲ್ ಸೇವನೆ, ಮಾದಕ ದ್ರವ್ಯಗಳ ಸೇವನೆಯಿಂದಲೂ ಸ್ತನಗಳ ಗಾತ್ರದಲ್ಲಿ ಹಿಗ್ಗುವಿಕೆ ಕಂಡು ಬರುತ್ತದೆ.
ಕೆಲವು ಪ್ರಕರಣಗಳಲ್ಲಿ ಸಂಗಾತಿಯು ಈಸ್ಟ್ರೋಜನ್ ಕ್ರೀಮ್ ಅಥವಾ ಜೆಲ್ ಅನ್ನು ನಿಯಮಿತವಾಗಿ ಉಪಯೋಗಿಸುತ್ತಿದ್ದರೆ ಅದನ್ನು ಶಿಶ್ನದ ಚರ್ಮವು ಹೀರಿಕೊಂಡರೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಸ್ವಯಂ ಪರೀಕ್ಷೆ
ಗ್ರೇಡ್ 1: ಅತಿ ಸಣ್ಣಪ್ರಮಾಣದ ಹಿಗ್ಗುವಿಕೆ (ನಿಂಬೆ ಗಾತ್ರದ್ದು)
ಗ್ರೇಡ್ 2: ಮಧ್ಯಮ ಗಾತ್ರದ ಹಿಗ್ಗುವಿಕೆ, ಹೆಚ್ಚುವರಿ ಚರ್ಮ ಕಾಣಿಸಿಕೊಳ್ಳದೆ ಇರುವುದು
ಗ್ರೇಡ್3: ಮಧ್ಯಮ ಗಾತ್ರದ ಹಿಗ್ಗುವಿಕೆಯೊಂದಿಗೆ ಚರ್ಮವೂ ಹೆಚ್ಚುವರಿಯಾಗಿ ಕಾಣಿಸಿಕೊಳ್ಳುವುದು
ಗ್ರೇಡ್ 4: ಹೆಚ್ಚುವರಿ ಹಿಗ್ಗುವಿಕೆ, ಹೆಚ್ಚುವರಿ ಚರ್ಮದ ಗೋಚರ. ನೋವಿರುವ ಸ್ತನಗಳಿಗೆ ಮನೆ ಮದ್ದು
ಕೆಲವೊಬ್ಬರಿಗೆ ಸ್ತನಗಳಲ್ಲಿ ನೋವು ಸಹಿತ ಊತ ಕಾಣಿಸಿಕೊಳ್ಳುತ್ತದೆ.
ಆಗ ತಂಪು ಚೀಲಗಳನ್ನು ಒತ್ತುವುದರ ಮೂಲಕ ನೋವು ನಿವಾರಣೆ ಮಾಡಿಕೊಳ್ಳಬಹುದು. ಕುಟುಂಬ ವೈದ್ಯರ ಸಲಹೆಯ ಮೇರೆಗೆ ನೋವು ನಿವಾರಕಗಳನ್ನು ಬಳಸಬಹುದು.
ದೇಹದಾರ್ಡ್ಯಕ್ಕಾಗಿ ಯಾವುದಾದರೂ ಮಾತ್ರೆ, ಔಷಧಿಗಳನ್ನು ಸೇವಿಸುತ್ತಿದ್ದಲ್ಲಿ ಅದನ್ನು ತಕ್ಷಣವೇ ನಿಲ್ಲಿಸಬೇಕು.
ಚಿಕಿತ್ಸೆ
ಒಂದು ವೇಳೆ ಸ್ತನದ ಬೆಳವಣಿಗೆಯಲ್ಲಿ ಅಸಹಜತನ ಕಂಡು ಬಂದರೆ, ಗಮನೀಯವಾಗಿ ಊತದಂತೆ ಕಂಡುಬಂದಲ್ಲಿ, ಅದು ಗಂಡಸರಲ್ಲಿ ಕೀಳರಿಮೆ ಹುಟ್ಟುಹಾಕುತ್ತದೆ. ತರುಣರಂತೂ ಇನ್ನಷ್ಟು ಕುಗ್ಗಿ ಹೋಗುತ್ತಾರೆ.
ಇಂಥ ಪ್ರಕರಣಗಳಲ್ಲಿ ಚಿಕಿತ್ಸೆ ಬೇಕೇಬೇಕು. ಹಾರ್ಮೋನು ಚಿಕಿತ್ಸೆ ನೀಡಿ, ಈಸ್ಟ್ರೋಜನ್ ಉತ್ಪತ್ತಿಯ ಮೇಲೆ ಕಡಿವಾಣ ಹಾಕಬಹುದು.ಸ್ತನಗಳ ಗಾತ್ರವನ್ನು ತಗ್ಗಿಸಲು ಶಸ್ತ್ರಚಿಕಿತ್ಸೆಯನ್ನೂ ಕೈಗೊಳ್ಳಬಹುದು.
ಸ್ತನಗಳ ಗಾತ್ರದ ಬಗ್ಗೆ ಚಿಂತಿತರಾದವರು ನೆನಪಿಡಲೇಬೇಕಾದ ಇನ್ನೊಂದು ಅಂಶವಿದೆ. ಒಂದು ವೇಳೆ ನೋವಿರದಿದ್ದಲ್ಲಿ, ಗಾತ್ರದಿಂದ ಏನೇ ಸಮಸ್ಯೆಗಳು ಕಂಡು ಬರದೇ ಇದ್ದಲ್ಲಿ ಯಾವುದೇ ಬಗೆಯ ಚಿಕಿತ್ಸೆಯ ಅಗತ್ಯವಿಲ್ಲ.
ಗಂಡಸರಲ್ಲಿ ಸ್ತನಕ್ಯಾನ್ಸರ್ ಅತಿ ವಿರಳವಾದ ಸಂಗತಿಯಾಗಿದೆ. ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಂಡರೆ ಸ್ತನ ಕ್ಯಾನ್ಸರ್ ಇರಬಹುದೇ ಎಂದು ಸಂಶಯಿಸಬಹುದಾಗಿದೆ.
*ಒಂದೇ ಬದಿಯ ಸ್ತನದ ಗಾತ್ರದಲ್ಲಿ ಹೆಚ್ಚಳ
*ಸ್ತನಕ್ಕೆ ಅಂಟಿಕೊಂಡಂತೆ ಇರುವ ಗಟ್ಟಿಯಾದ ಗಡ್ಡೆ
*ಸ್ತನದ ಚರ್ಮದಿಂದ ಕೀವಿನಂಥ ಸ್ರಾವ
*ನಿಪ್ಪಲ್‌ನಿಂದ ರಕ್ತ ಸ್ರಾವ.
ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಕುಟುಂಬ ವೈದ್ಯರನ್ನು ಕಾಣುವ ಜರೂರು ಇದೆ ಎಂದೇ ಅರ್ಥ.
ವೈದ್ಯರನ್ನು ಸಂಪರ್ಕಿಸುವುದು ಯಾವಾಗ?
ಇದ್ದಕ್ಕಿದ್ದಂತೆ ಒಂದು ಅಥವಾ ಎರಡೂ ಸ್ತನಗಳಲ್ಲಿ ಊತ, ನೋವು ಅಥವಾ ಹಿಗ್ಗುವಿಕೆ ಕಂಡು ಬಂದರೆ, ನಿಪ್ಪಲ್‌ಗಳಲ್ಲಿ ಕಡುಕಂದು ಬಣ್ಣದ ರಕ್ತ ಸ್ರಾವ ಕಂಡು ಬಂದರೆ, ಎದೆಯ ಬಳಿ ಕೀವಿನಂಥ ಸ್ರಾವ ಅಥವಾ ಗಡ್ಡೆ ಕಂಡು ಬಂದರೆ ವೈದ್ಯರನ್ನು ಕಾಣಲೇಬೇಕು.
ಗಮನಿಸಿ
ಪ್ರೌಢಾವಸ್ಥೆ ತಲುಪದ ಮಕ್ಕಳಲ್ಲಿ ಗೈನೆಕೋಮಾಸ್ಟ್ರಿಯಾ ಲಕ್ಷಣಗಳಿವೆಯೇ ಎಂದು ವೈದ್ಯರು ಯಾವಾಗಲೂ ಪರಿಶೀಲಿಸುತ್ತಿರಬೇಕು.
ಮಾಹಿತಿಗೆ: info@manipalankur.com
99450 48833
