ಕಾನ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ನಾಲ್ಕು ದಿನಗಳ ರಾಷ್ಟ್ರೀಯ ಸಮಾವೇಶ ‘ಮಂಥನ’ ಇಂದಿನಿಂದ ಇಲ್ಲಿನ ರೈಲ್ವೆ ಮೈದಾನದಲ್ಲಿ ಪ್ರಾರಂಭವಾಗಿದೆ.
ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರು ಸಮಾವೇಶಕ್ಕೆ ಚಾಲನೆ ನೀಡಿದರು. ಸಭೆ ನಡೆಯುತ್ತಿರುವ ಮೈದಾನದ ಹೊರಗೆ ಸುತ್ತಲೂ ಪರದೆಯಿಂದ ಮರೆ ಮಾಡಲಾಗಿದೆ. ಹೀಗಾಗಿ ಮುಚ್ಚಿದ ಸಭಾಂಗಣದ ಒಳಗೆ ‘ಮಂಥನ’ ನಡೆಯುತ್ತಿದೆ. ಸಾವಿರಾರು ಗಣವೇಷಧಾರಿಗಳು ‘ಮಂಥನ’ದಲ್ಲಿ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎದುರಿಸಿದ ಸೋಲಿನ ಪರಾಮರ್ಶೆ ಮತ್ತು ಬರಲಿರುವ ಉತ್ತರ ಪ್ರದೇಶ ಮತ್ತು ಬಿಹಾರ ಚುನಾವಣೆಯಲ್ಲಿ ಪಕ್ಷವು ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಈ ಸಮಾವೇಶದಲ್ಲಿ ಪ್ರಮುಖವಾಗಿ ಚಿಂತನ –ಮಂಥನ ನಡೆಯಲಿದೆ.
‘ಇದೊಂದು ಪೂರ್ವಯೋಜಿತ ಸಮಾವೇಶ. ಹೀಗಾಗಿ ಗೋರಖ್‌ಪುರದಿಂದ ಕಾನ್ಪುರದವರೆಗಿನ ಎಲ್ಲ ‘ಆರ್‌ಎಸ್‌ಎಸ್’ ಕಾರ್ಯಕರ್ತರು ಇದರಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸಂಘಟನೆಯ ಮುಖ್ಯಸ್ಥರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಬಿಜೆಪಿ ಮತ್ತು ವಿಎಚ್‌ಪಿಯ ಇತರೆ ಅಂಗಸಂಸ್ಥೆಗಳು ಸಹ ಈ ಸಮಾವೇಶದಲ್ಲಿ ಭಾಗವಹಿಸುತ್ತಿವೆ. ಮೋಹನ್ ಭಾಗವತ್ ಅವರು ಭಜರಂಗದಳ, ದುರ್ಗಾ ವಾಹಿನಿ ಮತ್ತು ಮಜ್ದೂರ್ ಸಂಘದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ‘ವಿಎಚ್‌ಪಿ’ಯ ಅವದ್ ಪ್ರಾಂತ್ಯದ ಕಾರ್ಯದರ್ಶಿ ಬಿಹಾರಿ ಮಿಶ್ರಾ ಹೇಳಿದ್ದಾರೆ.
